ಮೆಡಿಕವರ್ ಆಸ್ಪತ್ರೆಯಲ್ಲಿ ಸಂಜೆ ಓಪಿಡಿ ಸೇವೆಗೆ ಡಾ. ಅನಂತ್ ನಾಗ್ ಚಾಲನೆ

ಬೆಂಗಳೂರು : ಮೆಡಿಕವರ್ ಆಸ್ಪತ್ರೆ, ಬೆಂಗಳೂರಿನಲ್ಲಿ ಇಂದಿನಿಂದ ಹೊಸದಾಗಿ ಪ್ರಾರಂಭಿಸಲಾದ ಸಂಜೆ ಓಪಿಡಿ ಸೇವೆಗೆ ಹಿರಿಯ ನಟ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಡಾ. ಅನಂತ್ ನಾಗ್ ಅವರು ದೀಪ ಬೆಳಗಿ ಅಧಿಕೃತವಾಗಿ ಚಾಲನೆ ನೀಡಿದರು.

ಮೆಡಿಕವರ್ ಆಸ್ಪತ್ರೆಯಲ್ಲಿ ಈಗ ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಸಂಜೆ 5 ರಿಂದ 8 ಗಂಟೆಯವರೆಗೆ ವಿವಿಧ ವಿಭಾಗಗಳ ತಜ್ಞ ವೈದ್ಯರಿಂದ ಒಪಿಡಿ ಸೇವೆ ನೀಡಲಿದ್ದು, ಈ ಸೇವೆಯ ಮುಖ್ಯ ಉದ್ದೇಶವಾಗಿದ್ದು ಉದ್ಯೋಗಸ್ಥರು, ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರು ಹಗಲಿನಲ್ಲಿ ಆಸ್ಪತ್ರೆಗೆ ಬರುವ ಸಮಯವಿಲ್ಲದ ಸಂದರ್ಭದಲ್ಲಿ ಆರೋಗ್ಯ ಸೇವೆ ಪಡೆಯಲು ಅನುಕೂಲವಾಗುತ್ತದೆ.

ಸಂಜೆ ಓಪಿಡಿಯಲ್ಲಿ ಲಭ್ಯವಿರುವ ತಜ್ಞರು:
· ಮಕ್ಕಳ ತಜ್ಞರು (ಪೀಡಿಯಾಟ್ರಿಕ್ಸ್)
· ಜನರಲ್ ಮೆಡಿಸಿನ್ ತಜ್ಞರು
· ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು
· ಮೂಳೆ ಮತ್ತು ಸಂಧ್ಯಸ್ಥಿ ತಜ್ಞರು (ಆರ್ಥೋಪೆಡಿಕ್ಸ್)
· ಶಸ್ತ್ರಚಿಕಿತ್ಸಾ ತಜ್ಞರು (ಜನರಲ್ ಸರ್ಜನ್)

ಕಾರ್ಯಕ್ರಮದಲ್ಲಿ ಮೆಡಿಕವರ್ ಆಸ್ಪತ್ರೆಯ ಕರ್ನಾಟಕ ಮತ್ತು ಮಹಾರಾಷ್ಟ್ರದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ನೀರಜ್ ಲಾಲ್, ಹಾಗೂ ಆಸ್ಪತ್ರೆಯ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಅವರು ಉಪಸ್ಥಿತರಿದ್ದರು. ಅಲ್ಲದೇ ಆಸ್ಪತ್ರೆಯ ಎಲ್ಲಾ ವಿಭಾಗದ ತಜ್ಞ ವೈದ್ಯರು, ಇಲಾಖಾ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಡಾ. ಅನಂತ್ ನಾಗ್ ಅವರಿಗೆ ಮೆಡಿಕವರ್ ಆಸ್ಪತ್ರೆಯ ವತಿಯಿಂದ ಪದ್ಮಭೂಷಣ ಪುರಸ್ಕಾರ ಪಡೆದ ಹಿನ್ನೆಲೆಯಲ್ಲಿ ವಿಶೇಷ ಅಭಿನಂದನೆಗಳು ಸಲ್ಲಿಸಲಾಯಿತು. ಅವರು ತಮ್ಮ ಭಾಷಣದಲ್ಲಿ, “ಆರೋಗ್ಯ ಸೇವೆಗಳು ಜನಸಾಮಾನ್ಯರಿಗೆ ಹೆಚ್ಚಿನ ಸಮಯದಲ್ಲಿ ಲಭ್ಯವಿರುವುದು
ನಿಜವಾಗಿಯೂ ಶ್ಲಾಘನೀಯ. ಮೆಡಿಕವರ್ ಆಸ್ಪತ್ರೆಯ ಈ ಕಾರ್ಯ ಅತ್ಯಂತ ಉದಾತ್ತ ಮತ್ತು ಜನಪರ.” ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!