ಮಹಿಳೆಯ ಜೊತೆ ಯುವಕನ ಅಕ್ರಮ ಸಂಬಂಧದ ಬಗ್ಗೆ ಸಂಶಯಪಟ್ಟ ಗುಂಪೊಂದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ಪೊಲೀಸರ ರಕ್ಷಣೆಯಿಂದ ಯುವಕ ಸಾವಿನ ದವಡೆಯಿಂದ ತಪ್ಪಿಸಿಕೊಂಡಿದ್ದಾನೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌಚೇನಹಳ್ಳಿಯ 20 ವರ್ಷದ ಯುವಕ ಆಕಾಶ್ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದಾನೆ. ಕಳೆದ ಸೋಮವಾರ ದೊಡ್ಡಬಳ್ಳಾಪುರ ತಾಲೂಕಿನ ಮೆಳೇಕೋಟೆ ಕ್ರಾಸ್ಗೆ ಬಂದ ಆಕಾಶ್ನನ್ನು 30 ಜನರ ಗುಂಪು ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದೆ. ರಾಡು, ದೊಣ್ಣೆ, ಕಲ್ಲು ಮತ್ತು ಮುಳ್ಳಿನ ತಂತಿಯಿಂದ ಮನಸೋಯಿಚ್ಛೆ ಹಲ್ಲೆ ಮಾಡಿದ್ದಾರೆ. ಹೊಲದಲ್ಲಿ ಅಟ್ಟಾಡಿಸಿಕೊಂಡು ಹಲ್ಲೆ ಮಾಡಿದ್ದಲ್ಲದೆ ಕಂಬಕ್ಕೆ ಕಟ್ಟಿ ಹೊಡೆದಿದ್ದಾರೆ. ಸಕಾಲಕ್ಕೆ ಸ್ಥಳಕ್ಕೆ ಬಂದ ಪೊಲೀಸರು ಆಕಾಶ್ನನ್ನು ರಕ್ಷಣೆ ಮಾಡಿದ್ದಾರೆ.
ಹಲ್ಲೆಗೊಳಗಾದ ಯುವಕ ಆಕಾಶ್ ಮತ್ತು ಮೆಳೆಕೋಟೆ ಕ್ರಾಸ್ನ ನಿವಾಸಿ ಮಾರುತಿ ಡೈವರ್ ಕೆಲಸ ಮಾಡುತ್ತಿದ್ದರು. ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಕಾರಣಕ್ಕೆ ಸ್ನೇಹಿತರಾಗಿದ್ದರು. ಗಂಡನ ಯೋಗಕ್ಷೇಮ ವಿಚಾರಿಸಲೆಂದ್ದು ಮಾರುತಿ ಪತ್ನಿ ಆಕಾಶ್ಗೆ ಆಗಾಗ ಫೋನ್ ಕರೆ ಮಾಡುತ್ತಿದ್ದಾರಂತೆ.
ಫೋನ್ ಸಂಭಾಷಣೆಯನ್ನೇ ಸಂಶಯಪಟ್ಟ ಮಾರುತಿ ಮತ್ತು ಆತನ ಸ್ನೇಹಿತರು ಆಕೆ ಜೊತೆ ಮಾತಾಡದಂತೆ ಆರು ತಿಂಗಳ ಹಿಂದೆಯೇ ಎಚ್ಚರಿಕೆ ನೀಡಿದ್ದರು. ಕಳೆದ ಸೋಮವಾರ ಮಧ್ಯಾಹ್ನ ಮೊಬೈಲ್ ರಿಪೇರಿಗಾಗಿ ಆಕಾಶ್ ಮೆಳೇಕೋಟೆ ಕ್ರಾಸ್ಗೆ ಹೋಗಿದ್ದ. ಈ ವೇಳೆ ಮಾರುತಿ, ಶ್ರೀನಿವಾಸ್, ಮಂಜುನಾಥ್, ರಘು ಮತ್ತು ನಾಗೇಶ್ ಸೇರಿದಂತೆ 30 ಜನರ ಗುಂಪು ಆಕಾಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಆಕಾಶ್ ಒಬ್ಬ ದಲಿತ ಯುವಕನಾಗಿದ್ದು ಜಾತಿ ನಿಂದನೆ ಸಹ ಮಾಡಿದ್ದಾರೆಂದು ಯುವಕನ ಕಡೆಯವರು ಆರೋಪ ಮಾಡಿದ್ದಾರೆ. ಹಲ್ಲೆಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.