ಮಹಿಳೆಯರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹೆಚ್ಚಾಗಬೇಕು- ನ್ಯಾ. ಜಿ.ಎ.ಮಂಜುನಾಥ್

ಕೋಲಾರ: ಮಹಿಳೆಯರ ಮೇಲೆ ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ನಡೆಯುವ ದೌರ್ಜನ್ಯ ದಬ್ಬಾಳಿಕೆಗಳಿಂದ ರಕ್ಷಣೆಗಾಗಿ ಹಲವಾರು ಕಾನೂನುಗಳಿದ್ದು ಅವುಗಳ ಸದುಪಯೋಗ ಪಡೆದುಕೊಳ್ಳುವ ಕುರಿತಂತೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹೆಚ್ಚಾಗಬೇಕಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ.ಜಿ.ಎ.ಮಂಜುನಾಥ್ ತಿಳಿಸಿದರು.

ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ರಾಷ್ಟ್ರೀಯ ಮಹಿಳಾ ಆಯೋಗ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ “ವಿಧಾನ್ ಸೆ ಸಮಾಧಾನ್” ಅಂಗವಾಗಿ ಮಹಿಳೆಯರಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ವಾಟಿಸಿ ಮಾತನಾಡಿದ ಅವರು ಸರ್ಕಾರಗಳು ಮಹಿಳೆಯರ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿದ್ದು ದೌರ್ಜನ್ಯದ ಮಹಿಳೆಯರಿಗೆ ಉಚಿತ ಕಾನೂನು ಸಲಹೆ ನೀಡಲಾಗುತ್ತಿದೆ. ಕಾನೂನಿನ ಸಲಹೆ ಅವಶ್ಯಕತೆ ಇರುವವರು ಉಚಿತ ಕಾನೂನು ನೆರವು ಪಡೆದುಕೊಳ್ಳಬಹುದಾಗಿದೆ ಎಂದರು.

ಮಹಿಳೆಯರಿಗೆ ಕಾನೂನು ಮೂಲಕ ಸಮಾಧಾನವನ್ನು ಪಡಿಸುವುದು ಹೇಗೆ ಎಂಬುದು ಕಾರ್ಯಕ್ರಮದ ಉದ್ದೇಶವಾಗಿದೆ ಮಹಿಳೆಯರು ತಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆಯೂ ಅರಿವು ಹೊಂದುವುದು ಅಗತ್ಯವಾಗಿದೆ ಕುಟುಂಬ ನಿರ್ವಹಣೆಯಲ್ಲಿ ಹೇಗೆ ತಮ್ಮ ರಕ್ಷಣೆ ಮತ್ತು ಹಕ್ಕುಗಳನ್ನು ಪಡೆಯಲು ಸಾಧ್ಯ ಎಂಬುದನ್ನು ತಾವುಗಳು ತಿಳಿದು ಮತ್ತೊಬ್ಬರಿಗೂ ತಿಳಿಸುವ ಪ್ರಯತ್ನಗಳು ಆಗಬೇಕು ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ನ್ಯಾ.ಸುನಿಲ್ ಎಸ್ ಹೊಸಮನಿ ಮಾತನಾಡಿ ದೇಶಾದ್ಯಂತ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಪ್ರಾಯೋಗಿಕವಾಗಿ ರಾಜ್ಯದ 20 ಜಿಲ್ಲೆಗಳಲ್ಲಿ ನಡೆಯುತ್ತಾ ಇದ್ದು ಮುಂದಿನ ದಿನಗಳಲ್ಲಿ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಅರಿವು ಮೂಡಿಸುವ ಸಲುವಾಗಿ ವಿಶೇಷವಾದ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ ಮಾಹಿತಿಯನ್ನು ಸಂಗ್ರಹಿಸಿ ತಮ್ಮ ವ್ಯಾಪ್ತಿಯಲ್ಲಿ ಸದುಪಯೋಗವಾಗುವಂತೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ ಮಾತನಾಡಿ ತಂತ್ರಜ್ಞಾನವೇ ಇಲ್ಲದ ಸಂದರ್ಭದಲ್ಲಿ ದೇಶವು ಅಭಿವೃದ್ಧಿಯಾಗಿದೆ ಇವತ್ತು ತಂತ್ರಜ್ಞಾನ ಬೆಳೆದಿದೆ ಸಾಮಾನ್ಯ ಜನತೆಗೂ ಸಮಾನತೆಯ ಹಕ್ಕುಗಳಿದ್ದು ವಿಶೇಷವಾಗಿ ಹೆಣ್ಣು ಮಕ್ಕಳು ಜಾಗೃತರಾಗಬೇಕು ಅವಶ್ಯಕತೆ ಇರುವ ಅರಿವು ಪಡೆದು ಬೇರೆಯವರಿಗೂ ನ್ಯಾಯ ಕೊಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರಮ್ಯ, ಜಿಪಂ ಇಒ ವೆಂಕಟಾಚಲಪತಿ, ಜಿಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿನೋದ್ ರಾಜ್, ಮಹಿಳಾ ಅಭಿವೃದ್ಧಿ ಇಲಾಖೆಯ ವಂಶಿಕೃಷ್ಣ ಸೇರಿದಂತೆ ವಿವಿಧ ವಿಷಯಗಳ ಕುರಿತಂತೆ ಬೀನು ವರ್ಗೀಸ್ , ಬೃಂದಾ ಅಡಿಗೆ ಹಾಗೂ ನ್ಯಾ ಸುನಿಲ್ ಎಸ್ ಹೊಸಮನಿ ಅವರು ಉಪನ್ಯಾಸ ನೀಡಿದರು ಕಾರ್ಯಕ್ರಮದಲ್ಲಿ ಈನೆಲ ಈಜಲ ವೆಂಕಟಾಚಲಪತಿ ಪ್ರಾರ್ಥನೆ ಮಾಡಿದರು.

Leave a Reply

Your email address will not be published. Required fields are marked *

error: Content is protected !!