ಮಾ.ರಾಮಮೂರ್ತಿ ಅವರ ನಾಮಫಲಕಕ್ಕೆ ಮಸಿ ಬಳಿದ ಪ್ರಕರಣ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ 

ದೊಡ್ಡಬಳ್ಳಾಪುರ: ನಗರದ ರಂಗಪ್ಪ ವೃತದ ಸಮೀಪದಲ್ಲಿನ ವನ್ನಿಗರಪೇಟೆ ರಸ್ತೆಯಲ್ಲಿ ಒಂದುವರೆ ವರ್ಷಗಳ ಹಿಂದೆ ಹಾಕಲಾಗಿದ್ದ ಕನ್ನಡದ ಹಿರಿಯ ಹೋರಾಟಗಾರ ಮಾ.ರಾಮಮೂರ್ತಿ ರಸ್ತೆಯ ನಾಮಫಲಕ್ಕೆ ಸೋಮವಾರ ರಾತ್ರಿ ಕಿಡಿಗೇಡಿಗಳು ಮಸಿ ಬಳಿದಿರುವುದಕ್ಕೆ ಕನ್ನಡಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಮಂಗಳವಾರ ನಗರದ ಕನ್ನಡ ಜಾಗೃತ ಭವನದಲ್ಲಿ ನಡೆದ ತುರ್ತು ಸಭೆಯಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಸಭೆಯಲ್ಲಿ ಮಾ.ರಾಮಮೂರ್ತಿ ಅವರ ನಾಮ ಫಲಕಕ್ಕೆ ಮಸಿ ಬಳಿದಿರುವುದು ಹಾಗೂ ಬೆಳಗಾವಿಯಲ್ಲಿ ಕನ್ನಡ ಭಾವುಟಕ್ಕೆ ಬೆಂಕಿ ಹಚ್ಚಿರುವ ಕೃತ್ಯ, ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷ ನಾರಾಯಣಗೌಡ ಅವರ ಬಂಧವನ್ನು ತೀವ್ರವಾಗಿ ಖಂಡಿಸಿ ಮಂಗಳವಾರ ಜಾಗೃತ ಭವನದ ಮುಂದೆ ಪ್ರತಿಭಟನೆ ನಡೆಸಲಾಯಿತು.

ಈ ಮೂರು ಕನ್ನಡ ವಿರೋಧಿ ಕೃತ್ಯಗಳನ್ನು ಖಂಡಿಸಿ ಜ.7 ರಂದು ಸಂಜೆ ಎಲ್ಲಾ ಕನ್ನಡ ಸಂಘಟನೆಗಳಿಂದ ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ಬೃಹತ್ ಪಂಜಿನ ಮೆರವಣಿಗೆ ನಡೆಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಮಾ.ರಾಮಮೂರ್ತಿ ನಾಮ ಫಲಕಕ್ಕೆ ಮಸಿ ಬಳಿದಿರುವ ಕಿಡಿಗೇಡಿಗಳ ವಿರುದ್ಧ ಕಠಿಣಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಮರೇಶ್ ಅವರಿಗೆ ಹಾಗೂ ಈ ಹಿಂದಿನ ರೀತಿಯಲ್ಲಿಯೇ ನಾಮಫಲಕದಲ್ಲಿ ಹೆಸರು ಬರೆಸುವಂತೆ ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ್ ಅವರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಹಿರಿಯ ಕನ್ನಡಪರ ಹೋರಾಟಗಾರರಾದ ಟಿ.ಎನ್.ಪ್ರಭುದೇವ್, ಜಿ.ಸತ್ಯನಾರಾಯಣ್, ಸಂಜೀವ್ ನಾಯಕ, ಸು.ನರಸಿಂಹಮೂರ್ತಿ, ಕನ್ನಡ ನಾಡಿಗೆ ಪ್ರತ್ಯೇಕ ಕನ್ನಡ ಧ್ವಜವನ್ನು ಸಿದ್ದಪಡಿಸಿ ಇಡೀ ರಾಜ್ಯವೇ ಅದನ್ನು ಬಳಸುವಂತೆ ಮಾಡಿದವರು ಧೀಮಂತ ಹೋರಾಟಗಾರ ದಿವಂಗತ ಮಾ.ರಾಮಮೂರ್ತಿ ಅವರು. ಕನ್ನಡ ನಾಡಿನ ನೆಲ,ಜಲ, ಸ್ಥಳೀಯರಿಗೆ ಉದ್ಯೋಗ ಸೇರಿದಂತೆ ಯಾವುದೇ ಹೋರಾಟಗಳು ನಡೆದರು ಹಾಗೆಯೇ ಸರ್ಕಾರದ ಅಧಿಕೃತ ಸಭೆಗಳಲ್ಲೂ ಮಾ.ರಾಮಮೂರ್ತಿ ಅವರು ರೂಪಿಸಿರುವ ಭಾವುಟವನ್ನೇ ಬಳಸಲಾಗುತ್ತಿದೆ. ಕನ್ನಡಿಗರ ಸ್ವಾಭಿಮಾನದ ಹೆಗ್ಗುರುತನ್ನು ರೂಪಿಸಿಕೊಟ್ಟ ಹೋರಾಟಗಾರ ಮಾ.ರಾಮಮೂರ್ತಿ ಅವರನ್ನು ಸದಾ ಸ್ಮರಿಸುವ ಸಲುವಾಗಿ ನಗರಸಭೆ ವತಿಯಿಂದ ಅನುಮತಿ ಪಡೆದು ಅವರ ಹೆಸರಿನ ನಾಮ ಫಲಕ ಹಾಕಿಸಲಾಗಿತ್ತು. ರಸ್ತೆ ವಿಸ್ತರಣೆ ಸಂದರ್ಭದಲ್ಲಿ ನಾಮ ಫಲಕವನ್ನು ಕಿತ್ತು ಹಾಕಲಾಗಿತ್ತು. ಒಂದುವರೆ ವರ್ಷಗಳ ಹಿಂದೆ ಮತ್ತೆ ಹೊಸದಾಗಿ ನಾಮಪಲಕವನ್ನು ಬರೆಸಿ ಅನಾವರಣಗೊಳಿಸಲಾಗಿತ್ತು. ಆದರೆ ಸ್ಥಳೀಯ ಕೆಲ ಕಿಡಿಗೇಡಿಗಳು ನಗರದಲ್ಲಿ ಗಲಬೆ ಸೃಷ್ಠಿಸುವ ಸಲುವಾಗಿಯೇ ನಾಮಫಲಕಕ್ಕೆ ಮಸಿ ಬಳಿಯಲಾಗಿದೆ. ಪೊಲೀಸರು ಸುತ್ತಮುತ್ತಲಿನ ಸಿಸಿ ಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಇಂತಹ ಕೃತ್ಯಗಳು ನಗರದಲ್ಲಿ ಮರುಕಳಿಸದಂತೆ ತಡೆಯಬೇಕು ಎಂದು ಆಗ್ರಹಿಸಿದರು.

ದೊಡ್ಡಬಳ್ಳಾಪುರದಲ್ಲಿ ಮಾ.ರಾಮಮೂರ್ತಿ ಅವರ ನಾಮಫಲಕಕ್ಕೆ ಮಸಿ ಬಳಿದಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಮರೇಶ್ ಅವರಿಗೆ ಕನ್ನಡಪರ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿದರು.

ಸಭೆಯಲ್ಲಿ ನಗರದ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳಾದ ಡಿ.ಪಿ.ಅಂಜನೇಯ,ಆರ್.ಕೆಂಪರಾಜ್,ಬಿ.ಎಸ್.ಚಂದ್ರಶೇಖರ್,ಶ್ರೀನಿವಾಸ್,ಮುನಿಪಾಪಯ್ಯ,ರಮೇಶ್,ಜನಪರಮಂಜುನಾಥ್,ಚೌಡರಾಜ್,ಗುರುರಾಜ್,ಸೂರಿ,ವೆಂಕಟೇಶ್ ಇದ್ದರು.

Leave a Reply

Your email address will not be published. Required fields are marked *