ಮುತ್ತೂರಿನ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಪಟಾಕಿ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಕಾರಿಯಾಗದೇ ಮತ್ತೊಬ್ಬ ಬಾಲಕ ಸಾವು

ದೊಡ್ಡಬಳ್ಳಾಪುರ ನಗರದ ಮುತ್ತೂರು ವಾರ್ಡ್ ನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಪಟಾಕಿ ಸ್ಫೋಟ ಪ್ರಕರಣದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮತ್ತೊಬ್ಬ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ(ಸೆ.2) ರಾತ್ರಿ ಸುಮಾರು 10:18ರಲ್ಲಿ ಯೋಗೇಶ್(15) ಎಂಬ ಬಾಲಕ ಮೃತಪಟ್ಟಿದ್ದಾನೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಒದಗಿಬಂದಿದೆ….

ಆ.29ರ ಶುಕ್ರವಾರ ಸಂಜೆ 5:45 ಗಂಟೆಯಲ್ಲಿ ಫ್ರೆಂಡ್ಸ್ ವಿನಾಯಕ ಗ್ರೂಪ್‌ವತಿಯಿಂದ ಗಣೇಶ ಮೆರವಣಿಗೆ ಹಾಗೂ ವಿಸರ್ಜನೆಗೆಂದು ಪವರ್ ಲಿಫ್ಟರ್ ವಾಹನವನ್ನು ಕರೆಸಲಾಗಿತ್ತು. ಮೆರವಣಿಗೆ ವೇಳೆ ಪಟಾಕಿಗಳನ್ನು ಪವರ್ ಲಿಫ್ಟರ್ ವಾಹನದ ಇಂಜಿನ್ ಮೇಲೆ ಇಡಲಾಗಿತ್ತು. ಚಿಕ್ಕ ಕ್ರೇನ್ ನ ಇಂಜಿನ್ ಬಿಸಿಯಾಗಿ, ಅದರ ಮೇಲೆ ಇಡಲಾಗಿದ್ದ ಪಟಾಕಿಗಳ ಏಕಾಏಕಿ ಸ್ಫೋಟಗೊಂಡಿದ್ದವು.

ಘಟನೆಯಲ್ಲಿ ಕ್ರೇನ್‌ನಲ್ಲಿ ಚಾಲಕನ ಜೊತೆ ಕುಳಿತಿದ್ದ ಇಬ್ಬರು ಮಕ್ಕಳು ಮೇಲೆ ಹಾರಿ ಬಿದ್ದಿದ್ದು, ಪಕ್ಕದಲ್ಲೇ ಸಾಗುತ್ತಿದ್ದ ಭದ್ರತೆಗೆ ನಿಯೋಜನೆ ಮಾಡಲಾಗಿದ್ದ ಪೊಲೀಸ್‌ ಸಿಬ್ಬಂದಿ ಹಾಗೂ ಚಾಲಕನಿಗೆ ಗಂಭೀರ ಪೆಟ್ಟಾಗಿತ್ತು. ಅಲ್ಲದೆ ಪಟಾಕಿ ಸ್ಪೋಟಗೊಂಡು ಚದುರಿದ ಪರಿಣಾಮ ಮೆರವಣಿಗೆ ಸಾಗುತ್ತಿದ್ದ 8ಕ್ಕೂ ಹೆಚ್ಚು ಯುವಕರಿಗೆ ಗಾಯಗಳಾಗಿತ್ತು.

ಗಣೇಶ್(16), ಯೋಗೇಶ್(15), ಮುನಿರಾಜು(27), ಪವರ್ ಲಿಫ್ಟ್ ಚಾಲಕ ನಾಗರಾಜು(35), ಚೇತನ್ ಶಾವಿ(13), ಪೊಲೀಸ್ ಕಾನ್ಸ್ಟೇಬಲ್ ಜಾಕಿರ್ ಹುಸೇನ್ ಸೇರಿದಂತೆ ಇತರರಿಗೆ ಗಂಭೀರ ಗಾಯಗಳಾಗಿತ್ತು.

ಘಟನೆ ನಡೆದ‌ ಕೆಲವೇ ಗಂಟೆಗಳಲ್ಲಿ‌ ಚಿಕಿತ್ಸೆ ಫಲಕಾರಿಯಾಗದೇ ಧನುಷ್ ರಾವ್(15), ಎಂಬ ವಿದ್ಯಾರ್ಥಿ ಮೃತಪಟ್ಟಿದ್ದನು. ಇದೀಗ ಮತ್ತೋರ್ವ ಬಾಲಕ ಯೋಗೇಶ್(15), ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮಿಕ್ಕುಳಿದ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ…..

ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ…….

Leave a Reply

Your email address will not be published. Required fields are marked *

error: Content is protected !!