ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ನ.29 ರಂದು ಪಂಚರತ್ನ ರಥಯಾತ್ರೆ ಆಗಮನದ ಹಿನ್ನೆಲೆಯಲ್ಲಿ ಭಾನುವಾರ ತಾಲೂಕಿನ ಎಲ್ಲಾ ಜೆಡಿಎಸ್ ಮುಖಂಡರು ಎಲ್ಲಾ ಮುನಿಸು, ಕೋಪಗಳನ್ನು ಮರೆತು ಜಂಟಿ ಪತ್ರಿಕಾಗೋಷ್ಠಿ ನೆರವೇರಿಸಿ ಒಗ್ಗಟ್ಟು ಪ್ರದರ್ಶನ ಮಾಡಿದರು. ಈ ವೇಳೆ ಜೆಡಿಎಸ್ ಮುಖಂಡ ಬಿ.ಮುನೇಗೌಡ ಮಾತನಾಡಿ, ತಾಲೂಕಿನ ಹಿರಿಯ ಮುಖಂಡ ಎಚ್.ಅಪ್ಪಯ್ಯಣ್ಣ ನೇತೃತ್ವದಲ್ಲಿ ಪಕ್ಷ ಸಂಘಟನೆ ಮಾಡಲಿದ್ದೇವೆ. ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಯುವ ನಾಯಕರಾದ ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಕೂಡ ಪಂಚರತ್ನ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದರು. ಎಲ್ಲ ಪಕ್ಷದಲ್ಲಿ ಇರುವಂತೆ ನಮ್ಮಲ್ಲೂ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇರುವುದು ಸಹಜ. ಇದೆಲ್ಲವನ್ನೂ ಮರೆತು ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ಜಿಲ್ಲೆಯ ಮಾರ್ಯಾದೆ ಉಳಿಸಬೇಕು. ಕುಮಾರಣ್ಣನ ಗೌರವ ಉಳಿಸಬೇಕು ಎಂದು ಮನವಿ ಮಾಡಿದರು.
ದೊಡ್ಡಬಳ್ಳಾಪುರ ವಿಧಾನಸಭೆ ಕ್ಷೇತ್ರದಿಂದ ಯಾರೇ ಅಭ್ಯರ್ಥಿಯಾದರೂ ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು. ಜೊತೆಗೆ ಜಿಲ್ಲೆಯ ಗೌರವ ಉಳಿಸುವುದು ನಮ್ಮಲ್ಲರ ಜವಾಬ್ದಾರಿ ಎಂದು ಹೇಳಿದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಮಾತನಾಡಿ, ಪಂಚರತ್ನ ಯಾತ್ರೆ ಐತಿಹಾಸಿಕ ಕಾರ್ಯಕ್ರಮ. ತಾಲೂಕು ಹಾಗೂ ರಾಜ್ಯದಲ್ಲಿ ಜೆಡಿಎಸ್ ದೀಪವಿದ್ದಂತೆ. ದೀಪದಿಂದ ಬೆಳಕನ್ನಷ್ಟೇ ಪಡೆದು ಬೆಂಕಿಯನ್ನು ಬಿಡಬೇಕು. ಜೆಡಿಎಸ್ ಅಧಿಕಾರಕ್ಕೆ ಬಂದರೆ ಸಾಮಾನ್ಯ ಕಾರ್ಯಕರ್ತರಿಗೆ ಅಧಿಕಾರ ಸಿಗುವುದಿಲ್ಲ ಎಂಬ ಕಪ್ಪುಚುಕ್ಕೆಯನ್ನು ದೀಪದ ಬೆಳಕಿನಲ್ಲಿ ಹೋಗಲಾಡಿಸಬೇಕು ಎಂದು ಹೇಳಿದರು.
ಎಲ್ಲ ಪಕ್ಷದಲ್ಲಿರುವಂತೆ ನಮ್ಮಲ್ಲೂ ಸಣ್ಣ ಪುಟ್ಟ ಸಮಸ್ಯೆ, ಗೊಂದಲಗಳಿವೆ. ನಮ್ಮಲ್ಲಿ ಸಮಸ್ಯೆ ಬಗೆಹರಿಸಲು ಬೆಂಗಳೂರಿನಲ್ಲೇ ಹೈಕಮಾಂಡ್ ಇದೆ. ಆದರೆ, ರಾಷ್ಟ್ರೀಯ ಪಕ್ಷಗಳು ಪ್ರತಿ ವಿಚಾರಕ್ಕೂ ದೆಹಲಿಗೆ ಓಡಬೇಕು. ಇದು ನಮ್ಮ ಪ್ರಾದೇಶಿಕ ಪಕ್ಷದ ಬಲ ಎಂದು ಅಭಿಪ್ರಾಯಪಟ್ಟರು. ತಾಲೂಕಿನ ಐದೂ ಹೋಬಳಿಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಪಕ್ಷ ಸಂಘಟನೆಗೆ ಶ್ರಮಿಸಬೇಕು. ಪಂಚರತ್ನ ಯಾತ್ರೆಗೆ ಎಲ್ಲರೂ ಸ್ವಯಂಪ್ರೇರಿತರಾಗಿ ಭಾಗವಹಿಸಿ ಪಕ್ಷದ ಗೌರವ ಉಳಿಸಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ಹಿರಿಯ ಮುಖಂಡ ಹಾಗೂ ಬಮೂಲ್ ಮಾಜಿ ಅಧ್ಯಕ್ಷ ಎಚ್.ಅಪ್ಪಯ್ಯಣ್ಣ ಮಾತನಾಡಿ, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಕುಮಾರಸ್ವಾಮಿಯವರು ಯಾರಿಗೆ ಬಿ.ಫಾರಂ ಕೊಡುತ್ತಾರೆ ಅವರನ್ನು ಗೆಲ್ಲಿಸಬೇಕೆಂಬ ಉದ್ದೇಶದಿಂದ ಎಲ್ಲರು ಒಗ್ಗಟ್ಟಾಗಿದ್ದೇವೆ. ಇದು ಕೇವಲ ಪಂಚರತ್ನ ಕಾರ್ಯಕ್ರಮಕ್ಕಾಗಿ ಒಂದಾಗಿರುವುದಲ್ಲ. ಶಾಶ್ವತವಾಗಿ ಒಂದಾಗಿರುತ್ತೇವೆ ಎಂದರು. ಮಾಜಿ ಸಿಎಂ ಕುಮಾರಣ್ಣ ಅವರು ಪ್ರತಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರವಾಸ ಮಾಡಿ, ಅಂತಿಮವಾಗಿ ಕನಸವಾಡಿಯಲ್ಲಿ ಬಹಿರಂಗ ಸಭೆ ನಡೆಸಲಿದ್ದಾರೆ ಎಂದು ಹೇಳಿದರು.
ತಾಲೂಕಿನ ಹೊರಗಿನವರಿಗೆ ಟಿಕೆಟ್ ಕೊಟ್ಟರೆ ಈ ಬಾರಿಯೂ ಸೋಲು:
ಪತ್ರಿಕಾಗೋಷ್ಠಿಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ ಎಲ್ಲಾ ಟಿಕೆಟ್ ಆಕಾಂಕ್ಷಿಗಳು ಪತ್ರಿಕಾಗೋಷ್ಟಿ ಬಳಿಕ ತಮ್ಮ ವರಸೆ ಬದಲಿಸಿದರು. ಈ ಬಾರಿ ಚುನಾವಣೆಯಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಜೆಡಿಎಸ್ ಮುಖಂಡ ಹುಸ್ಕೂರು ಆನಂದ್ ಮಾತನಾಡಿ ಬಿ.ಮುನೇಗೌಡರ ವೈಫಲ್ಯದಿಂದ ಪಕ್ಷದ ಕಾರ್ಯಕರ್ತರಿಗೆ ತುಂಬಾ ನೋವಾಗಿದೆ. ಕಳೆದ ಚುನಾವಣೆಯಲ್ಲಿ ದೊಡ್ಡಬೆಳವಂಗಲ ಹೋಬಳಿಯಲ್ಲಿ ಊರು-ಊರು ತಿರುಗಿ ಹೆಚ್ಚಿನ ಲೀಡ್ ಕೊಟ್ಟಿದ್ದೆ. ಒಂದು ದಿನವೂ ಮುನೇಗೌಡ ಕಾರ್ಯಕರ್ತರನ್ನು ಮಾತನಾಡಿಸಿಲ್ಲ.
ಪಂಚರತ್ನ ಯಾತ್ರೆಯ ರೂಟ್ ಮ್ಯಾಪ್‌ನಲ್ಲಿ ತಯಾರಿಕೆಯಲ್ಲಿಯೂ ಹಸ್ತಕ್ಷೇಪ ಮಾಡಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಬಿ.ಮುನೇಗೌಡರಿಗೆ ಟಿಕೆಟ್ ನೀಡದರೆ ಮತ್ತೊಮ್ಮೆ ಸೋಲುವುದು ಖಚಿತ ಎಂದರು. ತಾಲೂಕಿನಲ್ಲಿರುವ ನಾಯಕರಿಗೆ ಟಿಕೆಟ್ ನೀಡಿ ಎಂದರು.
ಪತ್ರಿಕಾಗೋಷ್ಠೀಯಲ್ಲಿ ರಾಜ್ಯ ಕಾರ್ಯದರ್ಶಿ ಡಾ.ವಿಜಯಕುಮಾರ್, ತಾಲೂಕು ಅಧ್ಯಕ್ಷ ಲಕ್ಷ್ಮೀಪತಯ್ಯ, ನಗರಸಭಾ ಸದಸ್ಯರಾದ ತ.ನ ಪ್ರಭುದೇವ. ಮಲ್ಲೇಶ, ಚಂದ್ರಶೇಖರ್, ನಾಗರಾಜು, ಟಿಎಪಿಎಂಸಿಎಸ್ ನಿರ್ದೆಶಕರಾಲಕ್ಷ್ಮಿನಾರಾಯಣ, ಆನಂದ್, ಕುಂಟನಹಳ್ಳಿ ಮಂಜುನಾಥ ಸೇರಿದಂತೆ ಐದು ಹೋಬಳಿಗಳ ಮುಖಂಡರು ಭಾಗಿಯಾಗಿದ್ದರು.