ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳದಿಂದ ರಾಜ್ಯದಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಸದ್ಯ ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಪೈನಾನ್ಸ್ ಕಿರುಕುಳಕ್ಕೆ ಮೊದಲ ಆತ್ಮಹತ್ಯೆ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಮೃತ ವ್ಯಕ್ತಿಯನ್ನು ತಾಲೂಕಿನ ಎಚ್.ನಾಗಸಂದ್ರ ಗ್ರಾಮದ ನಿವಾಸಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಎನ್.ಆರ್ ನರಸಿಂಹಯ್ಯ ಎಂದು ತಿಳಿದುಬಂದಿದೆ.
ಇನ್ನು ಮೃತ ವ್ಯಕ್ತಿ ಕೆಲವು ಫೈನಾನ್ಸ್ ಕಂಪನಿಗಳಲ್ಲಿ ಹಣ ಪಡೆದುಕೊಂಡಿದ್ದರು. ಕಂತುಗಳ ರೂಪದಲ್ಲಿ ಹಣ ಕಟ್ಟುತ್ತಿದ್ದರೂ ಮನೆ ಬಾಗಿಲಿಗೆ ಫೈನಾನ್ಸ್ ನವರು ಬಂದು ಹಣವನ್ನು ಕಟ್ಟುವಂತೆ ಪೀಡಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಇನ್ನೂ ಮೃತ ನರಸಿಂಹಯ್ಯ ವೃತ್ತಿಯಲ್ಲಿ ಆಟೋ ಚಾಲಕನಾಗಿ ಸಂಸಾರ ನಡೆಸುತ್ತಿದ್ದನು, ಫೈನಾನ್ಸ್ ಕಿರುಕುಳಕ್ಕೆ ಆಟೋ ಸಹ ಎರಡು ಮೂರು ಬಾರಿ ಒತ್ತೆ ಇಟ್ಟು ಹಣವನ್ನು ಕಟ್ಟಿದ್ದರು ಎನ್ನಲಾಗಿದೆ. ಆದರೆ, ಕೆಲ ಫೈನಾನ್ಸ್ ಗಳಿಗೆ ಹಣ ಕಟ್ಟಲು ಹಣ ಇಲ್ಲದ ಕಾರಣ, ಮನೆಯಲ್ಲಿ ಸಾಲ ಪಡೆದುಕೊಂಡು ಬರುತ್ತೇನೆ ಎಂದು ತಿಳಿಸಿ ಇಂದು ಬೆಳಗ್ಗೆ 6:00 ಸಮಯದಲ್ಲಿ ಮನೆಯಿಂದ ಹೊರಬಂದಿದ್ದಾರೆ.
ಇನ್ನು ಎಷ್ಟೊತ್ತಾದರೂ ಮನೆಗೆ ಪತಿ ಬಾರದ ಹಿನ್ನೆಲೆ ಗ್ರಾಮದ ಸುತ್ತಮುತ್ತ ಪತ್ನಿ ಪ್ರಭಾವತಿ ಹುಡುಕಾಡಿದ್ದು, ನಂತರ ನಾಗಸಂದ್ರದಿಂದ ಇಡುಗೂರು ಕಡೆಗೆ ಹೋಗುವ ರಸ್ತೆಯ ತಮ್ಮ ಹೊಲದ ಕಡೆ ಹುಡುಕುತ್ತಾ ಬಂದ ಪತ್ನಿ ಪ್ರಭಾವತಿಗೆ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತಿ ಕಂಡುಬಂದಿರುವುದಾಗಿ ತಿಳಿದು ಬಂದಿದೆ.
ಕೂಡಲೇ ಮೃತ ವ್ಯಕ್ತಿಯ ಅಣ್ಣ-ತಮ್ಮಂದಿರಿಗೆ ಮಾಹಿತಿಯನ್ನು ನೀಡಿದ್ದು, ಸ್ಥಳಕ್ಕೆ ಬಂದು ನೋಡಿದಾಗ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಇನ್ನು ನರಸಿಂಹಯ್ಯ ತಿಂಗಳಿಗೆ 15,000 ಗಳನ್ನು ಸಾಲದ ಕಂತುಗಳಿಗೆ ಕಟ್ಟುತ್ತಿದ್ದರು. ಹಗಲು ರಾತ್ರಿ ಎನ್ನದೆ ಫೈನಾನ್ಸ್ ನವರು ಮನೆ ಬಳಿ ಬಂದು ಹಣ ಕಟ್ಟಲೇಬೇಕೆಂದು ಬಿಡಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಠಾಣೆಯ ಪಿಎಸ್ಐ ರಮೇಶ್ ಗುಗ್ಗುರಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.