ಮಾ.19ರಂದು ಒಳ ಮೀಸಲಾತಿ ಜಾರಿಗಾಗಿ ಒತ್ತಾಯಿಸಿ ರಾಜ್ಯ ಮಟ್ಟದ ಬೃಹತ್ ಸಮಾವೇಶ- ಸಿಎಂ ಸಿದ್ದರಾಮಯ್ಯ‌ ಒಳ‌ಮೀಸಲಾತಿ ಜಾರಿ ಮಾಡುತ್ತಾರೆ ಎಂಬ ನಂಬಿಕೆ ಇದೆ- ಆರ್.ವಿ ಮಹೇಶ್

ಒಳಮೀಸಲಾತಿ ಜಾರಿಗಾಗಿ ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟದ ವತಿಯಿಂದ ಮಾ.19ರಂದು ಬೆಳಗ್ಗೆ 10ಕ್ಕೆ ಬೆಂಗಳೂರು ನಗರದ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದ್ದೇವೆ ಎಂದು ದಲಿತ ಸಮುದಾಯದ ಮುಖಂಡ ಆರ್.ವಿ‌ ಮಹೇಶ್

ನಗರದ ಪ್ರವಾಸಿ ಮಂದಿರದಲ್ಲಿ ದಲಿತ ಸಮುದಾಯ ಮುಖಂಡರ ಜೊತೆ ಸಮಾವೇಶ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು,  ಸುಪ್ರೀಂ‌ಕೋರ್ಟ್ ಆದೇಶದಂತೆ ಸರ್ಕಾರದ ದತ್ತಾಂಶಗಳನ್ನು ಪರಿಗಣಿಸಿ ಬಿಳಂಬ ನೀತಿ ಅನುಸರಿಸದೆ ಒಳಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ನುಡಿದಂತೆ ನಡೆಯುವ ಸರ್ಕಾರ ಕಾಂಗ್ರೆಸ್ ಸರ್ಕಾರ.‌ ಸಿಎ‌ಂ ಸಿದ್ದರಾಮಯ್ಯ ಒಳ ಮೀಸಲಾತಿ ಜಾರಿ ಮಾಡಿ ನುಡಿದಂತೆ ನಡೆದುಕೊಳ್ಳುತ್ತಾರೆ. ನಮ್ಮ ಸಮುದಾಯಕ್ಕೆ ಸಿಎಂ‌ ಸಿದ್ದರಾಮಯ್ಯ ಒಳಿತು ಮಾಡುತ್ತಾರೆ ಎಂಬ ನಂಬಿಕೆ ನಮಗೆ ಇದೆ ಎಂದು ಹೇಳಿದರು.

ನಂತರ ದಲಿತ ಮುಖಂಡ ರಾಮಕೃಷ್ಣಪ್ಪ ಮಾತನಾಡಿ, ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಮೂರು ತಿಂಗಳೊಳಗಾಗಿ ಆಯಾ ರಾಜ್ಯಗಳೇ ಒಳಮೀಸಲಾತಿ ಜಾರಿ ಮಾಡಬಹುದು ಎಂದು ತಿಳಿಸಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ದತ್ತಾಂಶಗಳ ನೆಪವೊಡ್ಡಿ ವಿಳಂಬ ನೀತಿಯನ್ನು ಅನುಸರಿಸುತ್ತಾ ನಿರ್ಲಕ್ಷ್ಯ ಧೋರಣೆ ಮುಂದುವರಿಸಲಾಗುತ್ತಿದೆ ಎಂದು ಕಿಡಿಕಾರಿದರು.

ಕರ್ನಾಟಕ ರಾಜ್ಯ ಸರ್ಕಾರವು ದಿನಾಂಕ: 23.11.2024 ರಂದು ಶಿಗ್ಗಾವಿ, ಸಂಡೂರು, ಚನ್ನಪಟ್ಟಣ ಕ್ಷೇತ್ರಗಳ ಉಪಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು 28, ಅಕ್ಟೋಬರ್ 2024 ರಂದು ಸರ್ವೋಚ್ಛ ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ಎಸ್‌ಸಿ/ಎಸ್‌ ಸಮುದಾಯಗಳಿಗೆ ಒಳಮೀಸಲಾತಿ ಕೊಡಲು ತಾತ್ವಿಕವಾಗಿ ಒಪ್ಪಿಗೆ ನೀಡಿತು. ದಿನಾಂಕ: 12.11.2024 ರಂದು ಮಾನ್ಯ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಹೆಚ್.ಎನ್.ನಾಗಮೋಹನ್‌ದಾಸ್‌ರವರ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗವನ್ನು ರಚಿಸಲಾಯಿತು. ಈ ನಿರ್ಣಯವನ್ನು ಪ್ರಕಟಿಸುವಾಗ ರಾಜ್ಯ ಸಂಪುಟವು ಎಸ್‌ ಸಿ/ಎಸ್‌ ಎ ಸಮುದಾಯಗಳಿಗೆ ಒಳಮೀಸಲಾತಿ ಒದಗಿಸಲು ಆದೇಶ ಹೊರಡಿಸುವವರೆಗೂ ರಾಜ್ಯದಲ್ಲಿ ಯಾವುದೇ ಸಿವಿಲ್ ಸೇವೆಗಳಲ್ಲಿನ ಮೀಸಲಾತಿಗೆ ಅನ್ವಯವಾಗುವ ವೃಂದಗಳಲ್ಲಿ ಹುದ್ದೆಗಳ ನೇಮಕಾತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು ಹೊರಡಿಸಬಾರದೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯರವರ ನೇತೃತ್ವದಲ್ಲಿ ಸಚಿವ ಸಂಪುಟವು ನಿರ್ಧರಿಸಿತು. ಸಚಿವ ಸಂಪುಟದ ಈ ನಿರ್ಣಯವನ್ನು 28, ಅಕ್ಟೋಬರ್ 2024ರಂದೇ ಕಾನೂನು ಸಚಿವ ಹೆಚ್.ಕೆ.ಪಾಟೀಲ್‌ರವರು ಇತರೆ ಹಿರಿಯ ಸಂಪುಟ ಸದಸ್ಯರ ಸಮ್ಮುಖದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಪ್ರಕಟಿಸಿದ್ದಾರೆ. ಆದರೂ ಯಾವ ಮುಲಾಜು ಇಲ್ಲದೆ ಸಚಿವ ಸಂಪುಟದ ನಿರ್ಧಾರಗಳನ್ನು ಗಾಳಿಗೆ ತೂರಿ 37,000 ಹುದ್ದೆಗಳನ್ನು ಸರ್ಕಾರ ನೇಮಕಾತಿ ಮಾಡಿಕೊಳ್ಳುತ್ತಿದೆ. ಇದರ ಪರಿಣಾಮ ಮೀಸಲಾತಿಯ ಎಲ್ಲಾ ಉದ್ಯೋಗದ ಅವಕಾಶಗಳನ್ನು ಪರೋಕ್ಷವಾಗಿ ಖಾಲಿ ಮಾಡುವ ಕುತಂತ್ರ ಮಾಡುತ್ತಿದೆ ಎಂದು ದಲಿತ ಮುಖಂಡರು ಆರೋಪಿಸಿದರು.

ಹಕ್ಕೋತ್ತಾಯಗಳು

  • ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಸರ್ಕಾರದಲ್ಲಿ ಲಭ್ಯವಿರುವ ದತ್ತಾಂಶಗಳನ್ನು ಪರಿಗಣಿಸಿ ವಿಳಂಬ ನೀತಿ ಅನುಸರಿಸದೆ ರಾಜ್ಯ ಸರ್ಕಾರವು ಒಳಮೀಸಲಾತಿಯನ್ನು ಜಾರಿಗೊಳಿಸಬೇಕು.
  • ನ್ಯಾ. ಸದಾಶಿವ ಆಯೋಗದ ವರದಿ ಮತ್ತು ಒಳಮೀಸಲಾತಿ ವರ್ಗಿಕರಣದ ಶಿಫಾರಸ್ಸಗಳನ್ನು ಸಚಿವ ಸಂಪುಟದಲ್ಲಿ ಅಧಿಕೃತಗೊಳಿಸಿ ಹೆಚ್ಚಳವಾಗಿರುವ ಮೀಸಲಾತಿಯ ಶೇ. 17 ರ ಅನುಪಾತದಲ್ಲಿ ಹೆಚ್ಚುವರಿ ಶೇ. 2 ಮೀಸಲಾತಿಯನ್ನು ಜಾತಿ ಜನಸಂಖ್ಯೆಗೆ ಅನುಗುಣವಾಗಿ ಮಾದಿಗ ಮತ್ತು ಸಂಬಂಧಿತ ಜಾತಿಗಳಿಗೆ ಶೇ. 7% ಮೀಸಲಾತಿಯನ್ನು ನಿಗದಿಪಡಿಸಬೇಕು.
  • ಸಚಿವ ಸಂಪುಟವು ನಿರ್ಣಯಿಸಿದಂತೆ ಒಳಮೀಸಲಾತಿ ಜಾರಿಯಾಗುವವರೆಗೂ ಸರ್ಕಾರಿ ಉದ್ಯೋಗಗಳಲ್ಲಿ ಸುಮಾರು 37 ಸಾವಿರ ಹುದ್ದೆಗಳ ನೇಮಕಾತಿಗಳನ್ನು ತಡೆಹಿಡಿಯಬೇಕು.
  • ನಿಜವಾದ 49 ಅಲೆಮಾರಿಗಳನ್ನು ಪ್ರತ್ಯೇಕವಾಗಿ ಗುರ್ತಿಸಿ ಶೇ.1 ಕ್ಕಿಂತ ಹೆಚ್ಚು ಒಳಮೀಸಲಾತಿಯನ್ನು ನೀಡಿ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಅಲೆಮಾರಿಗಳಿಗೆ ನ್ಯಾಯ ಒದಗಿಸಲು ಪ್ರತ್ಯೇಕ ಅಲೆಮಾರಿ ಆಯೋಗವನ್ನು ಸ್ಥಾಪಿಸಬೇಕು.
  • ಸಮಾಜ ಕಲ್ಯಾಣ ಇಲಾಖೆಯ ಬಜೆಟ್‌ನಲ್ಲಿ ಮತ್ತು ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುಧಾನವನ್ನು ಜನಸಂಖ್ಯಾವಾರು ಹಂಚಿಕೆ ಮಾಡಬೇಕು. ಮಾದಿಗ, ಸಮಗಾರ, ಡೋಹರ, ಮಚಗಾರ ಜಾತಿಗಳ ಜನಸಂಖ್ಯೆಯ ಆಧಾರದ ಮೇಲೆ ಪ್ರತ್ಯೇಕವಾಗಿ ನಿಗಮ ಮಂಡಳಿಗಳಿಗೆ ತಲಾ ಒಂದು ಸಾವಿರ ಕೋಟಿ ಅನುದಾನ ಮೀಸಲಿಟ್ಟು ಅದೇ ವರ್ಷ ವೆಚ್ಚ ಮಾಡಲು ಕ್ರಮ ಕೈಗೊಳ್ಳಬೇಕು.

ಈ ವೇಳೆ ತಾಲೂಕಿನ ದಲಿತ ನಾಯಕರು, ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *