ಮಾಕಳಿ ರೈಲ್ವೆ ನಿಲ್ದಾಣ ಹಾಗೂ ಘಾಟಿ ಸಮೀಪ ಹೆಚ್ಚಾದ ಚಿರತೆ ಹಾಗೂ ಕರಡಿಗಳ ಉಪಟಳ: ಚಿರತೆ, ಕರಡಿ ಹೆಜ್ಜೆಗುರುತು ಪತ್ತೆ; ಜೀವ ಭಯದಲ್ಲಿ ಜನ

ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿ ರೈಲ್ವೆ ನಿಲ್ದಾಣ ಹಾಗೂ ಘಾಟಿ ಕ್ಷೇತ್ರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಹಾಗೂ ಕರಡಿಗಳ ಉಪಟಳ ಹೆಚ್ಚಾಗಿದೆ.

ರೈತರ ಕೃಷಿ ಜಮೀನುಗಳಲ್ಲಿ ಚಿರತೆ ಹಾಗೂ ಕರಡಿಯ ಹೆಜ್ಜೆ ಗುರುತುಗಳು ಕಂಡುಬಂದಿದ್ದು, ರೈತರು ಭಯಭೀತರಾಗಿದ್ದಾರೆ. ಇದೀಗ ಬಿತ್ತನೆ ಮಾಡುವ ಸಮಯ. ರೈತರು ತಮ್ಮ ಕೃಷಿ ಜಮೀನುಗಳಲ್ಲಿ ಬಿತ್ತನೆ ಕಾರ್ಯ ಪ್ರಾರಂಭಿಸಿದ್ದಾರೆ. ರೈತರು ತಮ್ಮ ಹೊಲಗಳಲ್ಲಿ ರಾಗಿ, ಜೋಳ, ಕಾಳುಗಳು ಬಿತ್ತನೆ ಮಾಡುವ ಸಂದರ್ಭದಲ್ಲಿ ಚಿರತೆ ಹಾಗೂ ಕರಡಿಯ ಹೆಜ್ಜೆ ಕಂಡುಬಂದಿದೆ. ಇದನ್ನು ನೋಡಿದ ರೈತರು ಜೀವ ಭಯದಲ್ಲಿ ಹೊಲದಲ್ಲಿ ಕೆಲಸ ಮಾಡುವ ಸ್ಥಿತಿಯಲ್ಲಿ ಇದ್ದಾರೆ.

ಇತ್ತೀಚೆಗೆ ತೋಟದ ಮನೆ ಬಳಿ ಇದ್ದ ಮೂರು ನಾಯಿಗಳನ್ನು ಚಿರತೆ ಹೊತ್ತೊಯ್ದು ಬಲಿ ಪಡೆದಿತ್ತು. ಈ ಕುರಿತು ಅರಣ್ಯ ಇಲಾಖೆ ಗಮನಕ್ಕೆ ತಂದು ತೋಟದ ಮನೆ ಬಳಿ ಬೋನ್ ಇರಿಸಲಾಗಿದೆ. ಆದರೆ, ಚಿರತೆಯು ಬೋನಿಗೆ ಕ್ಯಾರೆ ಎನ್ನದೇ ನಾಯಿಯನ್ನು ಬೇಟೆಯಾಡಲು ಬಂದಿದೆ.  ನಾಯಿ ಬೋನಿನೊಳಗಡೆ ಇದ್ದಿದ್ದರಿಂದ ಬಂದಿದ ದಾರಿಗೆ ಸುಂಕವಿಲ್ಲದಂತೆ ಬರಿಗೈಯಲ್ಲಿ ವಾಪಸ್ ಆಗಿದೆ.

ಇದೀಗ ಚಿರತೆ ಜೊತೆಗೆ ಕರಡಿ ಕೂಡ ರೈತರ ಹೊಲಗಳಲ್ಲಿ ಓಡಾಡಿರುವ ಹೆಜ್ಜೆ ಗುರುತುಗಳು ಕಂಡುಬಂದಿವೆ. ಇದರಿಂದ ಸಾರ್ವಜನಿಕರು ಹಾಗೂ ರೈತರು ಜೀವ ಅಂಗೈಯಲ್ಲಿಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಚಿರತೆ ಹಾಗೂ ಕರಡಿಯನ್ನು ಸೆರೆ ಹಿಡಿದು ಮುಂದೆ ಆಗುವ ಅನಾಹುತವನ್ನು ತಪ್ಪಿಸಬೇಕು ಎಂದು ಜನ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!