ನಗರದ ನಗರಸಭೆ ವ್ಯಾಪ್ತಿಯ ಮುತ್ತೂರು 6ನೇ ವಾರ್ಡ್ ನಲ್ಲಿ ಮೂಲಭೂತ ಸವಲತ್ತುಗಳಿಲ್ಲದೆ ಇಲ್ಲಿನ ನಿವಾಸಿಗಳು ಪರದಾಡುವಂತಾಗಿದೆ. ಸರ್ಕಾರಿ ಪ್ರಾಥಮಿಕ ಶಾಲಾ ಮುಂಭಾಗದಲ್ಲಿ ಇರುವ ಮ್ಯಾನ್ ಹೋಲ್ ತುಂಬಿ ಗೊಬ್ಬು ನಾರುತ್ತಿರುವ ಮಲ ಮಿಶ್ರಿತ ಕೊಳಚೆ ನೀರು ಪ್ರತಿದಿನ ರಸ್ತೆಗೆ ಹರಿಯುತ್ತಿರುತ್ತದೆ. ಸ್ಥಳದಲ್ಲಿ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊಳಚೆ ನೀರಿನ ದುರ್ವಾಸನೆಯಿಂದ ಶಾಲಾ ಮಕ್ಕಳ ಆರೋಗ್ಯ ಹದಗೆಟ್ಟು ಆಸ್ಪತ್ರೆ ಪಾಲಾಗುತ್ತಿದ್ದಾರೆ. ಸ್ಥಳದಲ್ಲಿ ದೇವಸ್ಥಾನ, ಶುದ್ಧ ಕುಡಿಯುವ ನೀರಿನ ಘಟಕ ಇದ್ದು, ಸದಾ ಹರಿಯುವ ಈ ಕೊಳಚೆ ನೀರನ್ನು ದಾಟಿ ದೇವಸ್ಥಾನಕ್ಕೆ, ಶುದ್ಧ ಕುಡಿಯುವ ನೀರಿಗಾಗಿ ಇಲ್ಲಿನ ನಿವಾಸಿಗಳು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಜತೆಗೆ ಕಳೆದ ಒಂದು ತಿಂಗಳಿನಿಂದಲೂ ಮಲ ಮಿಶ್ರಿತ ಕೊಳಚೆ ನೀರು ರಸ್ತೆಗೆ ಹರಿಯುತ್ತಿದ್ದರೂ ಸ್ಥಳೀಯ ಜನಪ್ರತಿನಿಧಿಗಳು ಮಾತ್ರ ಇತ್ತ ಕಡೆ ಗಮನ ಹರಿಸಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೊತೆಗೆ ಎಲ್ಲೆಂದರಲ್ಲಿ ಕಸದ ರಾಶಿಗಳು ಇದ್ದು, ಕಸದ ರಾಶಿಗಳನ್ನ ಸೂಕ್ತ ರೀತಿಯಲ್ಲಿ ತೆರವು ಮಾಡದೇ ಇರುವುದರಿಂದ ನೊಣ, ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ನೊಣ, ಸೊಳ್ಳೆ, ದುರ್ನಾತದಿಂದ ಅಕ್ಕಪಕ್ಕದ ಮನೆಯವರು ಹೈರಾಣಾಗುತ್ತಿದ್ದಾರೆ. ಚರಂಡಿಗಳು ತುಂಬಿ ತುಳುಕುತ್ತಿವೆ. ರಸ್ತೆಗಳು ಹಾಳಾಗಿವೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ಮುತ್ತೂರು ವಾರ್ಡ್ ಗೆ ಹೊಂದಿಕೊಂಡಂತೆ ಹಿಂದೂಪುರ-ಯಲಹಂಕ ರಾಜ್ಯ ಹೆದ್ದಾರಿ ಹಾದು ಹೋಗಿದ್ದು, ಇಲ್ಲಿನ ನಿವಾಸಿಗಳು ಹೆದ್ದಾರಿಯನ್ನ ದಾಟಿ ಮನೆಗಳಿಗೆ ತೆರಳಬೇಕು, ಹೆದ್ದಾರಿಯಲ್ಲಿ ಸರ್ವೀಸ್ ರಸ್ತೆ, ಬೀದಿದೀಪಗಳು, ರಸ್ತೆ ಉಬ್ಬುಗಳು ಸೇರಿದಂತೆ ಯಾವುದೇ ರಸ್ತೆ ನಿಯಮ ಫಲಕಗಳು ಇಲ್ಲದೇ ಇರುವ ಕಾರಣ ಅಪಘಾತಗಳು ಪದೇ ಪದೇ ಮರುಕಳಿಸಿ ಆನೇಕ ಸಾವು ನೋವುಗಳಾಗಿವೆ.
ರಾಜ್ಯ ಹೆದ್ದಾರಿಗೆ ಟೋಲ್ ಸಂಗ್ರಹ ಆರಂಭವಾಗಿ ಆನೇಕ ವರ್ಷಗಳೇ ಕಳೆದಿದ್ದರು ಸಹ ಇಲ್ಲಯವರೆಗೆ ಮುತ್ತೂರು ಬಳಿ ರಸ್ತೆ ಕಾಮಗಾರಿ ಅರೆಬರೆಯಾಗಿಯೇ ಉಳಿದಿದೆ.
ಕೂಡಲೇ ಈ ಎಲ್ಲಾ ಸಮಸ್ಯೆ ಬಗೆಹರಿಸುವಂತೆ ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಸ್ಥಳೀಯರು ಮನವಿ ಮಾಡಿದ್ದಾರೆ.