ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಮಾದಕ ವಸ್ತುಗಳಿಗೆ ದಾಸರಾಗಿ ದೈಹಿಕ ಹಾಗೂ ಮಾನಸಿಕವಾಗಿ ತಮ್ಮ ಆರೋಗ್ಯವನ್ನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಾದಕ ವಸ್ತು ಸೇವನೆ, ಮಾರಾಟ ಹಾಗೂ ಸಾಗಾಟ ಕಾನೂನಿನ ಪ್ರಕಾರ ಅಪರಾಧ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಜೊತೆ ನಾವು, ನೀವು ಕೈಜೋಡಿಸಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕಾಗಿದೆ ಎಂದು ನಟಿ ಪೂಜಾಗಾಂಧಿ ತಿಳಿಸಿದರು.
ಇಂದು ನಗರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್, ದೊಡ್ಡಬಳ್ಳಾಪುರ ಪೊಲೀಸ್ ಉಪವಿಭಾಗದ ವತಿಯಿಂದ ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಜಾಥಾ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಕೆಟ್ಟ ಚಟ, ಕೆಟ್ಟ ಆಲೋಚನೆಗಳಿಂದ ಹೊರಬಂದು ಆರೋಗ್ಯಯುತವಾಗಿ ಜೀವನ ನಡೆಸಬೇಕು. ಎಲ್ಲಿಯಾದರೂ ಮಾದಕವಸ್ತುಗಳ ಬಳಕೆ ಕಂಡುಬಂದಲ್ಲಿ ಕೂಡಲೇ ಪೊಲೀಸರ ಗಮನಕ್ಕೆ ತೆಗೆದುಕೊಂಡು ಬರಬೇಕು ಎಂದು ಹೇಳಿದರು.
ನಂತರ ನಟ ಗುರುನಂದನ್ ಮಾತನಾಡಿ, ಮಾದಕ ವಸ್ತುಗಳ ಬಳಕೆ ಮಾರಕರೋಗವಾಗಿ ಬೆಳೆಯುತ್ತಿರುವುದು ವಿಷಾದನೀಯವಾಗಿದೆ. ಒತ್ತಡ ಇದ್ದಾಗ ಯೋಗ ಮಾಡುವುದು, ಸಂಗೀತ ಕೇಳುವುದು, ಸಿನಿಮಾ ನೋಡುವುದು, ಕ್ರೀಡೆ, ಪ್ರವಾಸ, ಸೇರಿದಂತೆ ಇತರೆ ಒಳ್ಳೆ ಮನರಂಜನಾ ಚಟುವಟಿಕೆಗಳನ್ನು ಮಾಡಿ, ಆದರೆ ಮಾದಕ ವಸ್ತುಗಳ ಚಟಕ್ಕೆ ಬಲಿಯಾಗಬೇಡಿ ಎಂದು ತಿಳಿಸಿದರು.
ಒಂದು ಬಾರಿ ಮಾದಕ ವ್ಯಸನಿಗಳಾದರೆ ವೈಯಕ್ತಿಕ ಬದುಕು ಹಾಳಾಗುವುದಲ್ಲದೇ ಕುಟುಂಬ, ಸಮಾಜಕ್ಕೂ ಬೇಡದವರಾಗುತ್ತೀರಿ, ಆದ್ದರಿಂದ ಎಲ್ಲರಿಗೂ ಉಜ್ವಲ ಭವಿಷ್ಯ ಇರುತ್ತದೆ ಅದನ್ನ ಸಾಕಾರಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ ಪಿಗಳಾದ, ಪುರುಷೋತ್ತಮ, ನಾಗರಾಜ್, ಡಿವೈಎಸ್ ಪಿ ರವಿ.ಪಿ, ನಗರ ಠಾಣಾ ಇನ್ಸ್ ಪೆಕ್ಟರ್ ಅಮರೇಶ್ ಗೌಡ, ಗ್ರಾಮಾಂತರ ಠಾಣಾ ಇನ್ಸ್ ಪೆಕ್ಟರ್ ಮುನಿಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.