ಜಿಲ್ಲಾದ್ಯಂತ ಕನಿಷ್ಠ ಬೆಂಬಲ ಬೆಲೆ (MSP) ಯೋಜನೆಯಡಿ ರೈತರಿಂದ ರಾಗಿ ಖರೀದಿಯನ್ನ ಮಾಡಲಾಗುತ್ತಿದೆ. ಈಗಾಗಲೇ ನೋಂದಾಯಿತ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಗೋದಾಮುಗಳಿಗೆ ಬರುತ್ತಿದ್ದಾರೆ. ಇದರಿಂದ ಕಿಲೋ ಮೀಟರ್ ಗಟ್ಟಲೆ ರಾಗಿ ಮೂಟೆ ಹೊತ್ತ ಟ್ರ್ಯಾಕ್ಟರ್ ಗಳು ಸಾಲುಗಟ್ಟಿ ನಿಂತಿವೆ. ಈ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಮೋಹನಕುಮಾರಿ ರೈತರ ಸಮಸ್ಯೆಗಳನ್ನ ಆಲಿಸಿದರು.
ದೊಡ್ಡಬಳ್ಳಾಪುರ ತಾಲೂಕಿನ ಗುಂಡಮಗೆರೆ ಕ್ರಾಸ್ ಬಳಿಯ ಕರ್ನಾಟಕ ರಾಜ್ಯ ಉಗ್ರಣ ನಿಗಮದ ಗೋದಾಮುಗಳಲ್ಲಿ ರೈತರಿಂದ ಖರೀದಿ ಮಾಡಿದ ರಾಗಿಯನ್ನ ದಾಸ್ತಾನು ಮಾಡಲಾಗುತ್ತಿದೆ. ತಾಲೂಕಿನ ರೈತರು ಸೇರಿದಂತೆ ನೆಲಮಂಗದ ರೈತರು ಸಹ ರಾಗಿ ದಾಸ್ತಾನು ಮಾಡಲು ದೊಡ್ಡಬಳ್ಳಾಪುರಕ್ಕೆ ಬರುತ್ತಿದ್ದಾರೆ, ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬರುತ್ತಿರುವುದರಿಂದ ದಟ್ಟನೆ ಉಂಟಾಗಿದೆ.
ರಾಗಿ ದಾಸ್ತಾನು ಮಾಡಲು ರೈತರು ಎರಡರಿಂದ ಮೂರು ದಿನ ಕಾಯಬೇಕಾದ ಪರಿಸ್ಥಿತಿ ಇದೆ. ಇತ್ತೀಚೆಗೆ ಜಿಲ್ಲಾಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು, ರೈತರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನ ಕಲ್ಪಿಸುವಂತೆ ಮತ್ತು ಕಾರ್ಮಿಕರ ಸಂಖ್ಯೆ ಹೆಚ್ಚಿಸುವಂತೆ ಸೂಚನೆ ಸಹ ನೀಡಿದ್ದರು.
ತಹಶೀಲ್ದಾರ್ ಮೋಹನಕುಮಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು, ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ಸೂಚನೆಯಂತೆ ರಾಗಿ ದಾಸ್ತಾನು ಮಾಡಲು 50ಕ್ಕೂ ಹೆಚ್ಚು ಕಾರ್ಮಿಕರನ್ನ ತೆಗೆದುಕೊಳ್ಳಲಾಗಿದೆ, ಹೆಚ್ಚಿನ ರೈತರು ಬಂದಲ್ಲಿ ಇನ್ನೂ 30ಕ್ಕೂ ಹೆಚ್ಚು ಕಾರ್ಮಿಕರನ್ನ ತೆಗೆದು ಕೊಳ್ಳಲಾಗುವುದು ಎಂದರು.
ಸದ್ಯ 8 ಕೇಂದ್ರಗಳಲ್ಲಿ ರಾಗಿ ಖರೀದಿ ಪ್ರಕ್ರಿಯೆ ನಡೆಯುತ್ತಿದೆ, ದಿನಕ್ಕೆ 300 ರೈತರಿಂದ ರಾಗಿ ಖರೀದಿಯ ದಾಸ್ತಾನು ಮಾಡಲಾಗುತ್ತಿದೆ. ರೈತರಲ್ಲಿ ಮನವಿ ಮಾಡಿಕೊಂಡ ಅವರು ರೈತರು ನೋಂದಾಣಿ ಮಾಡಿಕೊಂಡ ದಿನದಂದ್ದು ರಾಗಿ ಖರೀದಿ ಕೇಂದ್ರಕ್ಕೆ ಬರುವ ದಿನಾಂಕವನ್ನು ನೀಡಲಾಗಿದೆ ಆ ದಿನಾಂಕದಂದೇ ರಾಗಿ ಖರೀದಿ ಕೇಂದ್ರಕ್ಕೆ ಬರಬೇಕು ಎಂದು ಮನವಿ ಮಾಡಿದರು.
ಎಲ್ಲಾ ರೈತರು ಒಮ್ಮಲೇ ಬರುತ್ತಿರುವುದರಿಂದ ದಟ್ಟನೆ ಉಂಟಾಗುತ್ತಿದೆ. ರಾಗಿ ಖರೀದಿಗೆ ಮಾರ್ಚ್ 31ರ ವರೆಗೂ ಸಮಯ ಇರುವುದರಿಂದ ರೈತರು ಸಾವದಾನದಿಂದ ವರ್ತಿಸಬೇಕೆಂದು ಮನವಿ ಮಾಡಿದರು. ಇನ್ನೂ ರಾಗಿ ಖರೀದಿ ಉಳಿಕೆ ಇದ್ದರೆ ಮೇ ಕೊನೆ ದಿನದವರೆಗೂ ರಾಗಿ ಖರೀದಿಸಲು ಸರ್ಕಾರ ಚಿಂತನೆ ನಡೆಸಲಿದೆ. ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ, ಎಲ್ಲಾ ರೈತರಿಂದ ರಾಗಿ ಖರೀದಿ ಮಾಡಲಾಗುತ್ತದೆ ಎಂದರು.
ರೈತರಿಗೆ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ದೀಪ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅಧಿಕಾರಿಗಳಿಗೆ ಸೂಚನೆ ಮಾಡಲಾಗಿದೆ ಎಂದು ತಿಳಿಸಿದರು.