ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಎಲ್ಲಾ ರೀತಿಯಿಂದ ಮುಂದುವರೆದ ಯಾವುದೇ ಜಾತಿಗಳನ್ನು ಪ್ರವರ್ಗ 2ಎ ಮೀಸಲಾತಿ ಪಟ್ಟಿಗೆ ಸೇರಿಸಬಾರದು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ನಗರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ವೇಳೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡೆ ಖಂಡಿಸಿ ದಿಕ್ಕಾರದ ಘೋಷಣೆ ಕೂಗಿದರು. ದೇಶದಲ್ಲಿ ಮೀಸಲಾತಿಯನ್ನು ಅವಕಾಶ ವಂಚಿತ ಜಾತಿಗಳಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಸಾಮಾಜಿಕ ಸಮಾನತೆ ಸಾರಿದ ಅಗ್ರಗಣ್ಯ ರಾಜ್ಯಗಳಲ್ಲಿ ಕರ್ನಾಟಕವು ಒಂದು. ಅನೇಕ ಹಿಂದುಳಿದ ವರ್ಗಗಳ ಆಯೋಗಗಳು ವೈಜ್ಞಾನಿಕ ಆಧ್ಯಯನ ನಡೆಸಿ ಮೀಸಲಾತಿಯನ್ನು ಅಚ್ಚುಕಟ್ಟಾಗಿ ಜಾರಿ ಮಾಡಿವೆ. ಆದರೆ, ಕೆಲ ರಾಜಕೀಯ ತೀರ್ಮಾನಗಳಿಂದಾಗಿ ಬಲಾಡ್ಯರು ಮೀಸಲಾತಿ ಪಡೆದು ಶೋಷಿತರ ಪಾಲು ಕಬಳಿಸುತ್ತಿರುವುದು ಶೋಚನೀಯ ಎಂದು ಪ್ರತಿಭಟನಾನಿರತರು ಟೀಕಿಸಿದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ, ಆರ್ಥಿಕ ಸಮೀಕ್ಷೆಯನ್ನು ಕೂಡಲೇ ಸರ್ಕಾರ ಬಿಡುಗಡೆ ಮಾಡಬೇಕು. ಅಲ್ಲಿರುವ ವೈಜ್ಞಾನಿಕ ಅಂಕಿ ಅಂಶಗಳ ಪ್ರಕಾರ ನೂತನ ಮೀಸಲಾತಿಯನ್ನು ಪ್ರಕಟಿಸಬೇಕು. ಎಲ್ಲಾ ವಿರೋಧಗಳನ್ನು ನಿರ್ಲಕ್ಷಿಸಿ ಲಿಂಗಾಯಿತ-ಪಂಚಮಸಾಲಿ ಜಾತಿ ಹಾಗೂ ಇತರೆ ಮುಂದುವರೆದ ಜಾತಿಗಳನ್ನು ಪ್ರವರ್ಗ 2ಎ ಮೀಸಲಾತಿ ಪಟ್ಟಿಗೆ ಸೇರಿಸುವ ಕ್ರಮ ಕೈಗೊಂಡರೆ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ರಾಜ್ಯಾದ್ಯಾಂತ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕುರುಬ ಸಮಾಜದ ಮುಖಂಡ ಕೆ.ಎಂ.ಕೃಷ್ಣಮೂರ್ತಿ, ಕಾಂಗ್ರೆಸ್ ಒಬಿಸಿ ನಗರಾಧ್ಯಕ್ಷ ಪು.ಮಹೇಶ್, ವಿವಿಧ ಸಮಾಜಗಳ ಮುಖಂಡರಾದ ಶ್ರೀನಿವಾಸ್ ಮೂರ್ತಿ, ಜೆ.ಮುನಿರಾಜು, ಪರಮೇಶ್, ಚಂದ್ರಮೋಹನ್, ಲಾವಣ್ಯ ನಾಗರಾಜ್ ಹಾಗೂ ತಾಲೂಕಿನ ಎಲ್ಲಾ ಹಿಂದುಳಿದ ಜಾತಿಗಳ ಮುಖಂಡರು ಭಾಗವಹಿಸಿದ್ದರು.