ಕನ್ನಡ ರಂಗಭೂಮಿಯಿಂದ ಚಲನಚಿತ್ರ ರಂಗಕ್ಕೆ ಬಂದ ಬಹುಮುಖಿ ಪ್ರತಿಭೆಯ ಮೇರು ಕಲಾವಿದ ಡಾ.ರಾಜ್ ಕುಮಾರ್ ಆಗಿದ್ದಾರೆ. ಕನ್ನಡ ಚಲನಚಿತ್ರ ನಟರಾಗಿ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದ ಅವರು ಗಾಯಕರಾಗಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಹೋಬಳಿ ಘಟಕ ಕೋಶಾಧ್ಯಕ್ಷ ಜಿ.ಸುರೇಶ್ ತಿಳಿಸಿದರು.
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ.ರಾಜ್ ಕುಮಾರ್ ಕಲಾ ಮಂದಿರದಲ್ಲಿ ನಡೆದ ಡಾ.ರಾಜ್ ಕುಮಾರ್ ಜನ್ಮದಿನಾಚರಣೆಯನ್ನು ಕನ್ನಡ ಅಭಿಮಾನ ದಿನವನ್ನಾಗಿ ಆಚರಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಡಾ.ರಾಜ್ ಕುಮಾರ್ ಕನ್ನಡಿಗರ ಮೇಲೆ ಬೀರಿದ ಪ್ರಭಾವ ಅಪಾರವಾಗಿದೆ. ಚಲನಚಿತ್ರಗಳಲ್ಲಿ ನಿರ್ವಹಿಸಿದ ಪಾತ್ರಗಳು ವೈವಿಧ್ಯಮಯವಾಗಿವೆ. ಜನಸಾಮಾನ್ಯರ ಬದುಕಿಗೆ ಸ್ಪಂದಿಸುವ ಅವರ ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಬಹುಕಾಲ ಉಳಿಯುವಂತಾಯಿತು. ಕನ್ನಡ ನಾಡು ನುಡಿಯ ವಿಚಾರದಲ್ಲೂ ಡಾ.ರಾಜ್ ಕುಮಾರ್ ಮುಂಚೂಣಿಯಲ್ಲಿದ್ದರು ಎಂಬುದಕ್ಕೆ ಗೋಕಾಕ್ ಚಳುವಳಿ ಸಾಕ್ಷಿಯಾಗಿದೆ ಎಂದರು.
ಕನ್ನಡ ನಾಡಿನ ಸಾಂಸ್ಕೃತಿಕ ನಾಯಕರಾಗಿರುವ ಡಾ.ರಾಜ್ ಕುಮಾರ್ ಅವರ ವ್ಯಕ್ತಿತ್ವ ಮತ್ತು ಕಲಾ ಪ್ರತಿಭೆ ಒಂದು ವಿಶ್ವವಿದ್ಯಾಲಯವಿದ್ದಂತೆ. ಅಭಿಮಾನಿಗಳನ್ನು ದೇವರೆಂದು, ನಿರ್ಮಾಪಕರನ್ನು ಅನ್ನದಾತರೆಂದು ಕರೆಯುವ ಮೂಲಕ ಸರಳ ಮತ್ತು ಸಜ್ಜನಿಕೆಗೆ ಹೆಸರಾಗಿದ್ದರು. ಇಂತಹ ಮೇರು ವ್ಯಕ್ತಿಗೆ ಭಾರತರತ್ನ ಪುರಸ್ಕಾರ ದೊರೆಯದಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್ ಮಾತನಾಡಿ, ಡಾ.ರಾಜ್ ಕುಮಾರ್ ತಾವು ಅಭಿನಯ ಮಾಡುವ ಪಾತ್ರಗಳಿಗೆ ಸಾಕಷ್ಟು ಪೂರ್ವ ಸಿದ್ಧತೆ ಮಾಡುತ್ತಿದ್ದರು ಎಂಬ ವಿಚಾರ ಗಮನಾರ್ಹವಾಗಿದೆ. ಮೊದಲು ಕಲಿಕೆ ನಂತರ ಅಭಿನಯ ಮಾಡುತ್ತಿದ್ದರು. ಅವರು ಕನ್ನಡ ಚಿತ್ರರಂಗಕ್ಕೆ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ನಟನೆ ಮತ್ತು ಗಾಯನದ ಮೂಲಕ ಕನ್ನಡ ಚಿತ್ರರಂಗವನ್ನು ಉನ್ನತಮಟ್ಟಕ್ಕೆ ಏರಿಸಿದರು. ಇದು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡುವ ವ್ಯಕ್ತಿಗಳಿಗೆ ದಾರಿದೀಪವಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾ ಮಹಾದೇವ್ ಮಾತನಾಡಿ, ಡಾ.ರಾಜ್ ಕುಮಾರ್ ಅವರು ಅಭಿನಯಿಸಿದ ಪಾತ್ರಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿವೆ. ಸಾಮಾಜಿಕ ಕಳಕಳಿ, ಆದರ್ಶ ವ್ಯಕ್ತಿತ್ವ, ನೀತಿ, ಪರೋಪಕಾರ, ಸರಳತೆ, ಸಜ್ಜನಿಕೆಯ ಪಾತ್ರಗಳು ಪ್ರೇಕ್ಷಕರ ಮನಸ್ಸು ಪರಿವರ್ತನೆಯಲ್ಲೂ ಪ್ರಮುಖ ಪಾತ್ರವಹಿಸಿವೆ. ಅಮೇರಿಕಾದ ಪ್ರತಿಷ್ಟಿತ ಕೆಂಟಕಿ ಕರ್ನಲ್ ಪ್ರಶಸ್ತಿ ಪುರಸ್ಕಾರ ಪಾತ್ರವಾಗಿರುವ ಏಕೈಕ ಭಾರತೀಯ ಕಲಾವಿದರಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಕವಯತ್ರಿ ಆಶಾಗುಡ್ಡದಹಳ್ಳಿ ಮಾತನಾಡಿ, ಡಾ.ರಾಜ್ ಕುಮಾರ್ ಅವರು ಕನ್ನಡ ಅಸ್ಮಿತೆಯಾಗಿದ್ದಾರೆ. ಕನ್ನಡ ಸಾಹಿತ್ಯದ ಹಲವಾರು ದಾಸರು, ಶರಣರು, ಪೌರಾಣಿಕ, ಸಾಮಾಜಿಕ ಕಥನಗಳು ಡಾ.ರಾಜ್ ಕುಮಾರ್ ಅಭಿನಯದ ಮೂಲಕ ಕನ್ನಡ ಸಾಹಿತ್ಯವು ಜನರಿಗೆ ತಲುಪಿತು. ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಡಾ.ರಾಜ್ ಕುಮಾರ್ ಅವರು ಕನ್ನಡ ಅಭಿಮಾನಕ್ಕೆ ಸದಾ ಸ್ಪೂರ್ತಿ ಆಗಿದ್ದಾರೆ ಎಂದರು.
ಕನ್ನಡ ಅಭಿಮಾನ ದಿನ ಕಾರ್ಯಕ್ರಮದಲ್ಲಿ ಕನ್ನಡ ಹಿರಿಯ ಹೋರಾಟಗಾರ ಡಿ.ಎಲ್.ಚೌಡಪ್ಪ, ಮುಖ್ಯಶಿಕ್ಷಕ ಕೆ.ವಿ.ವೆಂಕಟರೆಡ್ಡಿ, ಕನ್ನಡಪರ ಹೋರಾಟಗಾರ ಗುರುರಾಜಪ್ಪ, ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಕೋಶಾಧ್ಯಕ್ಷ. ಸಾ.ಲ.ಕಮಲನಾಥ್, ಗೌರವ ಕಾರ್ಯದರ್ಶಿ ಎ.ಜಯರಾಮ್, ಸಂಘಟನಾ ಕಾರ್ಯದರ್ಶಿ ಆರ್.ಗೋವಿಂದರಾಜು, ಚಿಕ್ಕತುಮಕೂರು ಮುನಿರಾಜು, ನವೋದಯ ವಿದ್ಯಾಲಯ ನಿವೃತ್ತ ಅಧ್ಯಾಪಕ ವಿ.ಎಸ್.ಹೆಗಡೆ, ಕನ್ನಡ ಜಾಗೃತ ವೇದಿಕೆ ಅಧ್ಯಕ್ಷ ನಾಗರಾಜು, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಪಿ.ಎ.ವೆಂಕಟೇಶ್, ಬಾಶೆಟ್ಟಿ ಪ್ರೇರಣಾ ಸಂಸ್ಥೆಯ ನೇತ್ರಾವತಿ, ಮುನಿರತ್ನಮ್ಮ, ದರ್ಗಾಜೋಗಿಹಳ್ಳಿಮಲ್ಲೇಶ್, ಷಫೀರ್, ಕಲಾವಿದ ಹಿತೇಶ್ ಮೊದಲಾದವರು ಭಾಗವಹಿಸಿದ್ದರು.