ಮೇ.28ರಂದು ನೂತನ ಸಂಸತ್ ಭವನ ಲೋಕಾರ್ಪಣೆ: ಸಮಾರಂಭಕ್ಕೆ ರಾಷ್ಟ್ರಪತಿಗೆ ಇಲ್ಲ ಆಹ್ವಾನ: ಸಮಾರಂಭವನ್ನು ಬಹಿಷ್ಕಾರಿಸಿದ ಕಾಂಗ್ರೆಸ್ ಸೇರಿ 19 ವಿರೋಧ ಪಕ್ಷಗಳು: ಸಂಸತ್ತು ಅಹಂಕಾರದ ಇಟ್ಟಿಗೆಗಳಿಂದ ಮಾಡಲ್ಪಟ್ಟಿಲ್ಲ: ಸಾಂವಿಧಾನಿಕ ಮೌಲ್ಯಗಳಿಂದ ಕೂಡಿದೆ- ರಾಹುಲ್ ಗಾಂಧಿ

ನೂತನ ಸಂಸತ್ ಭವನ ಕಟ್ಟಡವನ್ನು ಉದ್ಘಾಟನೆ ಮಾಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಆಹ್ವಾನ ನೀಡಿದ್ದಾರೆ. ಈ ಹಿನ್ನೆಲೆ ಇದೇ ಭಾನುವಾರ ಮೇ.28 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನ ಕಟ್ಟಡವನ್ನು ಉದ್ಘಾಟನೆ ಮಾಡಲಿದ್ದಾರೆ.

ನೂತನ ಸಂಸತ್ ಭವನ ಕಟ್ಟಡವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಏಕೆ ಉದ್ಘಾಟನೆ ಮಾಡಬೇಕು ಅನ್ನೋದು ವಿಪಕ್ಷಗಳ ಪ್ರಶ್ನೆ ಮಾಡಿ, ಕಾಂಗ್ರೆಸ್ ಸೇರಿದಂತೆ 19 ವಿರೋಧ ಪಕ್ಷಗಳು ನೂತನ ಸಂಸತ್ ಭವನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವನ್ನು ಬಹಿಷ್ಕರಿಸಲು ನಿರ್ಧರಿಸಿವೆ.

ನೂತನ ಸಂಸತ್ ಭವನ ಕಟ್ಟಡ ಉದ್ಘಾಟನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಮಾಡಿಸದೇ ಇರೋದು ಹಾಗೂ ರಾಷ್ಟ್ರಪತಿಗಳಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡದೇ ಇರೋದು ಈ ದೇಶದ ಅತಿ ದೊಡ್ಡ ಸಾಂವಿಧಾನಿಕ ಹುದ್ದೆಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ರಾಷ್ಟ್ರಪತಿಗಳನ್ನು ಸಂಸತ್ತಿನ ಉದ್ಘಾಟನೆಗೆ ಅಥವಾ ಸಮಾರಂಭಕ್ಕೆ ಆಹ್ವಾನಿಸದಿರುವುದು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಮಾಡಿದ ಅವಮಾನ. ಸಂಸತ್ತು ಅಹಂಕಾರದ ಇಟ್ಟಿಗೆಗಳಿಂದ ಮಾಡಲ್ಪಟ್ಟಿಲ್ಲ, ಆದರೆ ಸಾಂವಿಧಾನಿಕ ಮೌಲ್ಯಗಳಿಂದ ಕೂಡಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ರಾಷ್ಟ್ರಪತಿಗಳು ಸಂಸತ್‌ನ ಅವಿಭಾಜ್ಯ ಅಂಗ. ಹೀಗಾಗಿ, ನೂತನ ಸಂಸತ್ ಭವನವನ್ನು ರಾಷ್ಟ್ರಪತಿಗಳು ಉದ್ಘಾಟನೆ ಮಾಡಬೇಕು, ಪ್ರಧಾನ ಮಂತ್ರಿ ಅಲ್ಲ ಅನ್ನೋದು ವಿರೋಧ ಪಕ್ಷಗಳ ನಿಲುವು.

ಯಾವ ಪಕ್ಷಗಳಿಂದ ಬಹಿಷ್ಕಾರ

ಕಾಂಗ್ರೆಸ್, ಡಿಎಂಕೆ, ಟಿಎಂಸಿ, ಎಎಪಿ, ಶಿವಸೇನಾ (ಯುಬಿಟಿ), ಸಮಾಜವಾದಿ ಪಕ್ಷ (ಎಸ್‌ಪಿ), ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ), ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ಕೇರಳ ಕಾಂಗ್ರೆಸ್ (ಮಣಿ), ವಿಡುತ್ತಲೈ ಚಿರುತೈಗಲ್ ಕಚ್ಚಿ (ವಿಸಿಕೆ), ರಾಷ್ಟ್ರೀಯ ಲೋಕ ದಳ (ಆರ್‌ಜೆಡಿ), ಜೆಡಿಯು, ಎನ್‌ಸಿಪಿ, ಸಿಪಿಎಂ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್), ನ್ಯಾಷನಲ್ ಕಾನ್ಫರೆನ್ಸ್, ರೆವೊಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ (ಆರ್‌ಎಸ್‌ಪಿ) ಮತ್ತು ಎಂಡಿಎಂಕೆ ಕಾರ್ಯಕ್ರಮ ಬಹಿಷ್ಕರಿಸಿದ 19 ವಿಪಕ್ಷಗಳಾಗಿವೆ.

Leave a Reply

Your email address will not be published. Required fields are marked *