ಮೂಲಭೂತ ಸೌಕರ್ಯಗಳಿಲ್ಲದೇ ನಲುಗುತ್ತಿರುವ ನಾರಸಿಂಹನಹಳ್ಳಿ: ಗ್ರಾಮ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ: ಗ್ರಾಮಸ್ಥರ ಆಕ್ರೋಶ

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ತೂಬಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾರಸಿಂಹನಹಳ್ಳಿ ಗ್ರಾಮ ಸಂಪೂರ್ಣ ನೀರಿನಲ್ಲಿ ಮುಳುಗಿದೆ, ಇನ್ನು ರಸ್ತೆಗಳೆಲ್ಲ ಗುಂಡಿಮಯವಾಗಿವೆ. ಚರಂಡಿಗಳು ತುಂಬಿ ತುಳುಕುತ್ತಿವೆ, ಶುದ್ಧ ನೀರಿನ ಘಟಕ ಕೆಟ್ಟುನಿಂತಿದೆ. ಬೀದಿ ದೀಪಗಳು ಬೆಳಕು ನೀಡದೇ ಮಂಕಾಗಿವೆ. ಒಟ್ಟಿನಲ್ಲಿ ಈ ಗ್ರಾಮ ಮೂಲಭೂತ ಸೌಕರ್ಯಗಳಿಲ್ಲದೇ ಸೊರಗುತ್ತಿದೆ.

ಗ್ರಾಮಕ್ಕೆ ಮೂಲಭೂತ ಸವಲತ್ತುಗಳನ್ನು ಒದಗಿಸಿ ಅಭಿವೃದ್ಧಿ ಮಾಡುವಲ್ಲಿ ಗ್ರಾಮ ಪಂಚಾಯಿತಿ ಸಂಪೂರ್ಣ ವಿಫಲವಾಗಿದೆ. ಜನಪ್ರತಿನಿಧಿಗಳು ಜನರಿಂದ ಮತ ಪಡೆದು ಫುಲ್ ಜಾಲಿಯಾಗಿದ್ದಾರೆ.

ಈ ಗ್ರಾಮ ಗ್ರಾಮ ಪಂಚಾಯಿತಿಗೆ ಕೂಗಳತೆ ದೂರದಲ್ಲಿದೆ. ಗ್ರಾಮದಲ್ಲಿ ಸುಮಾರು 80 ಕುಟುಂಬಗಳಿದ್ದು, 600ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಈ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕರ್ತವ್ಯ ಗ್ರಾಮ‌ ಪಂಚಾಯಿತಿಗೆ ಇದೆ. ಆದರೆ, ಈಗಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಾವ ಸಮಸ್ಯೆಗೂ ಸ್ಪಂಧಿಸುವುದಿಲ್ಲ ಎಂದು ಇಲ್ಲಿನ ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮದಲ್ಲಿ ಶುದ್ಧಕುಡಿಯುವ ನೀರಿನ‌ ಘಟಕ ಸ್ಥಗಿತಗೊಂಡು ಹಲವು ತಿಂಗಳುಗಳೇ ಕಳೆದಿವೆ. ಕುಡಿಯುವ ನೀರು ಇಲ್ಲದೇ ಜನ ಪರದಾಡುತ್ತಿದ್ದಾರೆ. ಸ್ವಚ್ಛತೆಯಿಲ್ಲದ ಕಾರಣ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸೊಳ್ಳೆಗಳ ಕಡಿತದಿಂದ ಸುಮಾರು 8-10 ಜನಕ್ಕೆ ಡೆಂಗ್ಯೂ ಜ್ವರ ಬಂದಿದೆ. ಗ್ರಾಮದ ಜನ ಜೀವನಗಳ ಜೊತೆ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳು ಚೆಲ್ಲಾಟವಾಡುತ್ತಿದ್ದಾರೆ. ಈಗಲಾದರೂ ಎಚ್ಚೆತ್ತು ಗ್ರಾಮಕ್ಕೆ ಮೂಲಭೂತ ಸವಲತ್ತುಗಳನ್ನು ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *