
ಇದು ತಾಲ್ಲೂಕಿನ ರೈತರೇ ಓಡಾಡುವ ಪ್ರಮುಖ ರಸ್ತೆ, ನಿತ್ಯ ವಿದ್ಯಾರ್ಥಿಗಳು, ಸಾರ್ವಜನಿಕರು ಸಂಚರಿಸಲು ಇರುವ ಏಕೈಕ ಮಾರ್ಗ. ಸಾಸಲು, ಆರೂಢಿ ಭಾಗದ ಜನತೆಯ ಜೀವನಾಡಿ ಇದ್ದಂತೆ. ಅಂತಹ ರಸ್ತೆಯ ದೊಡ್ಡಹಳ್ಳ ಸಮೀಪದಿಂದ ಗುಂಡಮಗೆರೆ-ಹೊಸಹಳ್ಳಿ ಮಾರ್ಗವಾಗಿ ಹಲವು ದಶಕಗಳ ನಂತರ ಡಾಂಬರು ಕೆಲಸ ನಡೆಯುತ್ತಿದೆ. ಆದರೆ ಗುತ್ತಿಗೆದಾರ ಕಾರನಾಳ ಅಶ್ವಥನಾರಾಯಣ ಅವಾಂತರಕ್ಕೆ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಕಾಮಗಾರಿ ಬೇಗ ಮುಗಿಸುವಂತೆ ಹೇಳಿದ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ ಎಇಇ ಪುರುಷೋತ್ತಮ ಅವರಿಗೂ ಡೋಂಟ್ ಕೇರ್ ಎಂಬಂತೆ ದುರಂಹಕಾರದಿಂದ ಉತ್ತರ ನೀಡಿದ್ದಾರೆ.

ರಸ್ತೆಯ ಅಧ್ವಾನದ ಕುರಿತು ವರದಿ ಮಾಡಲು ಪಬ್ಲಿಕ್ ಮಿರ್ಚಿ ಸಂಪದಾಕರು ಗುತ್ತಿಗೆದಾರ ಕಾರನಾಳ ಅಶ್ವಥನಾರಾಯಣಗೆ ದೂರುವಾಣಿ ಕರೆ ಮಾಡಿ ‘ಈ ರಸ್ತೆ ಕಾಮಗಾರಿ ಇಷ್ಟು ನಿಧಾನವಾಗಿ ನಡೆಯುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಪಘಾತಗಳು ಆಗುತ್ತಿವೆ ಎಂದು ಸಾರ್ವಜನಿಕರ ಪರ ಕಳಕಳಿ ವ್ಯಕ್ತಪಡಿಸಿದರೆ, ಗುತ್ತಿಗೆದಾರ ನೀನ್ಯಾರು ಕೇಳಲಿಕ್ಕೆ, ನನ್ನತ್ರ
ದುಡ್ಡಿಲ್ಲ, ದುಡ್ಡು ಬಂದಾಗ ಮಾಡುತ್ತೇನೆ ಎಂದು ದರ್ಪ ಮೆರೆದಿದ್ದಾನೆ.

ಇನ್ನು ದಿನಾಂಕ 24-10-2025ರಂದು ಕಾಮಗಾರಿ ಪ್ರಾರಂಭ ಮಾಡಲಾಗಿದ್ದು, ಇದೂವರೆಗೂ ಮುಕ್ತಾಯಗೊಳಿಸದೇ ಮೀನಾಮೇಷ ಎಣಿಸಲಾಗುತ್ತಿದೆ…
ಗುತ್ತಿಗೆದಾರ ಕಾಮಗಾರಿ ಪೂರ್ಣಗೊಳಿಸದ ಕಾರಣ ರಸ್ತೆಯಲ್ಲಿ ಓಡಾಡುವ ವಾಹನ ಸವಾರರು ಧೂಳು ಕುಡಿದು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅಪಘಾತಗಳು ಸಂಭವಿಸುತ್ತಿವೆ. ಮೇಲಾಗಿ ರಸ್ತೆ ಅಕ್ಕಪಕ್ಕದ ಹೊಲಗಳ ಬೆಳೆಗಳಿಗೆ ಸಮಸ್ಯೆ ಎದುರಾಗಿದೆ ಎಂದು ಹೊಸಹಳ್ಳಿ ಗ್ರಾಮಸ್ಥರು ಗುತ್ತಿಗೆದಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಗುಂಡಮಗೆರೆ ರಸ್ತೆಯ ಬಂಡಿಹಳ್ಳದಿಂದ ಹೊಸಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆ(3.70KM) ಸಂಪೂರ್ಣ ಗುಂಡಿ ಬಿದ್ದು ಹಾಳಾಗಿತ್ತು. ಈ ಭಾಗದ ಜನರ ಅನುಕೂಲಕ್ಕಾಗಿ ಕೆಲವು ತಿಂಗಳ ಹಿಂದೆ ರಸ್ತೆ ದುರಸ್ತಿ ಕಾಮಗಾರಿ ಪ್ರಾರಂಭ ಮಾಡಲಾಗಿತ್ತು. ರಸ್ತೆಗೆ ಜಲ್ಲಿಕಲ್ಲು ಹಾಕಲಾಗಿದೆ ಅಷ್ಟೇ. ಸಂಪೂರ್ಣವಾಗಿ ಕೆಲಸ ಪೂರ್ಣಗೊಳಿಸಲು ಗುತ್ತಿಗೆದಾರ ಹಿಂದೇಟು ಹಾಕುತ್ತಿರುವುದರಿಂದ ಕಾಮಗಾರಿ ನೆನಗುದಿಗೆ ಬಿದ್ದಿದೆ. ಇದರಿಂದಾಗಿ ಈ ರಸ್ತೆಯ ಇಕ್ಕೆಲಗಳಲ್ಲಿರುವ ಹೊಲಗಳು, ಈ ರಸ್ತೆಯಲ್ಲಿ ಪ್ರತಿನಿತ್ಯ ಓಡಾಡುವ ವಾಹನ ಸವಾರರು ನರಕಯಾತನೆ ಅನುಭವಿಸಲಾಗುತ್ತಿದೆ…
ಈ ರಸ್ತೆ ಕಾಮಗಾರಿ ಪ್ರಾರಂಭವಾದಗಿನಿಂದಲೂ ಇದೂವರೆಗೂ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದೆ. ಪ್ರತಿನಿತ್ಯ ಒಂದಾದರೂ ಅಪಘಾತಗಳು ಸಂಭವಿಸುತ್ತಿವೆ.

ಈ ಕುರಿತು ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ.ಲಕ್ಷ್ಮೀಪತಿ ಪ್ರತಿಕ್ರಿಯಿಸಿ, ಗುತ್ತಿಗೆದಾರ ದರ್ಪ ಮೆರೆದಿದ್ದರೆ ನಾವು ಖಂಡಿಸುತ್ತೇವೆ. ಸರ್ಕಾರ ಹಣ ಕೊಟ್ಟಿಲ್ಲ ಅಂತಾ ಹೇಳಬಾರದು, ಕಾಮಗಾರಿ ಪೂರ್ಣಗೊಂಡ ನಂತರ ಸರ್ಕಾರ ಹಣ ಬಿಡುಗಡೆ ಮಾಡೋದು. ಕಾಮಗಾರಿ ವಿಳಂಬಕ್ಕೆ ಸಕಾರಣ ನೀಡಬೇಕೆ ಹೊರೆತು ದುರಾಹಂಕಾರ ಮಾತುಗಳನ್ನಾಡುವುದು ಸರಿಯಲ್ಲ ಎಂದು ಹೇಳಿದರು….
ಇಂತಹ ದುರಾಹಂಕಾರಿ, ಬೆಜವಾಬ್ದಾರಿ, ನಿರ್ಲಕ್ಷ್ಯ ವಹಿಸುತ್ತಿರುವ ಗುತ್ತಿಗೆದಾರ ಕಾರನಾಳ ಅಶ್ವಥನಾರಾಯಣ ವಿರುದ್ಧ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ.