ಮೀನು ರಫ್ತಿನಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ- ಮೀನುಗಾರಿಕೆ ವಿಶ್ವ ವಿದ್ಯಾಲಯ ಸ್ಥಾಪಿಸಲು ಸರ್ಕಾರ ಸಿದ್ಧ- ಸಿಎಂ ಸಿದ್ದರಾಮಯ್ಯ

ಮೀನುಗಾರಿಕೆ ವಿಶ್ವ ವಿದ್ಯಾಲಯ ಸ್ಥಾಪಿಸಲು ಸರ್ಕಾರ ಸಿದ್ಧವಿದೆ. ಮೀನುಗಾರಿಕಾ ಇಲಾಖೆಯನ್ನು ಮತ್ತು ಮೀನುಗಾರ ಕುಟುಂಬಗಳನ್ನು ಅಭಿವೃದ್ಧಿಪಡಿಸಲು ಕರಾವಳಿಯವರೇ ಆದ ಮಂಕಾಳ ವೈದ್ಯ ಅವರನ್ನೇ ಮಂತ್ರಿ ಮಾಡಿದ್ದೇವೆ. ಇವರು ಉತ್ತಮವಾಗಿ ಇಲಾಖೆಯನ್ನು ನಿರ್ವಹಿಸುತ್ತಿದ್ದಾರೆ. ಮೀನುಗಾರ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮೀನುಗಾರಿಕೆ ಇಲಾಖೆ ಇಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ “ವಿಶ್ವ ಮೀನುಗಾರಿಕಾ ದಿನಾಚರಣೆ ಮತ್ತು 2025ರ ಮತ್ಸ್ಯ ಮೇಳ”ದ ಉದ್ಘಾಟನಾ ಸಮಾರಂಭದಲ್ಲಿ   ಅವರು ಮಾತನಾಡಿದರು.

ರಾಜ್ಯದಲ್ಲಿ 320 ಕಿಮೀ ಕರಾವಳಿ ಪ್ರದೇಶ ಇದೆ. 5.5ಲಕ್ಷ ಹೆಕ್ಟೇರ್ ಒಳನಾಡು ಜಲಪ್ರದೇಶ ಇದೆ. ಮೀನು ರಫ್ತಿನಲ್ಲಿ ರಾಜ್ಯ ನಾಲ್ಕನೇ ಸ್ಥಾನದಲ್ಲಿದೆ. ದೇಶದ ಮೀನು ಉತ್ಪಾದನೆಯಲ್ಲಿ ರಾಜ್ಯ 3ನೇ ಸ್ಥಾನದಲ್ಲಿದೆ. ಒಟ್ಟಾರೆ ಮೀನುಗಾರಿಕೆಯು 10 ಲಕ್ಷ ಜನರ ಜೀವನಕ್ಕೆ ಆಸರೆಯಾಗಿದೆ ಎಂದರು.

ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಯಾಂತ್ರೀಕೃತ ದೋಣಿಗಳ ಡೀಸೆಲ್ ವಾರ್ಷಿಕ ಮಿತಿಯನ್ನು 1.5 ಲಕ್ಷ ಕಿ.ಲೋ ಲೀಟರ್ ನಿಂದ 2 ಲಕ್ಷ ಕಿ.ಲೋ ಲೀಟರ್ ಗೆ ಹೆಚ್ಚಿಸಲಾಗಿದೆ. ನಾಡ ದೋಣಿಗಳಿಗೆ ಕೈಗಾರಿಕಾ ಸೀಮೆಎಣ್ಣೆಯನ್ನು ಪ್ರತೀ ಲೀಟರ್ ಗೆ 35 ರೂ. ರಿಯಾಯಿತಿ ದರದಲ್ಲಿ ವಿತರಣೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಒಟ್ಟಾರೆ ಮೀನುಗಾರ ಸಮುದಾಯದ ಏಳಿಗೆಗೆ ಸರ್ಕಾರ ಪ್ರತೀ ಬಜೆಟ್ ನಲ್ಲೂ ಕಾರ್ಯಕ್ರಮಗಳನ್ನು ನೀಡುತ್ತಿದೆ ಎಂದರು.

Leave a Reply

Your email address will not be published. Required fields are marked *

error: Content is protected !!