ದೊಡ್ಡಬಳ್ಳಾಪುರ: ದೇಶದ ಪ್ರಗತಿಗೆ ಅಡ್ಡಿಯಾಗುತ್ತಿರುವ ಮಾದಕ ವ್ಯಸನದಿಂದ ಯುವಜನತೆ ದೂರವಿರಬೇಕು ಎಂದು ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಡಾ.ನವೀನ್ ಕುಮಾರ್ ಎಂ.ಬಿ ಕರೆಕೊಟ್ಟರು.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏರ್ಪಡಿಸಿದ್ದ ಯುವ ಪೀಳಿಗೆಗೆ ಜಾಗೃತಿ ಮೂಡಿಸುವ ಯುವ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಯುವಕರ ಶಕ್ತಿಯನ್ನು ಹಾಳುಗೆಡವಲು ಮಾದಕ ವ್ಯಸನವು ಭೂತದ ತರ ಕಾಡುತಿದೆ. ಬೀಡಿ, ಸಿಗರೇಟ್, ಮದ್ಯಪಾನ, ಜೂಜಾಟದಂತ ಅನೇಕ ದುಶ್ಚಟಗಳಿಂದ ವಿದ್ಯಾರ್ಥಿಗಳು ಹಾಗು ಯುವ ಜನತೆ ಆದಷ್ಟು ದೂರವಿರಬೇಕು. ನಮಗಿರುವ 24 ಗಂಟೆಗಳ ಸಮಯದಲ್ಲಿ ಎಂಟು ಘಂಟೆ ನಿದ್ದೆ ಮತ್ತು ಊಟ ಮತ್ತು ಸ್ವಚ್ಚತೆಗೆ ಮೀಸಲಿಟ್ಟು ದಿನದಲ್ಲಿ ಕನಿಷ್ಟ ಐದು ಗಂಟೆಗಳ ಕಾಲ ಓದಿಗೆ ಮೀಸಲಿಟ್ಟು ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಲಹೆ ನೀಡಿದರು.
ಜೊತೆಗೆ ಮಾದಕ ವ್ಯಸನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ನಂತರ ಮಾತನಾಡಿದ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಾಧಿಕ್ ಪಾಷ, ಸೋಷಿಯಲ್ ಮೀಡಿಯಾದಿಂದ ಆಗುವ ಸೈಬರ್ ವಂಚನೆ, ಆನ್ ಲೈನ್ ಗೇಮಿಂಗ್, ರಮ್ಮೀ ಆಪ್ ಗಳಿಂದ ವಿದ್ಯಾರ್ಥಿಗಳು ಎಚ್ಚರಿಕೆಯಿಂದಿರಬೇಕು. ಇತ್ತೀಚೆಗೆ ಸೈಬರ್ ವಂಚಕರು ಡಿಜಿಟಲ್ ಅರೆಸ್ಟ್ ಎಂಬ ಅಸ್ತ್ರ ಬಳಸಿ ಅನೇಕರಿಂದ ಹಣ ಸುಲಿಗೆ ಮಾಡಲಾಗುತ್ತಿದೆ. ಇಂತಹ ಬಲೆಗಳಿಗೆ ಸಿಲುಕದವರು ಮೊಬೈಲ್ ನಲ್ಲಿ ಕರೆ ಮಾಡುವಾಗ ಬರುವ ಕಾಲರ್ ಟ್ಯೂನ್ ನಲ್ಲಿ ಬರುವ ಸಂಖ್ಯೆಗೆ ಕರೆ ಮಾಡಿ ಸೈಬರ್ ವಂಚಕರ ವಿರುದ್ದ ದೂರು ದಾಖಲು ಮಾಡಲು ತಿಳಿಸಿದರು.
ದೊಡ್ಡಬಳ್ಳಾಪುರ ನಗರ ಠಾಣೆಯ ಇನ್ಸೆಕ್ಟರ್ ಅಮರೇಶ್ ಗೌಡ ಮಾತನಾಡಿ, ನಾವು ಮೊದಲು ಭಯ ಪಡಬೇಕಿರುವುದು ನಾವು ಮಾಡಿದ ತಪ್ಪಿಗೆ. ತಪ್ಪೇ ಮಾಡಿಲ್ಲ ಎಂದಾಗ ಯಾರಿಗೂ ಶಿಕ್ಷೆಯಾಗುವುದಿಲ್ಲ, ವಿದ್ಯಾರ್ಥಿಗಳು ಹಾಗು ಯುವ ಜನತೆ ಐ.ಪಿ.ಎಲ್ ಬೆಟ್ಟಿಂಗ್ ನಂತಹ ದುಶ್ಚಟದಿಂದ ದೂರವಿರಬೇಕು ಮತ್ತು ಅಪ್ರಾಪ್ತರು ಯಾವುದೇ ಕಾರಣಕ್ಕು ವಾಹನ ಚಲಾಯಿಸಬಾರದು. ಚಲಾಯಿಸಿದಲ್ಲಿ ವಾಹನದ ಮಾಲಿಕರಿಗೆ ದಂಡ ಹಾಗು ಒಂದು ವರ್ಷದ ಜೈಲು ಶಿಕ್ಷೆಯು ವಿಧಿಸಲಾಗುತ್ತದೆ. ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಗಮನ ನೀಡಬೇಕು. ಸಾಮಾಜಿಕ ಜಾಲತಾಣದಿಂದ ವಿದ್ಯಾರ್ಥಿಗಳು ಹಾಗು ಯುವ ಜನತೆ ಜಾಗೃತೆಯಿಂದ ಇರಬೇಕು ಎಂದರು.
ಈ ಸಂದರ್ಭದಲ್ಲಿ ಪೋಕ್ಸೋ ಕಾಯಿದೆಯಿಂದ ಆಗುವ ಶಿಕ್ಷೆ ಬಗ್ಗೆ ಸಾಮಾಜಿಕ ಜಾಲತಾಣ ದಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಪ್ರದಾನ ಕಾರ್ಯದರ್ಶಿ ರಾಘವೇಂದ್ರ, ಕಾನೂನು ಸಲಹೆಗಾರರು ವಿಜಯಕುಮಾರ್, ಯುವ ಘಟಕದ ರಾಜ್ಯಾದ್ಯಕ್ಷರಾದ ಸತೀಶ್ ಎಂ,ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ್ ಡಿ.ಉಪ್ಪಾರ್, ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆಯ ರಾಜ್ಯ ಸಂಚಾಲಕರಾದ ಕೆ.ಹೆಚ್ ವೆಂಕಟೇಶ್, ಸಂಘಟನೆಯ ಉಪಾದ್ಯಕ್ಷ ಸುಮೇಶ್, ವಿನಯಗೌಡ, ಸಂಘಟನ ಕಾರ್ಯದರ್ಶಿ ಶಂಕರನಾಗ್, ಹೋಬಳಿ ಆದ್ಯಕ್ಷ ದರ್ಶನ್, ಉಪನ್ಯಾಸಕರಾದ ಭಾಸ್ಕರ್, ಪ್ರಭಾಕರ್, ಸತೀಶ್ ಸೇರಿದಂತೆ ಕಾರ್ಯಕರ್ತರು, ಸರ್ಕಾರಿ ಪದವಿ ಪೂರ್ವ ಕಾಲೇಜು, ಶ್ರೀವಾಣಿ ಪಿಯು ಕಾಲೇಜು, ಜಾಲಪ್ಪ ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.