ಮೇ.10ರಂದು ನಡೆಯುವ ಮತದಾನಕ್ಕೆ ಮತಗಟ್ಟೆ ಸಜ್ಜು: ಚುನಾವಣಾಧಿಕಾರಿ ತೇಜಸ್ ಕುಮಾರ್

ಮೇ.10ರಂದು ನಡೆಯಲಿರುವ ಮತದಾನಕ್ಕಾಗಿ ಮತಗಟ್ಟೆಗಳನ್ನ ಸಜ್ಜುಗೊಳಿಸಲಾಗಿದೆ ಎಂಬ ಮಾಹಿತಿ ಮತದಾರರಿಗೆ ತಿಳಿಸುವ ಉದ್ದೇಶದಿಂದ

ಏ.29 ರಿಂದ ಏ.30ರವರೆಗೆ ಎರಡು ದಿನಗಳು 180-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ 276 ಮತಗಟ್ಟೆಗಳನ್ನು ಮತದಾರರ ಮುಕ್ತ ಪರಿಶೀಲನೆಗೆ ಅವಕಾಶ ಕಲ್ಪಿಸಿದ್ದು, ಈ ಕಾರ್ಯಕ್ರಮದ ಭಾಗವಾಗಿ ಈ ದಿನ ಎಲ್ಲಾ 276 ಮತಗಟ್ಟೆಗಳ ಮೇಲೆ ಚುನಾವಣಾ ಆಯೋಗದ ಧ್ವಜವನ್ನು ಹಾರಿಸಿಲಾಗಿದ್ದು, ಮತದಾರರಿಗೆ ಮತಗಟ್ಟೆ ಗುರುತಿಸಲು ಮತ್ತು ಮತಗಟ್ಟೆಗಳಲ್ಲಿ ಒದಗಿಸಲಾದ ಶೌಚಾಲಯ, ನೀರಿನ ವ್ಯವಸ್ಥೆ, ವಿಶೇಷ ಚೇತರಿಗೆ ನೀಡಿರುವ ವ್ಯವಸ್ಥೆಗಳ ಪರಿಶೀಲನೆ ಮಾಡಬಹುದಾಗಿದೆ ಎಂದು ಚುನಾವಣಾಧಿಕಾರಿ ತೇಜಸ್ ಕುಮಾರ್ ಹೇಳಿಕೆ.

ತಾಲ್ಲೂಕು ಸ್ವೀಪ್ ಸಮಿತಿ ಮತ್ತು ನಗರಸಭೆ ಸಹಯೋಗದಲ್ಲಿ ನಗರಸಭೆ ವ್ಯಾಪ್ತಿಯ ಮುತ್ಸಂದ್ರ ಸರ್ಕಾರಿ ಶಾಲೆಯಲ್ಲಿ ‘ನಮ್ಮ ನಡೆ ಮತಗಟ್ಟೆ ಕಡೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೇ.10ರಂದು ನಡೆಯುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲಾ ಮತದಾರರು ಕಡ್ಡಾಯವಾಗಿ ಮತದಾನ ಮಾಡಲು ಅನುಕೂಲವಾಗುವಂತೆ ಮತಗಟ್ಟೆಗಳಿಗೆ ಮೂಲಭೂತ ಸೌಲಭ್ಯ, ಶುದ್ಧ ಕುಡಿಯುವ ನೀರು, ಶೌಚಾಲಯ, ವಿಶೇಷಚೇತರಿಗೆ ವೀಲ್ಹ್ ಚೇರ್ ಇತ್ಯಾದಿಗಳನ್ನು ಕಲ್ಪಿಸಲಾಗಿದ್ದು, ಎಲ್ಲಾ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಭಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಲು ಚುನಾವಣಾಧಿಕಾರಿಗಳು ಮತದಾರರಲ್ಲಿ ಮನವಿ ಮಾಡಿದರು.

ನಂತರ ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷರಾದ ಶ್ರೀನಾಥಗೌಡ ಮಾತನಾಡಿ, ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಮತದಾನವಾಗುವ ನಿಟ್ಟಿನಲ್ಲಿ ಎಲ್ಲಾ ಮತಗಟ್ಟೆ ವ್ಯಾಪ್ತಿಯಲ್ಲಿ ಈಗಾಗಲೇ ಮತದಾನ ಜಾಗೃತಿ ಜಾಥಾ, ಪಂಜಿನ ಮೆರವಣಿಗೆ, ರಂಗೋಲಿ ಸ್ಪರ್ಧೆ, ಬೈಕ್ ಜಾಥಾ, ವಾಹನಗಳ ಮೂಲಕ ಜಾಗೃತಿ ಗೀತೆಗಳು ಒಳಗೊಂಡು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಾಲಾಗಿದೆ.

ಎಲ್ಲಾ ಮತದಾರರು ತಮ್ಮ ಜವಾಬ್ಧಾರಿಯನ್ನು ತಿಳಿದುಕೊಂಡು ಕಡ್ಡಾಯವಾಗಿ ಮತದಾನ ಮಾಡಬೇಕಾಗಿದ್ದು, ಮತದಾರರನ್ನು ಮತಗಟ್ಟೆ ಕಡೆ ಸೆಳೆಯುವ ಉದ್ದೇಶದಿಂದ ಗ್ರಾಮೀಣ ಭಾಗದಲ್ಲಿ 05 ಮತ್ತು ನಗರ ವ್ಯಾಪ್ತಿಯಲ್ಲಿ 04 ಮತಗಟ್ಟೆಗಳನ್ನು ಸಖಿ, ಮಾದರಿ, ವಿಶೇಷಚೇತನರ ಮತಗಟ್ಟೆಗಳನ್ನು ಸ್ಥಾಪಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಚುನಾವಣಾಧಿಕಾರಿಗಳು ಪ್ರತಿಜ್ಞೆ ವಿಧಿಯನ್ನು ಬೋಧಿಸಿ, ನಗರವ್ಯಾಪ್ತಿಯ 31 ವಾರ್ಡ್ ಗಳನ್ನು ಮತದಾನ ಜಾಗೃತಿ ಮೂಡಿಸುವ ವಾಹನಗಳಿಗೆ ಮತ್ತು ಮತದಾನದ ಕುರಿತಾಗಿ ಚುನಾವಣಾ ಆಯೋಗದ ವಿಡಿಯೋ ಮಾಹಿತಿ ಒಳಗೊಂಡ ವಾಹನಗಳಿಗೆ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತರಾದ ಶಿವಶಂಕರ್, ನಗರಸಭೆ ಆರ್. ಐ ಪ್ರವೀಣ್, ಆಂಜನೇಯ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶ್ರೀಕಾಂತ್, ಬಿ.ಎಲ್. ಓ ಗಳು, ಶಿಕ್ಷಕರು ಮತ್ತು ಮುತ್ಸಂದ್ರ ಮತಗಟ್ಟೆಯ ಮತದಾರರು ಹಾಜರಾಗಿದ್ದರು.

Leave a Reply

Your email address will not be published. Required fields are marked *