ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ವಿವೇಚನೆ ಮತ್ತು ಜವಾಬ್ದಾರಿ‌……..

ರಾಜಕೀಯ ಪಕ್ಷಗಳ ಭಿನ್ನಮತದ ಸುತ್ತ, ಅಧಿಕಾರ ಕುರ್ಚಿಯ ಹಾವು ಏಣಿ ಆಟದ ಸುತ್ತ, ಸ್ವಾಮೀಜಿಗಳ ಪೀಠದ ಸುತ್ತ, ಧರ್ಮಸ್ಥಳದ ನಿಗೂಢ ಸಾವುಗಳ ಸುತ್ತ, ಚಲನಚಿತ್ರ ನಟನೊಬ್ಬನ ಕೊಲೆಯ ಸುತ್ತ, ಆತನ ಅಭಿಮಾನಿಗಳ ಮತ್ತು ವಿರೋಧಿಗಳ ಹುಚ್ಚಾಟದ ಸುತ್ತ, ಇದಕ್ಕೆಲ್ಲ ಪ್ರತಿಕ್ರಿಯಿಸುವ ಮತ್ತಷ್ಟು ಸಿನಿಮಾ, ರಾಜಕೀಯ ವ್ಯಕ್ತಿಗಳ ಸುದ್ದಿಯ ಸುತ್ತ, ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು, ಬೀದಿ ಬದಿಯ ಅಂಗಡಿಗಳು ಎಲ್ಲವೂ ಕೇಂದ್ರೀಕೃತವಾಗಿ ಇಡೀ ಸಮೂಹ ಈ ರೀತಿಯ ಸನ್ನಿಗೆ ಒಳಗಾಗಿ, ಋಣಾತ್ಮಕ ವಿಷಯಗಳ ಸುತ್ತಲೇ ಸುತ್ತುತ್ತಾ, ಇಡೀ ಸಮಾಜವೇ ಹೀಗಿರಬೇಕು ಎಂದು ಯುವ ಜನಾಂಗ ಭಾವಿಸುವಂತಾದರೆ, ನಿಜವಾದ ಪ್ರಗತಿಪರ, ವೈಜ್ಞಾನಿಕ, ವೈಚಾರಿಕ, ಕ್ರಿಯಾತ್ಮಕ, ಸಾಹಸಮಯ, ಸಾಧಕ ಮನೋಭಾವದ ಮುಂದಿನ ಜನಾಂಗ ಸೃಷ್ಟಿಯಾಗುವುದಾದರೂ ಹೇಗೆ ?

ಎಲ್ಲಾ ಬ್ರೇಕಿಂಗ್ ನ್ಯೂಸ್ ಗಳು, ಭಾವನಾತ್ಮಕ ವಿಷಯಗಳು, ಪ್ರಚೋದನಕಾರಿ ಮತ್ತು ವಿಭಜನಕಾರಿ ಸುದ್ದಿಗಳು, ಮನ ಕೆರಳಿಸುವ ಮನರಂಜನೆಗಳು, ಅತ್ಯಾಚಾರ, ರಾಜಕೀಯ ಕುತಂತ್ರ, ವಂಚನೆ, ಭ್ರಷ್ಟಾಚಾರ ಇವುಗಳ ಸುತ್ತಲೇ ಸುತ್ತುತ್ತಿದ್ದರೆ ನಮ್ಮ ಮಕ್ಕಳು ಕಲಿಯುವುದಾದರೂ ಏನನ್ನು ?

ಕ್ರೀಡಾ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳೇನು ?
ಸಾಹಿತ್ಯ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಗಳೇನು ?
ಸಂಗೀತ ಕ್ಷೇತ್ರದಲ್ಲಿ ಆಗುತ್ತಿರುವ ಪರಿವರ್ತನೆಗಳೇನು ?
ವಿಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಪ್ರಯೋಗಗಳೇನು ?
ಕಲಾ ಕ್ಷೇತ್ರದಲ್ಲಿ ಆಗುತ್ತಿರುವ ಸಾಧನೆಗಳೇನು ?
ಶೈಕ್ಷಣಿಕ ಕ್ಷೇತ್ರದಲ್ಲಿ ಆಗುತ್ತಿರುವ ಪ್ರಗತಿಯೇನು ?
ವೈದ್ಯಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಅಭಿವೃದ್ಧಿಯೇನು ?
ತಂತ್ರಜ್ಞಾನದಲ್ಲಿ ಆಗುತ್ತಿರುವ ಕ್ರಾಂತಿಯೇನು ?

ಕೃಷಿ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳೇನು ?
ಪರಿಸರದ ಮೇಲೆ ಆಗುತ್ತಿರುವ ದೌರ್ಜನ್ಯವೇನು ?
ಆಹಾರ ಕ್ಷೇತ್ರದಲ್ಲಿ ಆಗುತ್ತಿರುವ ವಿಷಪೂರಿತ ಕಲಬೆರಕೆಯ ಅಪಾಯಗಳೇನು ?
ಮಾನವೀಯ ಮೌಲ್ಯಗಳು ನಶಿಸುತ್ತಿರುವುದಕ್ಕೆ ಕಾರಣಗಳೇನು ?
ಅಪಘಾತ, ಅಪರಾಧ, ಆತ್ಮಹತ್ಯೆ, ಅನಾರೋಗ್ಯ ಇವುಗಳನ್ನು ತಡೆಯುವ ಉಪಾಯಗಳೇನು ?

ಹೀಗೆ ನಾನಾ ರೀತಿಯ ಅತ್ಯಮೂಲ್ಯ, ಅತ್ಯುಪಯುಕ್ತ ಅಂಶಗಳ ಬಗ್ಗೆ ಚರ್ಚಿಸುವುದನ್ನು ಬಿಟ್ಟು ತಾತ್ಕಾಲಿಕವಾಗಿ, ಈ ಕ್ಷಣದ ಮನಸ್ಸಿನ ಕುತೂಹಲ ತಣಿಸಲು ಹೋಗಿ ಮಾನಸಿಕ ಕ್ಷೋಭೆಗೊಳಗಾಗಿ ತೀರಾ ಅಸಹ್ಯಕರ, ಅನಾಹುತಕಾರಿ ವಿಷಯಗಳನ್ನೇ ಎಲ್ಲೆಡೆಯೂ ಚರ್ಚೆಗೊಳಪಡಿಸುತ್ತಾ, ಇದೇ ಸಮಾಜದ ನೈಜ ಮುಖ ಎಂದು ಬಿಂಬಿಸಿದರೆ ಯುವಕ ಯುವತಿಯರ ಮನಸ್ಸಿನಲ್ಲಿ ಚಿಂತನೆ ರೂಪುಗೊಳ್ಳುವ ಭವಿಷ್ಯದ ಗತಿಯೇನು ?

ಯಾವುದೇ ಸಭೆ ಸಮಾರಂಭಗಳಲ್ಲಿ ಭಾಷಣ, ಸಂವಾದ, ಉಪದೇಶ, ಉಪನ್ಯಾಸ, ಪ್ರವಚನಗಳಲ್ಲಿ ಒಳ್ಳೆಯ ವಿಷಯಗಳನ್ನೇ ಹೇಳುತ್ತಾ, ವಾಸ್ತವದಲ್ಲಿ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾ, ಸಮಾಜವು ವಿರುದ್ಧ ದಿಕ್ಕಿನಲ್ಲಿಯೇ ಚಲಿಸುತ್ತಿರುವಾಗ ನಮ್ಮ ಮಾತುಗಳಿಗೆ, ಬರಹಗಳಿಗೆ ಅರ್ಥವಿದೆಯೇ ?

ಸಮಾಜಕ್ಕೆ ಮಾದರಿಯಾಗಿ ಬದುಕನ್ನು ಅರ್ಥಪೂರ್ಣವಾಗಿ ಜೀವಿಸುತ್ತಾ, ಒಳ್ಳೆಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಗಳೇ ಇಂತಹ ವಿಕೃತ ಮನಸ್ಥಿತಿಯನ್ನು ಸಮಾಜಕ್ಕೆ ಹರಡಿದರೆ ಭವಿಷ್ಯದ ದಿನಗಳು ಅತ್ಯಂತ ಆತಂಕಕಾರಿಯಾಗುವುದರಲ್ಲಿ ಯಾವ ಸಂದೇಹವೂ ಇಲ್ಲ.

ನಾವು ಮಾಡಬೇಕಾಗಿರೋದು ಧನಾತ್ಮಕವಾದ, ಕ್ರಿಯಾತ್ಮಕವಾದ, ಪ್ರಗತಿಪರವಾದ, ವಿಶಾಲ ಮನೋಭಾವದ ಮನಸ್ಥಿತಿಯನ್ನು ರೂಪಿಸುವುದು ಮತ್ತು ಅದಕ್ಕೆ ಪೂರಕವಾದ ಅಂಶಗಳನ್ನು, ಅವಕಾಶಗಳನ್ನು ಚರ್ಚೆಗೊಳಪಡಿಸುವುದು ಬಹಳ ಮುಖ್ಯ.

ಕೇವಲ ಜನಪ್ರಿಯತೆ ಇದೆ ಅಥವಾ ಹೆಚ್ಚು ಜನರು ಗಮನಿಸುತ್ತಾರೆ, ನಮಗೆ ಹೆಚ್ಚಿನ ಆದಾಯ ಬರಬಹುದು, ಅಧಿಕ ವೀಕ್ಷಕರು, ಲೈಕ್ ಗಳು ಬರಬಹುದು ಎಂಬ ಕಾರಣದಿಂದ ವಿಕಾರಿ, ವಿಕೃತ, ವಿಚಿತ್ರ, ವಿನಾಶಕಾರಿ ಮನಸ್ಥಿತಿಯ ವ್ಯಕ್ತಿಗಳ ಮುಂದೆ ಪೆನ್ನು, ಪೇಪರ್, ಕ್ಯಾಮೆರಾ, ಮೈಕು, ಮೊಬೈಲುಗಳನ್ನು ಹಿಡಿದುಕೊಂಡು, ಅವರಿಗೆ ಮುಖ್ಯವಾಹಿನಿ ಅತಿಮುಖ್ಯ ಮತ್ತು ಅತ್ಯಂತ ಆಳ ಅಧ್ಯಯನ, ಚಿಂತನೆ, ವಿವೇಚನೆ ಬಳಸಬೇಕಾದ ಪ್ರಶ್ನೆಗಳನ್ನು ಕೇಳಿ ಅವರ ತೀರಾ ಬಾಲಿಶ, ಅಪ್ರಬುದ್ಧ ಜೊತೆಗೆ ಅತ್ಯಂತ ವಿವೇಚನಾ ರಹಿತ, ಸಮಗ್ರ ಚಿಂತನೆ ಇಲ್ಲದ ಅಪಾಯಕಾರಿ ಉತ್ತರಗಳನ್ನೇ, ನಡವಳಿಕೆಗಳನ್ನೇ ಬ್ರೇಕಿಂಗ್ ನ್ಯೂಸ್ ಮಾಡುತ್ತಾ ಜನರನ್ನು ಹಾದಿ ತಪ್ಪಿಸುತ್ತಿರುವ ಬೇಜವಾಬ್ದಾರಿ ಕೆಲಸಗಳನ್ನು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳು ಮಾಡುತ್ತಿವೆ.

ಆದರ್ಶಮಯ, ಸಾಧ್ಯವಾದಷ್ಟು ಪರಿಪೂರ್ಣ ವ್ಯಕ್ತಿತ್ವವನ್ನು ಹೊಂದಿರುವ, ಸಮಾಜಕ್ಕೆ ಮಾದರಿಯಾದ, ನಡೆ – ನುಡಿ ಸಂಸ್ಕೃತಿಯಲ್ಲಿ ಹೆಚ್ಚಿನ ಅಂತರವಿಲ್ಲದ, ಅಧ್ಯಯನ,
ಚಿಂತನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ, ಸಮಾಜದ ಬಗ್ಗೆ ಕಾಳಜಿ ಹೊಂದಿರುವ, ವಿಶಾಲ ಮನೋಭಾವದ ವ್ಯಕ್ತಿತ್ವವನ್ನು ಹೊಂದಿರುವ ವ್ಯಕ್ತಿಗಳನ್ನು ಸಮಾಜ ಗುರುತಿಸಬೇಕಿದೆ. ಮುಖ್ಯವಾಗಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ಯಾವ ವಿಷಯವನ್ನು ಯಾರಿಂದ ಮಾತನಾಡಿಸಬೇಕು, ಯಾವ ವಿಷಯಕ್ಕೆ ಪ್ರಾಮುಖ್ಯತೆ ಕೊಡಬೇಕು, ಅದರಲ್ಲಿ ನಮ್ಮ ಜವಾಬ್ದಾರಿ ಏನು ಮುಂತಾದ ವಿಷಯಗಳನ್ನು ಅತ್ಯಂತ ತಾಳ್ಮೆಯಿಂದ ವಿವೇಚಿಸಿ ನಿರ್ಧಾರ ಕೈಗೊಳ್ಳಬೇಕು.

ಧನಾತ್ಮಕ ವಿಷಯಗಳನ್ನು, ಅವು ಎಷ್ಟೇ ಕಠಿಣವಾದರೂ ಸತ್ಯವನ್ನೇ, ವಾಸ್ತವವನ್ನೇ ಸುದ್ದಿಯಾಗಿಸುವ ನೈತಿಕ ಪ್ರಜ್ಞೆಯನ್ನು ಇಟ್ಟುಕೊಂಡು ಕೆಲಸ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಯೋಚಿಸೋಣ. ನಮ್ಮೆಲ್ಲಾ ನಡೆ ನುಡಿಗಳು ಮುಂದಿನ ಪೀಳಿಗೆಗೆ ಮಾದರಿಯಾಗಿರಲಿ. ಅದೇ ಈ ಸಮಾಜಕ್ಕೆ, ಈ ದೇಶಕ್ಕೆ, ನಮ್ಮ ಜನಗಳಿಗೆ ನಾವು ಕೊಡಬಹುದಾದ ಬಹುದೊಡ್ಡ ಕೊಡುಗೆ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Leave a Reply

Your email address will not be published. Required fields are marked *

error: Content is protected !!