ಮಾ.22 ರಂದು ಕರ್ನಾಟಕ ಬಂದ್

ಬೆಳಗಾವಿಯಲ್ಲಿ ಮರಾಠಿ ಪುಂಡರ ದಬ್ಬಾಳಿಕೆ ವಿರುದ್ಧ ಕನ್ನಡ ಪರ ಸಂಘಟನೆಗಳು ಇದೇ ಶನಿವಾರ ಮಾರ್ಚ್ 22ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ.

ಈ ಸಂಬಂಧ ಮಾರ್ಚ್​ 18ರಂದು ಬೆಂಗಳೂರಿನಲ್ಲಿ ‘ಅಖಂಡ ಕರ್ನಾಟಕ ಬಂದ್‌’ಗೆ ಕುರಿತು ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಮಾರ್ಚ್ 22ರಂದು ಅಖಂಡ ಕರ್ನಾಟಕ ಬಂದ್​ ಮಾಡಲು ತೀರ್ಮಾನವಾಗಿದೆ.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮತನಾಡಿದ ವಾಟಾಳ್ ನಾಗರಾಜ್, ಮಾರ್ಚ್ 22ರಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆ ತನಕ ಬಂದ್ ಆಗುವುದು ನಿಶ್ಚಿತ. ಬೆಳಗ್ಗೆ 10:30ಕ್ಕೆ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್ ತನಕ ಪ್ರತಿಭಟನಾ ಮೆರವಣಿಗೆ ಮಾಡುತ್ತೇವೆ. ಹೀಗಾಗಿ ನಿಮ್ಮ ಸ್ವಾಭಿಮಾನಕ್ಕಾಗಿ ಯಾರು ವಾಹನ ಹತ್ತಬೇಡಿ ಸಾರ್ವಜನಿಕರಿಗೆ ಮನವಿ ಮಾಡಿದರು.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜೊತೆ ಮಾತಾನಾಡಿದ್ದೇವೆ. ಅವತ್ತು ಬಸ್ ಓಡಿಸಬಾರದೆಂದು ಹೇಳಿದ್ದೇವೆ. ಇನ್ನೂ ಒಂದು ಸಲ ಹೇಳುತ್ತೇವೆ ಅವತ್ತು ಬಸ್ ಓಡಿಸಬಾರದು.  ಬೆಳಗಾವಿಯಿಂದ ಎಂಇಎಸ್ ಅನ್ನು ಒದ್ದು ಓಡಿಸಬೇಕೋ ಬೇಡ್ವೋ? ಬೆಳಗಾವಿ ಘಟನೆ ಕಣ್ಣಿಗೆ ಚಿಕ್ಕದಾಗಿರಬಹುದು. ಆದ್ರೆ ನಮ್ ಕಣ್ಣಿಗೆ ಇದು ಬೆಟ್ಟ. ಕರ್ನಾಟಕದಲ್ಲಿ ಶಿವಾಜಿ ಪ್ರತಿಮೆ ಇದೆ. ಮಹಾರಾಷ್ಟ್ರದಲ್ಲಿ ನಮ್ಮ ಕನ್ನಡಿಗರ ಪ್ರತಿಮೆ ಇಲ್ಲ ಎಂದರು.

*ಬಂದ್​ಗೆ KSRTC, BMTC ನೌಕರರ ಸಂಘ ಬೆಂಬಲ*

ಮಾರ್ಚ್​ 22ರಂದು ಕರೆ ನೀಡಿರುವ ಕರ್ನಾಟಕ ಬಂದ್​ಗೆ ಸಾರಿಗೆ ನೌಕರರ ಕೂಟ ಸಹ ಬೆಂಬಲಿಸಿದೆ. ಈ ಬಗ್ಗೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರು ಪ್ರತಿಕ್ರಿಯಿಸಿ, ಬಂದ್​ಗೆ KSRTC, ಬಿಎಂಟಿಸಿ ನೌಕರರ ಸಂಘದಿಂದ ಬೆಂಬಲ ಇದೆ. ಕಳೆದ ತಿಂಗಳು ಸಾರಿಗೆ ನೌಕರನ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆ ಖಂಡಿಸಿದ ಕನ್ನಡಪರ ಹೋರಾಟಗಾರರಿಗೆ ಸದಾ ಚಿರಋಣಿ. ಕೆಎಸ್​ಆರ್​ಟಿಸಿ, ಬಿಎಂಟಿಸಿ ನೌಕರರು ನಿಮ್ಮ ಜೊತೆ ಇದ್ದೇವೆ. ಕರ್ನಾಟಕ ಬಂದ್​​ಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಸ್ಪಷ್ಟಪಡಿಸಿದರು. ಆದ್ರೆ ಮೆಟ್ರೋ ಬಂದ್​ ಕುರಿತು ಯಾವುದೇ ಪ್ರಕಟಣೆ ಹೊರಡಿಸಿಲ್ಲ. ಆದರೂ ಸಹ ಅಂದು ಏನಾದರೂ ಪ್ರಯಾಣ ಮಾಡುವ ಪ್ಲ್ಯಾನ್ ಇದ್ದರೆ ಯಾವುದಕ್ಕೂ ಮುಂದೂಡುವುದು ಒಳಿತು.

*ಬಂದ್​ಗೆ ಕರವೇ ಶಿವರಾಮೇಗೌಡ ಬಣ ಬೆಂಬಲ*

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾರ್ಚ್​ 22ರಂದು ಕರ್ನಾಟಕ ಬಂದ್​ಗೆ ಕನ್ನಡ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ ಸಹ ಬೆಂಬಲಿಸಿದೆ. ಈ ಬಗ್ಗೆ ಸ್ವತಃ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಶಿವರಾಮೇಗೌಡ ಸ್ಪಷ್ಟಪಡಿಸಿದ್ದಾರೆ. ವಾಟಾಳ್​ ನಾಗರಾಜ್​ ನೇತೃತ್ವದಲ್ಲಿ ಬಂದ್​ಗೆ ಕರೆ ನೀಡಲಾಗಿದೆ. ನಾಡಿನ ಹಿತಕ್ಕಾಗಿ ಬಂದ್​ಗೆ ಕರೆ ನೀಡಲಾಗಿದೆ. ಸರ್ವ ಸಮಸ್ಯೆಗಳ ಪರಿಹಾರಕ್ಕೆ ಕರ್ನಾಟಕ ಬಂದ್​ಗೆ ಕರೆ ನೀಡಿದ್ದೇವೆ. ಮೆಟ್ರೋದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಆಗುತ್ತಿದೆ. ಶಿವಸೇನೆ ನಿಷೇಧ ಸೇರಿ ಅನೇಕ ವಿಚಾರ ಮುಂದಿಟ್ಟು ಬಂದ್​ಗೆ ಕರೆ ನೀಡಲಾಗಿದೆ. ಚಾಲಕರು ಸೇರಿ ಎಲ್ಲರೂ ಈ ಬಂದ್​ ಅನ್ನು ಯಶಸ್ವಿಗೊಳಿಸಬೇಕು. ಆಸ್ಪತ್ರೆ, ಹಾಲು ಸೇರಿ ಅಗತ್ಯ ಸೇವೆ ಹೊರತುಪಡಿಸಿ ಎಲ್ಲವೂ ಬಂದ್ ಎಂದು ತಿಳಿಸಿದರು. ಕೊಡಗು ಜಿಲ್ಲೆಯಲ್ಲಿ ಕರ್ನಾಟಕ ಬಂದಿಗೆ ಯಾವ ರೀತಿಯ ಪ್ರತಿಕ್ರಿಯೆ ದೊರಕುವುದು ಎಂಬುದನ್ನು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!