ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ ತಂದೆಗೆ ಮಗನಿಂದಲೇ ಕಿಡ್ನಿ ದಾನ: ಫೋರ್ಟಿಸ್‌ ಆಸ್ಪತ್ರೆಯಲ್ಲಿ ರೋಬೋಟ್‌ ಸಹಾಯದಿಂದ ಯಶಸ್ವಿ ಕಿಡ್ನಿ ಕಸಿ

ಬೆಂಗಳೂರು: ಕೊನೆಹಂತದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ 61 ವರ್ಷದ ತನ್ನ ತಂದೆಗೆ ಸ್ವತಃ ಮಗನೇ ತನ್ನ ಒಂದು ಕಿಡ್ನಿಯನ್ನು ದಾನ ಮಾಡುವ ಮೂಲಕ ಯಶಸ್ವಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಕನ್ನಿಂಗ್‌ಹ್ಯಾಮ್‌ ರಸ್ತೆ ಫೋರ್ಟಿಸ್‌ ಆಸ್ಪತ್ರೆಯ ವೈದ್ಯರ ತಂಡ ರೋಬೋಟಿಕ್‌ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಫೋರ್ಟಿಸ್‌ ಆಸ್ಪತ್ರೆಯ ಮೂತ್ರಶಾಸ್ತ್ರ, ಯುರೋ-ಆಂಕೊಲಾಜಿ, ಕಿಡ್ನಿ ಟ್ರಾನ್ಸ್‌ಪ್ಲಾಂಟ್, ಮತ್ತು ರೊಬೊಟಿಕ್ ಸರ್ಜರಿ ನಿರ್ದೇಶಕರಾದ ಡಾ.ಮೋಹನ್ ಕೇಶವಮೂರ್ತಿ, ಆಫ್ರಿಕಾ ಮೂಲದ 61 ವರ್ಷದ ಬೆನ್ಸನ್ ಎಂಬುವವರು ಸ್ವತಃ ವೈದ್ಯರಾಗಿದ್ದು. 6-7 ತಿಂಗಳಿಂದ ಕೊನೆಯ ಹಂತದ ಮೂತ್ರಪಿಂಡ ಕಾಯಿಲೆ (ESRD)ಗೆ ತುತ್ತಾಗಿದ್ದಾರೆ, ಅಷ್ಟೇ ಅಲ್ಲದೆ, ಇವರು ೧೩೦ ಕೆ.ಜಿ. ತೂಕ ಹೊಂದಿದ್ದರಿಂದ ಸ್ಥೂಲಕಾಯತೆಯಿಂದಲೂ ಬಳಲುತ್ತಿದ್ದರು. ತನ್ನ ವಿಫಲವಾದ ಮೂತ್ರಪಿಂಡದ ಕಾರ್ಯವನ್ನು ನಿರ್ವಹಿಸಲು ನಿಯಮಿತ ಹಿಮೋಡಯಾಲಿಸಿಸ್ ಅನ್ನು ಅವಲಂಬಿಸಿದ್ದರು. ಅಧಿಕ ರಕ್ತದೊತ್ತಡವು ಇವರ ಆರೋಗ್ಯ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತ್ತು. ಹಲವು ದೇಶಗಳಾದ್ಯಂತ ಅನೇಕ ಆಸ್ಪತ್ರೆಗಳಿಗೆ ತೆರಳಿದರೂ ಇವರ ಸ್ಥೂಲಕಾಯತೆಯಿಂದ ಮೂತ್ರಪಿಂಡದ ಕಸಿ ಅಸಾಧ್ಯವೆಂದು ಆಸ್ಪತ್ರೆಗಳು ನಿರಾಕರಿಸಿದ್ದವು. ಬಳಿಕ ಅವರು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು. ಬಳಿಕ ಅವರನ್ನು ಸಂಪೂರ್ಣವಾಗಿ ವೈದ್ಯಕೀಯ ಮೌಲ್ಯಮಾಪನ ನಡೆಸಿ, ಅವರಿಗೆ ರೋಬೋಟ್‌ ನೆರವಿನಿಂದ ಮಾತ್ರ ಕಿಡ್ನಿ ಕಸಿ ಮಾಡಲು ಸಾಧ್ಯವೆಂದು ತಿಳಿಯಿತು. ಅವರ 23 ವರ್ಷದ ಮಗ ತನ್ನ ಆರೋಗ್ಯವಂತ ಕಿಡ್ನಿಯನ್ನೇ ದಾನ ಮಾಡುವುದಾಗಿ ಮುಂದಾದರು. ತಂದೆ ಹಾಗೂ ಮಗನ ಕಿಡ್ನಿ ಹೊಂದಾಣಿಯಾದ ಕಾರಣ ರೋಬೋಟ್‌ ಸಹಾಯದಿಂದ ಕಸಿ ಮಾಡಲಾಯಿತು ಎಂದು ವಿವರಿಸಿದರು.

ಫೋರ್ಟಿಸ್ ಆಸ್ಪತ್ರೆಯ ಮೂತ್ರಶಾಸ್ತ್ರ, ಯುರೋ-ಆಂಕೊಲಾಜಿ, ಆಂಡ್ರಾಲಜಿ, ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಮತ್ತು ರೊಬೊಟಿಕ್ ಸರ್ಜರಿ ಹೆಚ್ಚುವರಿ ನಿರ್ದೇಶಕ ಡಾ. ಶಾಕಿರ್ ತಬ್ರೇಜ್ ಮಾತನಾಡಿ, ರೋಗಿಯ ಸ್ಥೂಲಕಾಯತೆ, ಅಧಿಕ ರಕ್ತದೊತ್ತಡ ಹಾಗೂ ದೀರ್ಘಕಾಲದಿಂದ ನಡೆಸಿದ ಡಯಾಲಿಸಿಸ್‌ ಶಸ್ತ್ರಚಿಕಿತ್ಸೆಗೆ ಸವಾಲಾಗಿತ್ತು. ಆದರೆ, ರೋಬೋಟ್‌ ಸಹಾಯದಿಂದ 3D ದೃಶ್ಯೀಕರಣದ ಮೂಖೇನ ನಿಖರ ಛೇದನ ಹಾಗೂ ಕಸಿ ಮಾಡಲು ಸಾಧ್ಯವಾಯಿತು. ತೆರೆದ ಕಸಿ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ, ರೋಬೋಟಿಕ್‌ ಸಹಾಯದಿಂದ ನಡೆಸುವ ಶಸ್ತ್ರಚಿಕಿತ್ಸೆ ಹೆಚ್ಚು ಸುರಕ್ಷಿತ, ಕಡಿಮೆ ರಕ್ತದ ನಷ್ಟ ಹಾಗೂ ವೇಗವಾಗಿ ಚೇತರಿಕೆಗೆ ಸಹಕಾರಿಯಾಗಲಿದೆ, ಜೊತೆಗೆ, ದೀರ್ಘಕಾಲೀನ ತೊಡಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಸುಮಾರು ಎರಡೂವರೆ ಗಂಟೆಗಳ ಕಾಲ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಇದಾದ 72 ಗಂಟೆಗಳಲ್ಲಿ ಅವರ ಮೂತ್ರಪಿಂಡದ ಕಾರ್ಯವು ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು, ಅವರ ಕ್ರಿಯೇಟಿನೈನ್ ಮಟ್ಟವು ಸ್ಥಿರವಾಗಿತ್ತು ಎಂದು ವಿವರಿಸಿದರು.

ಈ ವೇಳೆ ಮಾತನಾಡಿದ ರೋಗಿ ಡಾ. ಬೆನ್ಸನ್, ಕೊನೆ ಹಂತದ ಮೂತ್ರಪಿಂಡದ ವೈಫಲ್ಯಕ್ಕೆ ಸೂಕ್ತರೀತಿಯಲ್ಲಿ ಮಾರ್ಗದರ್ಶನ ನೀಡಿ, ರೋಬೋಟ್‌ ಸಹಾಯದಿಂದ ಕಸಿ ಮಾಡಿದ ಎಲ್ಲಾ ವೈದ್ಯರಿಗೂ ನಾನು ಕೃತಜ್ಞನಾಗಿದ್ದೇನೆ. ಎಲ್ಲಿಯೂ ನನಗೆ ಚಿಕಿತ್ಸೆ ಸಿಗುವ ಭರವಸೆ ಸಿಗಲಿಲ್ಲ, ಆದರೆ ಇಲ್ಲಿ, ನನ್ನ ದೈಹಿಕ ಸ್ಥಿತಿ ತಿಳಿದಿದ್ದರೂ ಸೂಕ್ತ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಕಸಿ ನಡೆಸಿದರು. ಈ ವೈದ್ಯರು ಜೀವನದಲ್ಲಿ ನನಗೆ ಎರಡನೇ ಅವಕಾಶ ನೀಡಿದ್ದಾರೆ. ನನಗಾಗಿ ಕಿಡ್ನಿ ದಾನ ಮಾಡಿದ ಮಗನ ಔದಾರ್ಯಕ್ಕೆ ನಾನು ಸದಾ ಋಣಿ ಎಂದು ಹೇಳಿದರು.

Leave a Reply

Your email address will not be published. Required fields are marked *