ಮಾದಕ ವಸ್ತು ಮುಕ್ತ ರಾಜ್ಯವನ್ನಾಗಿಸಲು ಕಟ್ಟುನಿಟ್ಟಿನ ಕ್ರಮ- ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್

ರಾಜ್ಯದ ಎಲ್ಲ ಪೊಲೀಸ್ ಠಾಣೆಗಳು ಮತ್ತು ಸಂಬಂಧಿಸಿದ ಇಲಾಖೆಗಳಿಗೆ ಮ್ಯಾಪ್-ಡ್ರಗ್ಸ್ ಆ್ಯಪ್ ಬಳಕೆ ಕುರಿತು ತರಬೇತಿ ನೀಡಿ, ಪ್ರತಿ ಜಿಲ್ಲೆಗಳಿಗೂ ಮಾದಕ ವಸ್ತುಗಳ ನಿಯಂತ್ರಣಕ್ಕೆ ಗುರಿ ನಿಗದಿಪಡಿಸಿ, ರಾಜ್ಯವನ್ನು ಮಾದಕ ಮುಕ್ತ ರಾಜ್ಯವನ್ನಾಗಿಸಲು ಗುರಿ ಹೊಂದಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಸೂಚಿಸಿದರು.

ಡ್ರಗ್ಸ್ ತಡೆಗೆ ಸಂಬಂಧಿಸಿದ ಮಾಹಿತಿ ಕನ್ನಡದಲ್ಲಿಯೂ ಲಭ್ಯವಾಗುವಂತೆ ವೆಬ್‌ಸೈಟ್ ನವೀಕರಿಸಬೇಕು. ಬೆಳಗಾವಿ ಜಿಲ್ಲೆಯಲ್ಲಿ ಅನುಸರಿಸುತ್ತಿರುವ ಕ್ರಮವನ್ನು ಮಾದರಿಯಾಗಿಸಿಕೊಂಡು ಇತರೆ ಜಿಲ್ಲೆಗಳು ಅನುಸರಿಸಲು ಸೂಚನೆ ನೀಡಿದರು. ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ತಡೆಯಲು ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಚುರುಕುಗೊಳಿಸಬೇಕು, ಕಸ್ಟಮ್ಸ್ ಅಧಿಕಾರಿಗಳನ್ನು ಸಮಿತಿಗೆ ಆಹ್ವಾನಿಸಲು ನಿರ್ದೇಶನ ನೀಡಿದರು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನಿರ್ದೇಶನದಂತೆ ‘ಮಾದಕಮುಕ್ತ ರಾಜ್ಯ’ ನಿರ್ಮಾಣದ ದಿಶೆಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ನೋಂದಾಯಿತವಲ್ಲದ ಔಷಧ ಕಂಪನಿಗಳನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು. ಎಲ್ಲ ಔಷಧ ಅಂಗಡಿಗಳ ಮುಂದೆ “ವೈದ್ಯರ ಅನುಮತಿಯಿಲ್ಲದೆ ಮಾರಾಟ ನಿಷೇಧ” ಎಂಬ ಫಲಕ ಕಡ್ಡಾಯವಾಗಿ ಅಳವಡಿಸಲು ಕ್ರಮ ಜರುಗಿಸಬೇಕು. ವ್ಯಸನ ಮುಕ್ತ ಕೇಂದ್ರಗಳ ನಿರ್ವಹಣೆಗೆ ಸುಧಾರಿತ ಕಾರ್ಯಾಚರಣೆ ವಿಧಾನಗಳನ್ನು (ಎಸ್ ಓ ಪಿ) ರೂಪಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಜಿಲ್ಲಾಧಿಕಾರಿಗಳು ಪ್ರತಿ ತಿಂಗಳಿಗೊಮ್ಮೆ ಒಂದು ಕೇಂದ್ರಕ್ಕೆ ಭೇಟಿ ನೀಡಿ ವರದಿ ಸಲ್ಲಿಸಲು ಸೂಚಿಸಿದರು.

ಹಾಸ್ಟೇಲುಗಳಲ್ಲಿ ಡ್ರಗ್ ಟೆಸ್ಟಿಂಗ್ ಕಿಟ್ ಬಳಸಿ ವಿದ್ಯಾರ್ಥಿಗಳನ್ನು ಪರೀಕ್ಷಿಸಿ ರಕ್ಷಿಸಬೇಕು. ಪಾಸಿಟಿವ್ ಪ್ರಕರಣಗಳ ವಿರುದ್ಧ ಕ್ರಮ ಜರುಗಿಸಬೇಕು. ಎಎನ್‌ಟಿಎಫ್ ಮಾದರಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಉಪಸಮಿತಿಗಳನ್ನು ರಚಿಸಬೇಕು. ಕೆಂಪು ಪಟ್ಟಿಯಲ್ಲಿರುವ ಔಷಧಗಳ  ಮಾರಾಟ ನಿಯಂತ್ರಿಸಲು ಮೇಲ್ವಿಚಾರಣೆ ಕಾರ್ಯ ಬಲಗೊಳಿಸಬೇಕು ಎಂದು ಮುಖ್ಯ ಕಾರ್ಯದರ್ಶಿಗಳು ಸ್ಪಷ್ಟ ನಿರ್ದೇಶನಗಳನ್ನು ನೀಡಿದರು.

Leave a Reply

Your email address will not be published. Required fields are marked *

error: Content is protected !!