ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆರೋಪ: ದಿಯಾ’ಸಿನಿಮಾದ ನಿರ್ಮಾಪಕ ಕೃಷ್ಣಚೈತನ್ಯ ವಿರುದ್ಧ ಎಫ್ ಐಆರ್

ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆರೋಪ ಸಂಬಂಧ ‘ದಿಯಾ’ಸಿನಿಮಾದ ನಿರ್ಮಾಪಕ ಕೃಷ್ಣಚೈತನ್ಯ ವಿರುದ್ಧ ನಾಗರಿಕ ಹಕ್ಕು ಜಾರಿನಿರ್ದೇಶನಾಲಯ (ಡಿಸಿಆರ್‌ಇ) ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ರಾಜ್ಯ ಸರಕಾರ ಡಿಸಿಆರ್‌ಇ ಠಾಣೆಗಳಿಗೆ ಮಾನ್ಯತೆ ನೀಡಿದ ಬಳಿಕ ರಾಜಧಾನಿಯಲ್ಲಿ ಜಾತಿ ದೌರ್ಜನ್ಯ ಸಂಬಂಧ ದಾಖಲಾದ ಮೊದಲ ಪ್ರಕರಣ ಇದಾಗಿದೆ.
ನೇತಾಜಿ ನಗರದ ನಿವಾಸಿ ಶಶಿಕಲಾ (38) ಎಂಬುವವರು ನೀಡಿದ ದೂರಿನ ಅನ್ವಯ, ಚಿತ್ರ ನಿರ್ಮಾಪಕ ಕೃಷ್ಣಚೈತನ್ಯ, ಸತ್ಯನಾರಾಯಣ ರೆಡ್ಡಿ ಸೇರಿದಂತೆ ಇತರರ ವಿರುದ್ಧ ಪೂರ್ವವಿಭಾಗದ ಡಿಸಿಆರ್‌ಇ ಠಾಣೆಯಲ್ಲಿ ಆ.29ರಂದು ಪ್ರಕರಣ ದಾಖಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ, ಅತಿಕ್ರಮ ಪ್ರವೇಶ, ಹಲ್ಲೆ, ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪಗಳ ಅನ್ವಯ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವರ್ತೂರು ಹೋಬಳಿ ಕಸವನಹಳ್ಳಿ ಗ್ರಾಮದಲ್ಲಿರುವ 3 ಎಕರೆ 35 ಗುಂಟೆ ಜಮೀನನ್ನು ಭೋಗ್ಯಕ್ಕೆ ಪಡೆದಿರುವ ಶಶಿಕಲಾ ಹಾಗೂ ಕೋದಂಡಚಾರಿ ಎಂಬುವವರು ನರ್ಸರಿ ನಡೆಸುತ್ತಿದ್ದಾರೆ. ‘‘ಕೆಲದಿನಗಳ ಹಿಂದೆ ಜಮೀನಿನ ಬಳಿ ಕಾರಿನಲ್ಲಿ ಆಗಮಿಸಿದ್ದ ಕೃಷ್ಣಚೈತನ್ಯ, ಸತ್ಯನಾರಾಯಣ ರೆಡ್ಡಿ ಹಾಗೂ ಇತರರು ಅವಾಚ್ಯ ಶಬ್ಧಗಳಿಂದ ಜಾತಿನಿಂದನೆ ಮಾಡಿದ್ದಾರೆ. ಜತೆಗೆ, ದೇಹದ ಖಾಸಗಿ ಅಂಗಗಳನ್ನು ಮುಟ್ಟಿ ಹಲ್ಲೆ ನಡೆಸಿದ್ದಾರೆ. ಜಮೀನು ಸ್ಥಳ ಬಿಟ್ಟುಕೊಡದಿದ್ದರೆ ಕೊಲೆ ಮಾಡುವ ಬೆದರಿಕೆ ಒಡ್ಡಿದ್ದಾರೆ’’ ಎಂದು ಶಶಿಕಲಾ ದೂರಿನಲ್ಲಿಆರೋಪಿಸಿದ್ದಾರೆ.

ಸ್ಥಳೀಯ ಪೊಲೀಸರ ನಿರ್ಲಕ್ಷ್ಯ ಆರೋಪ..!

ಸಂತ್ರಸ್ತೆ ಶಶಿಕಲಾ ಅವರು ಮೊದಲು ಬೆಳ್ಳಂದೂರು ಠಾಣೆಯಲ್ಲಿ ದೂರು ನೀಡಲು ತೆರಳಿದ್ದು ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ. ಹಲವು ಬಾರಿ ದೂರು ನೀಡಿದರೂ ಸಬೂಬು ಹೇಳಿದ್ದಾರೆ.ಈ ನಿಟ್ಟಿನಲ್ಲಿ  ಪರಿಶಿಷ್ಟ ಜಾತಿ ಹಾಗೂ ಪಂಗಡದ ಮೇಲಿನ ದೌರ್ಜನ್ಯ ತಡೆ ಕಾಯಿದೆ ಪ್ರಕರಣಗಳ ತನಿಖೆ ಸಲುವಾಗಿಯೇ ಸ್ಥಾಪಿಸಲಾಗಿರುವ ಡಿಸಿಆರ್‌ಇ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಕೃತ್ಯ ಎಸಗಿರುವುದು ಕಂಡು ಬಂದಿದ್ದು ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗುವುದು ಎಂದು ಡಿಸಿಆರ್‌ಇ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು

Leave a Reply

Your email address will not be published. Required fields are marked *

error: Content is protected !!