ಕೂಸು ಇದ್ದ ಮನಿಗ ಬೀಸಣಿಕೆ ಯಾತಕ ? ಕೂಸು ಕಂದಯ್ಯ ಒಳ ಹೊರಗ ಆಡಿದರ ಬೀಸಣಿಕೆ ಗಾಳಿ ಸುಳಿದಾವ.
ನಮ್ಮ ಜನಪದರು ಕೂಸುಗಳ ಬಗೆಗೆ ಕಟ್ಟಿದ್ದ ಹಾಡು ಮಕ್ಕಳ ಪಾಲನೆಯನ್ನು ತಿಳಿಸುತ್ತದೆ.
ಇಂದು ವಿಭಜಿತ ಕುಟುಂಬಗಳ ವ್ಯವಸ್ಥೆ ಯಿಂದಾಗಿ ಗಂಡ ಹೆಂಡತಿಯರಿಬ್ಬರೂ ದುಡಿಯಲು ಹೋಗುವ ಅನಿವಾರ್ಯತೆ ಮಕ್ಕಳನ್ನು ನೋಡಿಕೊಳ್ಳವುದುಕಷ್ಟವಾಗುತ್ತಿದೆ.
ನರೇಗಾ ಸೇರಿದಂತೆ ಇತರೆ ಗ್ರಾಮೀಣ ಉದ್ಯೋಗಗಳಲ್ಲಿ ಕೆಲಸಗಳಲ್ಲಿ ದುಡಿಯುವ ಮಹಿಳೆಯರ ನೆರವಿಗೆ ಬಂದಿರುವ ರಾಜ್ಯ ಸರ್ಕಾರ ಮಹಿಳೆಯರು ದುಡಿಯುವ ಸ್ಥಳಗಳ ಸಮೀಪ ” ಕೂಸಿನ ಮನೆ” ತೆರೆಯುವ ಮೂಲಕ ಗ್ರಾಮೀಣ ಉದ್ಯೋಗಿ ಮಹಿಳೆಯರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ದುಡಿಯುವ ಗ್ರಾಮೀಣ ಮಹಿಳೆಯರ ಕಷ್ಟವನು ಮನಗಂಡ ಕರ್ನಾಟಕ ಸರ್ಕಾರ 2023 ರಲ್ಲಿ ದುಡಿವ ಮಹಿಳೆಯರ ನೆರವಿಗೆ ಬಂದು ಕೂಸಿನ ಮನೆಗಳನ್ನು ಆರಂಭಿಸಿತು.
ಇಂದು ದುಡಿಯುವ ವರ್ಗದ ಮಹಿಳೆಯರ ಮೂರು ವರ್ಷದೊಳಗಿನ ಕಂದಮ್ಮಗಳು ಸುರಕ್ಷತೆ ಹಾಗೂ ಪೂರಕ ಪೌಷ್ಠಿಕ ಆಹಾರದೊಂದಿಗೆ ಕೂಸಿನ ಮನೆಯ ಬೆಚ್ಚಗಿನ ವಾತಾವರಣದಲ್ಲಿ ಬೆಳೆಯುತ್ತಿವೆ ಇದರಿಂದಾಗಿ ತಾಯಂದಿರು ನಿಶ್ಚಿಂತೆಯಿಂದ ನರೇಗ ಕೆಲಸ ಮಾಡುವ ಮೂಲಕ ಅವರ ಸಂಸಾರದಲ್ಲಿ ಸಾಮರಸ್ಯ ಮೂಡಿದೆ.
ರಾಜ್ಯ ಸರ್ಕಾರ ರಾಜ್ಯದ 4 ಸಾವಿರ ಗ್ರಾಮ ಪಂಚಾಯತಿಗಳಲ್ಲಿ ನರೇಗ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಕೂಸಿನ ಮನೆಗಳನ್ನು ಮುನ್ನೆಡಸುತ್ತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತಿ ಹೆಚ್ಚು ಮಾನವ ದಿನಗಳನ್ನು ಸೃಜಿಸಿರುವ 79 ಗ್ರಾಮ ಪಂಚಾಯತಿಗಳಲ್ಲಿ ಕೂಸಿನ ಮನೆಗಳನ್ನು ಆರಂಭಿಸಲಾಗಿದ್ದು 6 ತಿಂಗಳಿನಿಂದ 3 ವರ್ಷದ ವರೆಗಿನ ಮಕ್ಕಳು ಇದ್ದಾರೆ.
ನರೇಗ ಕೂಲಿ ಕಾರ್ಮಿಕರಲ್ಲಿ ಉದ್ಯೋಗ ಚೀಟಿ ಹೊಂದಿ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರುವ ಮಹಿಳೆಯರಲ್ಲಿ 25 ವರ್ಷ ಮೇಲ್ಪಟ್ಟ ಹಾಗೂ 45 ವರ್ಷದೊಳಗಿನ ಮಹಿಳೆಯರನ್ನೇ ಕೇರ್ ಟೇಕರ್ಸ್ ಗಳನ್ನಾಗಿ ಆಯ್ಕೆ ಮಾಡಲಾಗುತ್ತದೆ.
ಬೆಳಿಗ್ಗೆ 9 ರಿಂದ ಮಧ್ಯಾಹ್ನ 3.30 ರವರಗೆ ಕೂಸಿನ ಮನೆ ಅವಧಿಯಾಗಿದ್ದು, ಇಲ್ಲಿ ಕಾರ್ಯ ನಿರ್ವಹಿಸುವ ಇಬ್ಬರು ಆರೈಕೆದಾರರಿಗೆ ತಾಲೂಕು ಹಂತದಲ್ಲಿ 7 ದಿನಗಳ ತರಬೇತಿಯಲ್ಲಿ ಮಕ್ಕಳ ಆರೈಕೆ ವಿಧಾನ, ಆಹಾರ ತಯಾರಿಕೆ, ಶುಚಿತ್ವ ಹಾಗೂ ಕ್ರಿಯಾಶೀಲ ಚಟುವಟಿಕೆಗಳ ತರಬೇತಿ ನೀಡಲಾಗಿರುತ್ತದೆ. ಗೌರವ ಧನವಾಗಿ ನರೇಗಾ ಕೂಲಿಯಂತೆ ಪ್ರತಿದಿನಕ್ಕೆ ತಲಾ 370 ರಂತೆ ಪಾವತಿಸಲಾಗುತ್ತದೆ.
ಮಕ್ಕಳಿಗೆ ಸಮತೋಲಿತ ಆಹಾರವಾಗಿ ಬೆಳಿಗ್ಗೆ 10,30 ಕ್ಕೆ ಹಾಲು ಮತ್ತು ಬೆಲ್ಲದ ಪೌಡರ್ ನೀಡಲಾಗುತ್ತದೆ. ಮಧ್ಯಾಹ್ನ 1,30ಕ್ಕೆ ದಾಲ್ ಕಿಚಡಿ ಹಾಗೂ ಮಧ್ಯಾಹ್ನ 3 ಗಂಟೆಗೆ ನ್ಯೂಟ್ರಿ ಮಿಕ್ಸ್ ಲಾಡು ನೀಡಲಾಗುತ್ತದೆ. ಜಿಲ್ಲೆಯಲ್ಲಿ ಈಗಾಗಲೇ 1211 ಮಕ್ಕಳು ಕೂಸಿನ ಮನೆಗೆ ದಾಖಲಾಗಿವೆ.
ಕೂಸಿನ ಮನೆಯಿಂದಾಗಿ ಮಕ್ಕಳ ಮಾನಸಿಕ ಹಾಗೂ ಬೌದ್ದಿಕ ಅಭಿವೃದ್ಧಿಯೊಂದಿಗೆ ಆಗುವುದರೊಂದಿಗೆ ಮಕ್ಕಳ ಕ್ರಿಯಾಶೀಲ ಬೆಳವಣಿಗೆ ಆಗಲಿದೆ. ಮಕ್ಕಳಿಗೆ ಕಾಲಕಾಲಕ್ಕೆ ಲಸಿಕೆ ಹಾಗೂ ಆರೋಗ್ಯ ತಪಾಸಣೆ ಮಾಡಲಾಗುತ್ತದೆ.
ಕೂಸಿನ ಮನೆಗಳ ಗೋಡೆಗಳ ಮೇಲೆ ಮಕ್ಕಳ ಸ್ನೇಹಿ ಬರಹಗಳು, ಚಿತ್ರಗಳು, ಆಟಿಕೆಗಳು ಮಕ್ಕಳಿಗೆ ಮುದ ನೀಡಲಿವೆ. ಒಂದು ಕೇಂದ್ರದಲ್ಲಿ ಗರಿಷ್ಠ 25 ಮಕ್ಕಳ ದಾಖಲಾತಿಗೆ ಅವಕಾಶವಿದೆ.
ಕೂಸಿನ ಮನೆಗಳ ನಿರ್ವಹಣೆಗೆ ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಮಿತಿಗಳಿರುತ್ತವೆ.
ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಮಿತಿಗಳಿದ್ದು, ಗ್ರಾಮ ಪಂಚಾಯತಿ ಅಧ್ಯಕ್ಷರು ಕೂಸಿನ ಮನೆಯ ಅಧ್ಯಕ್ಷರಾಗಿರುತ್ತಾರೆ. ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿದ್ದು, ಇತರೆ 9 ಮಂದಿ ಸರ್ಕಾರಿ ಹಾಗೂ ಸರ್ಕಾರೇತರ ಸದಸ್ಯರಾಗಿರುತ್ತಾರೆ.
ಈ ಸಮಿತಿಯು ಎಲ್ಲಾ ಕೇರ್ ಟೇಕರ್ಸ್ಗಳಿಗೆ ತರಬೇತಿ ನೀಡಿದ ಬಗ್ಗೆ ಖಾತ್ರಿ ಪಡಿಸಿಕೊಳ್ಳುತ್ತದೆ ಮತ್ತು ಸ್ಥಳೀಯ ಆಹಾರ ಪದ್ದತಿಯನ್ನು ಆಧರಿಸಿ ಆಹಾರ ಪದ್ದತಿ ನಿರ್ಧರಿಸಿ ಜಿಲ್ಲಾ ಸಮಿತಿಗೆ ಶಿಫಾರಸು ಮಾಡುತ್ತದೆ.
ದೇವನಹಳ್ಳಿ ತಾಲೂಕಿನಲಿ 18, ದೊಡ್ಡ ಬಳ್ಳಾಪುರದಲಿ 22, ಹೊಸಕೋಟೆ 22 ಮತ್ತು ನೆಲಮಂಗಲದಲಿ 17 ಕೂಸಿನ ಮನೆಗಳು ಚಟುವಟಿಕೆಯಲ್ಲಿವೆ.
ಅಶೋಕ್ ಕುಮಾರ್. ಡಿ
ವಾರ್ತಾ ಇಲಾಖೆ ಉಪನಿರ್ದೇಶಕರು, ಬೆಂಗ್ರಾ.