ಮಾ.1ರಂದು ಕನಸವಾಡಿ ಕ್ಷೇತ್ರದ ಶ್ರೀ ಶನಿಮಹಾತ್ಮ ಸ್ವಾಮಿಯ ವಿಜೃಂಭಣೆಯ ಬ್ರಹ್ಮರಥೋತ್ಸವ

ತಾಲೂಕಿನ ಮಧುರೆ ಹೋಬಳಿಯ ಕನಸವಾಡಿ ಕ್ಷೇತ್ರದ ಶ್ರೀ ಶನಿಮಹಾತ್ಮ ಸ್ವಾಮಿ ದೇವಾಲಯದಲ್ಲಿ ಸ್ವಾಮಿಯ 68ನೇ ಅದ್ಧೂರಿ ಬ್ರಹ್ಮರಥೋತ್ಸವ ಮಾರ್ಚ್ 1 ರಂದು ನಡೆಯಲಿದ್ದು, ಇದಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ದೇವಾಲಯದ ಧರ್ಮಾಕಾರಿ ಕೆ.ವಿ.ಪ್ರಕಾಶ್ ತಿಳಿಸಿದ್ದಾರೆ.

ಶ್ರೀ ಶನಿಮಹಾತ್ಮ ಸ್ವಾಮಿ ಅನ್ನ ದಾಸೋಹ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ರಥೋತ್ಸವ ಆಚರಣೆ ಕಳೆಗುಂದಿತ್ತು. ಆದರೆ ಈಗ ಕೋವಿಡ್ ಆತಂಕ ದೂರವಾಗಿರುವುದರಿಂದ ಸ್ಥಳೀಯ ಗ್ರಾಮಸ್ಥರು, ಭಕ್ತರ ಒತ್ತಾಯದಂತೆ 68ನೇ ಬ್ರಹ್ಮರಥೋತ್ಸವವನ್ನು ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಬ್ರಹ್ಮರಥೋತ್ಸವದ ಅಂಗವಾಗಿ ಫೆಬ್ರವರಿ 28 ರಿಂದ ಮಾರ್ಚ್ 07ರವರೆಗೆ 7 ದಿನಗಳ ಕಾಲ, ವಿಶೇಷ ಪೂಜಾ ಕಾರ್ಯಕ್ರಮಗಳು, ನಾಟಕೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಬ್ರಹ್ಮರಥೋತ್ಸವದಲ್ಲಿ ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ಎಲ್ಲ ಭಕ್ತಾದಿಗಳಿಗೂ ಪ್ರಸಾದ, ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಪೌರಾಣಿಕ ನಾಟಕ, ಉತ್ಸವ, ಕೀಲು ಕುದುರೆ, ಸಂಗೀತ ಸಂಜೆ, ತಮಟೆ ವಾದನೆ, ಕರಡಿ ಕುಣಿತ ಜಾನಪದ ಕಲಾತಂಡಗಳು ಭಾಗವಹಿಸಲಿವೆ. ವಿವಿಧ ಧಾರ್ಮಿಕ ಕಾರ್ಯಕ್ರಮ, ಹಾಗೂ ಮಾರಸಂದ್ರ, ಬಂಡಯ್ಯನ ಪಾಳ್ಯ, ಮಧುರೆ, ಕೋಡಿಹಳ್ಳಿ, ಕನಸವಾಡಿ ಕಾಲೋನಿ ಗ್ರಾಮಗಳಲ್ಲಿ ಸ್ವಾಮಿಯ ಉತ್ಸವ ನಡೆಯಲಿದೆ ಎಂದರು.

ಸ್ವಾಮಿಯ ಬ್ರಹ್ಮರಥೋತ್ಸವ ಮಾರ್ಚ್ 1ರ ಮಧ್ಯಾಹ್ನ 1-35 ರಿಂದ 2-15ರ ವರೆಗೆ ಸಲ್ಲುವ ಮಿಥುನ ಲಗ್ನದಲ್ಲಿ ನಡೆಯಲಿದೆ. ಇದರ ಅಂಗವಾಗಿ ಫೆ.28ರಂದು ಸಂಜೆ 6 ಗಂಟೆಯ ನಂತರ ಗಣಪತಿ ಪ್ರಾರ್ಥನೆ, ಪುಣ್ಯಾಹ, ರಕ್ಷಾ ಬಂಧನ, ಧ್ವಜಾರೋಹಣ, ವಾಸ್ತು ಹೋಮ, ಕಳಸ ಸ್ಥಾಪನೆ, ಮಹಾಮಂಗಳಾರತಿ ನಡೆಯಲಿದೆ. ರಾತ್ರಿ 9-30ಕ್ಕೆ ಕೊಟ್ಟಿಗೆಪಾಳ್ಯ ಶ್ರೀ ಮಹಾಮುನೇಶ್ವರ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ರಾಜ ವಿಕ್ರಮ ಪೌರಾಣಿಕ ನಾಟಕ ನಡೆಯಲಿದೆ.

ಮಾ.01ರಂದು ಬೆಳಗ್ಗೆ 08 ಗಂಟೆಯಿಂದ ಕಲಶಾರ್ಚನೆ, ಮಹಾಗಣಪತಿ, ನವಗ್ರಹ, ಶ್ರೀಶನೇಶ್ವರ ಹೋಮ, ಮಧ್ಯಾಹ್ನ 1-35 ರಿಂದ ಬ್ರಹ್ಮರಥೋತ್ಸವ, ಸಂಜೆ 6ಕ್ಕೆ ಭಜನಾ ಕಾರ್ಯಕ್ರಮ, ರಾತ್ರಿ 9 ಗಂಟೆಯ ನಂತರ ಧೂಳೋತ್ಸವ, ಪಲ್ಲಕಿ ಉತ್ಸವ, ಸಂಗೀತ ಸಂಜೆ, ರಾತ್ರಿ 9-30ಕ್ಕೆ ಚೆನ್ನಾದೇವಿ ಅಗ್ರಹಾರದ ಶ್ರೀ ವಿನಾಯಕ ಗೆಳೆಯರ ಬಳಗ ನಾಟಕ ಮಂಡಳಿಯಿಂದ ರಾಜಾ ಸತ್ಯವ್ರತ ಅಥವಾ ಶನಿಪ್ರಭಾವ ಪೌರಾಣಿಕ ನಾಟಕ ನಡೆಯಲಿದೆ ಎಂದರು.

Leave a Reply

Your email address will not be published. Required fields are marked *