
ದೊಡ್ಡಬಳ್ಳಾಪುರ : ಪಿತ್ರಾರ್ಜಿತವಾಗಿ ಬಂದಿದ್ದ ಆಸ್ತಿಯಲ್ಲಿ ಮಾಜಿ ಯೋಧ ಮನೆ ಕಟ್ಟಿಕೊಂಡು ವಾಸವಾಗಿದ್ದರು. ಇದೀಗ ಪಕ್ಕದ ಜಮೀನಿನವರು ದೌರ್ಜನ್ಯದಿಂದ ಮನೆಯ ಸುತ್ತ ತಂತಿ ಬೇಲಿಯನ್ನ ಹಾಕಿ ದಿಗ್ಬಂಧನ ಮಾಡಿದ್ದಾರೆ. ಮನೆಯಿಂದ ಹೊರಕ್ಕೆ ಮತ್ತು ಒಳಕ್ಕೆ ಹೋಗದಂತೆ ಮಾಡಿದ್ದಾರೆ ಎಂದು ಮಾಜಿ ಯೋಧ ರವಿಕುಮಾರ್ ತಮ್ಮ ಅಳಲು ತೋಡಿಕೊಂಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯ ಗೊಲ್ಲಹಳ್ಳಿಯ ತಾಂಡದ ನಿವಾಸಿ ರವಿಕುಮಾರ್ ಭಾರತೀಯ ಸೇನೆಯ ಮಾಜಿ ಯೋಧ, ನಿವೃತ್ತಿಯ ನಂತರ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಪಿತ್ರಾರ್ಜಿತವಾಗಿ ಬಂದಿದ್ದ ಜಾಗದಲ್ಲಿ ಮನೆಯನ್ನು ಕಟ್ಟಿಕೊಂಡು ವಯಸ್ಸಾದ ತಂದೆ ಮತ್ತು ಹೆಂಡತಿ ಮಕ್ಕಳ ಜೊತೆಯಲ್ಲಿ ವಾಸವಾಗಿದ್ದಾರೆ. ಇಂದು ಅವರ ತಂದೆ ಒಬ್ಬರೇ ಮನೆಯಲ್ಲಿದ್ದಾಗ ದೌರ್ಜನ್ಯದಿಂದ ಮನೆಯ ಸುತ್ತಾ ತಂತಿ ಬೇಲಿಯನ್ನ ಹಾಕಲಾಗಿದೆ ಎಂಬ ಆರೋಪಿಸಲಾಗಿದೆ.

ತಮ್ಮದೇ ಜಾಗವನ್ನ ಅತಿಕ್ರಮಣ ಪ್ರವೇಶ ಮಾಡಿ ಮನೆಯ ಸುತ್ತ ತಂತಿಬೇಲಿ ಹಾಕಿದ್ದಾರೆ ಎಂದು ಆರೋಪಿಸಿರುವ ರವಿಕುಮಾರ್ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಮಾಜಿ ಯೋಧ ರವಿಕುಮಾರ್, 150 ವರ್ಷಗಳ ಪಿತ್ರಾರ್ಜಿತ ಆಸ್ತಿ ಇದು, ಸೈನಿಕನಾಗಿ ನಿವೃತ್ತಿ ಪಡೆದ ನಂತರ ಪಿತ್ರಾರ್ಜಿತವಾಗಿ ಬಂದ ಸುಮಾರು 6 ಗುಂಟೆ ಜಾಗದಲ್ಲಿ ಮನೆಕಟ್ಟಿಕೊಂಡು ವಾಸವಾಗಿದ್ದಾನೆ. ಪಕ್ಕದ ಮನೆಯ ವಾಸಿ ಸುಬ್ರಮಣಿ ಮತ್ತು ಮುನಿಯಪ್ಪರವರು ಈ ಜಾಗ ತಮ್ಮದೆಂದ್ದು, ಇಂದು ನಮ್ಮ ತಂದೆಯವರು ಒಬ್ಬರೇ ಮನೆಯಲ್ಲಿದ್ದಾಗ ಮನೆಯ ಸುತ್ತ ತಂತಿ ಬೇಲಿ ಹಾಕಿದ್ದಾರೆ. ಕೇಳಲು ಹೋದ ನಮ್ಮ ತಂದೆಯನ್ನ ನೂಕಾಡಿದ್ದಾರೆ. ಸರ್ವೆ ಮಾಡಿದ್ದಾಗ ಸುಬ್ರಮಣಿ ನಮ್ಮ ಜಾಗವನ್ನ ಒತ್ತುವರಿ ಮಾಡಿರುವುದು ಬೆಳಕಿಗೆ ಬಂತು, ಆದರೂ ಸಹ ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕೋರ್ಟ್ ನಲ್ಲಿ ತಡೆಯಾಜ್ಞೆ ಇದ್ದರು ಇಂದು ಏಕಾಏಕಿ ಬಂದು ಮನೆಯ ಸುತ್ತ ತಂತಿ ಬೇಲಿ ಹಾಕಿದ್ದಾರೆ, ತಂತಿ ಬೇಲಿಯಿಂದ ಮನೆಯೊಳಕ್ಕೆ ಮತ್ತು ಮನೆಯಿಂದ ಹೊರಗೆ ಬರದಂತೆ ಮಾಡಿದ್ದಾರೆ, ಇತ್ತಿಚೇಗೆ ನನಗೆ ಹೃದಯಾಘಾತವಾಗಿದೆ. ವಯಸ್ಸಾದ ತಂದೆಯವರು ಮನೆಯಲ್ಲಿದ್ದಾರೆ, ನಮಗೆ ರಕ್ಷಣೆ ನೀಡುವಂತೆ ಮತ್ತು ತಂತಿ ಬೇಲಿ ತೆರವು ಮಾಡುವಂತೆ ಪೊಲೀಸರಲ್ಲಿ ಮನವಿ ಮಾಡಿದರು.
ರವಿಕುಮಾರ್ ರವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸುಬ್ರಮಣಿ, ಈ ಹಿಂದೆ ಈ ಜಾಗದಲ್ಲಿ ಕಾಂಪೌಂಡ್ ಇತ್ತು, ಇತ್ತಿಚೇಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾರು ಕಾಂಪೌಂಡ್ ಗೆ ಡಿಕ್ಕಿ ಹೊಡೆದಿತ್ತು, ಇದರಿಂದ ಕಾಂಪೌಂಡ್ ಗೋಡೆ ಸಂಪೂರ್ಣ ಕುಸಿದು ಬಿದ್ದಿತ್ತು, ಕೆಲವು ದಿನಗಳ ಹಿಂದೆ ಕಾಂಪೌಂಡ್ ಅವರಣದಲ್ಲಿದ್ದ ಬೈಕ್ ಸಹ ಕಳವಾಗಿತ್ತು, ಕಳ್ಳಕಾಕರ ಭಯದಿಂದ ಕಾಂಪೌಂಡ್ ಇದ್ದ ಜಾಗದಲ್ಲಿಯೇ ತಂತಿ ಬೇಲಿಯನ್ನ ಅಳವಡಿಕೆ ಮಾಡಲಾಗಿದೆ. ಕೋರ್ಟ್ ತಡೆಯಾಜ್ಞೆ ಇರುವುದು ಅವರ ಜಾಗಕ್ಕೆ, ನಮ್ಮ ಜಾಗದಲ್ಲಿ ನಾವು ತಂತಿ ಬೇಲಿ ಹಾಕಲಾಗಿದೆ ಎಂದರು.