
ಹೊಟ್ಟೆ ಪಾಡಿಗಾಗಿ ದೂರದ ಪಶ್ಚಿಮ ಬಂಗಾಳದಿಂದ ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸಕ್ಕಾಗಿ ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿಗೆ ಬಂದಿದ್ದರು. ದಿನನಿತ್ಯ ಕೆಲಸ ಮುಗಿಸಿ ಒಂದೇ ಶೆಡ್ ನಲ್ಲಿ ಮಲಗುತ್ತಿದ್ದರು. ಮಲಗುವ ವೇಳೆ ಸ್ನೇಹಿತ ಆಡಿದ ಆ ಒಂದು ಮಾತಗೆ ಗಲಾಟೆ ಆಗಿದೆ. ಗಲಾಟೆ ಸ್ನೇಹಿತನನ್ನೇ ಬಾರದ ಲೋಕಕ್ಕೆ ಹೋಗುವಂತೆ ಮಾಡಿದೆ. ಸ್ನೇಹಿತನನ್ನೇ ಕೊಲೆ ಮಾಡಿದ ಆರೋಪಿಗಳು ಈಗ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರ ಅತಿಥಿಗಳಾಗಿದ್ದಾರೆ.
ಹೌದು, ಪಶ್ಚಿಮ ಬಂಗಾಳ ಮೂಲದ ಸುಶಾಂತ್ ಸಿಂಗ್ ಮತ್ತು ಸಾಧನ್ ಸಿಂಗ್ ಬಂಧಿತ ಆರೋಪಿಗಳು. ಕೂಲಿ ಕೆಲಸಕ್ಕಾಗಿ ಒಂದೇ ಗ್ರಾಮದ ಸ್ನೇಹಿತರು ದೊಡ್ಡಬಳ್ಳಾಪುರಕ್ಕೆ ಬಂದಿದ್ದರು. ಸೆ.8ರಂದು ಕೆಲಸ ಮುಗಿಸಿ ಮಲಗುವ ವೇಳೆ ಕೈರ್ ಸಿಂಗ್ (29) ಎಂಬಾತ ಜೊತೆಯಲ್ಲಿ ಜಗಳವಾಗುತ್ತದೆ. ಈ ವೇಳೆ ಶೆಡ್ ನಲ್ಲಿದ್ದ ಸ್ನೇಹಿತರು ಮನಸ್ಸಿಗೆ ಬಂದ ಹಾಗೆ ಹಲ್ಲೆ ಮಾಡುತ್ತಾರೆ. ಜಗಳದ ನಡುವೆ ಚಾಕುವಿನಿಂದ ಕುತ್ತಿಗೆಗೆ ಇರಿಯುತ್ತಾರೆ. ಕುತ್ತಿಗೆ ಹಿರಿದ ಕಾರಣ ಕೈರ್ ಸಿಂಗ್ ಗೆ ಗಂಭೀರ ಗಾಯಗಳಾಗಿದ್ದವು, ಕೂಡಲೇ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸೆ.11ರಂದು ಸಾವನಪ್ಪುತ್ತಾನೆ.

ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸುತ್ತಾರೆ.
ಆರೋಪಿಗಳು ಕೊಲೆ ಮಾಡಿ ಪಶ್ಚಿಮ ಬಂಗಾಳಕ್ಕೆ ಎಸ್ಕೇಪ್ ಆಗಿರುತ್ತಾರೆ. ಆರೋಪಿಗಳ ಪತ್ತೆಗಾಗಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪಶ್ಚಿಮ ಬಂಗಾಳಕ್ಕೆ ಹೋಗುತ್ತಾರೆ. ಸ್ಥಳೀಯ ಪೊಲೀಸರ ಸಹಾಯದಿಂದ ಆರೋಪಿಗಳ ಮನೆ ಬಳಿ ಹೋದಾಗ ಮಾರಕಾಸ್ತ್ರಗಳನ್ನು ಹಿಡಿದು ಪೊಲೀಸರ ಮುಂದೆ ರಂಪಾಟ ಮಾಡುತ್ತಾರೆ. ಆದರೂ ಕೂಡ ಆರೋಪಿಗಳನ್ನು ವಶಕ್ಕೆ ಪಡೆಯಲು ಇನ್ಸ್‌ಪೆಕ್ಟರ್ ಸಾಧಿಕ್ ಪಾಷಾ ನೇತೃತ್ವ ತಂಡ ಯಶಸ್ವಿಯಾಗಿದ್ದಾರೆ.

ಕೊಲೆಗೆ ಕಾರಣವಾಗಿದ್ದು ಅಕ್ರಮ ಸಂಬಂಧ. ನೀನು ಮದುವೆ ಆಗಿರುವ ಹುಡುಗಿಯ ಜೊತೆಯಲ್ಲಿ, ನನಗೆ ಮೊದಲು ಸಂಬಂಧವಿತ್ತು. ನಾನು ಅನುಭವಿಸಿದ ಹುಡುಗಿಯನ್ನು ನೀನು ಮದುವೆ ಆಗಿದ್ದೀಯ ಎಂದು ಕೈರ್ ಸಿಂಗ್ ಸ್ನೇಹಿತರ ಮುಂದೆ ಹೇಳಿದಾಗ, ಇಬ್ಬರು ಸ್ನೇಹಿತರು ರೊಚ್ಚಿಗೆದ್ದು, ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಒಟ್ಟಾರೆ, ಕೆಲಸ ಮುಗಿಸಿ ಉಂಡು ಮಲಗುವ ಸಮಯದಲ್ಲಿ ಆಡಿದ ಆ ಒಂದು ಮಾತು, ಒಬ್ಬನನ್ನು ಸ್ಮಶಾನಕ್ಕೆ ಕಳಿಸಿದರು, ಮತ್ತಿಬ್ಬರು ಜೈಲು ಪಾಲಾಗಿದ್ದಾರೆ. ಆರೋಪಿಗಳನ್ನು ಹಿಡಿಯುವಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಇನ್ಸ್‌ಪೆಕ್ಟರ್ ಸಾಧಿಕ್ ಪಾಷಾ ಮತ್ತು ತಂಡ ಯಶಸ್ವಿಯಾಗಿದ್ದಾರೆ.