ರಾಜ್ಯದ ಹಲವು ಕಡೆ ಕಳೆದ ಮೂರ್ನಾಲ್ಕು ದಿನಗಳಿಂದ ಬಿಟ್ಟೂ ಬಿಡದೇ ಸುರಿಯುತ್ತಿರುವ ಜಡಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಜಾನುವಾರು, ಪಕ್ಷಿಗಳು ಮಳೆಯಲ್ಲಿ ನೆಂದು ನೆಂದು ತೊಪ್ಪೆಯಾಗಿವೆ. ವೃದ್ಧರು, ರೋಗಿಗಳು ಚಳಿ, ಮಳೆಯ ತೇವಾಂಶದಿಂದ ಜೀವ ಭಯದಲ್ಲಿದ್ದಾರೆ. ಕೂಲಿಕಾರರು, ಕಾರ್ಮಿಕರು, ಉದ್ಯೋಗಸ್ಥರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೂಕ್ತ ಸಮಯಕ್ಕೆ ಕೆಲಸಕ್ಕೆ, ತರಗತಿಗಳಿಗೆ ಹೋಗಲು ಆಗದೇ ಪರಿತಪಿಸುತ್ತಿದ್ದಾರೆ.
ಕಳೆದೆರಡು ತಿಂಗಳಿಂದ ಮಳೆಯಿಲ್ಲದೆ ಪರದಾಡುತ್ತಿದ್ದ ರೈತರು ಈಗ ಬಿಟ್ಟು ಬಿಡದೆ ಧೋ ಎಂದು ಸುರಿಯಿತ್ತಿರುವ ಮಳೆಗೆ ಹೈರಣಾಗಿ ಹೋಗಿದ್ದಾರೆ. ಅರೆಬರೆ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ಈಗ ಮಳೆಯಿಂದ ಅದು ಕೂಡ ಕೈತಪ್ಪಿ ಹೋಗುವ ಭೀತಿಯಲ್ಲಿದ್ದಾರೆ. ರೈತರು ಬೆಳೆದ ಬೆಳೆಗಳು ಅತಿಯಾದ ತೇವಾಂಶದಿಂದ ನೆಲಕಚ್ಚುತ್ತಿವೆ. ತಗ್ಗು ಪ್ರದೇಶದಲ್ಲಿ ವಾಸ ಮಾಡುವವರಿಗೆ ಮನೆಗಳಿಗೆ ನೀರು ನುಗ್ಗುವ ಭೀತಿಯಲ್ಲಿದ್ದಾರೆ. ಕೆಲ ಮನೆಗಳ ಮೇಲ್ಛಾವಣಿ ಸೋರುತ್ತಿವೆ. ಹಳೇ ಮನೆಗಳು ನೆಲಕ್ಕುರುಳಿತ್ತಿವೆ. ವ್ಯಾಪಾರಸ್ಥರಿಗೆ ಸರಿಯಾಗಿ ವ್ಯಾಪಾರವಾಗದೇ ಮಂಕಾಗಿದ್ದಾರೆ. ಹೀಗೆ ಜಡಿ ಮಳೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿ ಸಮಸ್ಯೆ ತಂದೊಡ್ಡಿದೆ.
ಕೆಲವು ಕಡೆ ಅಂಗನವಾಡಿ ಕೇಂದ್ರಗಳು, ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕೆಲ ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ವ್ಯವಸ್ಥೆ ಮಾಡಲಾಗಿದೆ. ಕೆಲವರು ವಿಧಿ ಇಲ್ಲದೇ ಕೊಡೆ ಹಿಡಿದು ಕೆಲಸ ಕಾರ್ಯಗಳಿಗೆ ಹೋಗುತ್ತಿದ್ದಾರೆ. ಕೆಲ ಮಣ್ಣಿನ ರಸ್ತೆಗಳು ಜಲಾವೃತಗೊಂಡು ಕೆಸರುಗದ್ದೆಯಂತಾಗಿವೆ. ರಸ್ತೆ ಗುಂಡಿಗಳಲ್ಲಿ ನೀರು ತುಂಬಿಕೊಂಡು ಗುಂಡಿಗಳೇ ಕಾಣದಂತಾಗಿ ವಾಹನ ಸವಾರರು ಅಪಘಾತದ ಭೀತಿಯಲ್ಲಿ ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ…
ಆಗ್ನೇಯ ಬಂಗಾಳ ಉಪಮಹಾಸಾಗರದಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಕಾರಣ ಇನ್ನೂ 2-3 ದಿನ ಇದೇ ರೀತಿಯ ಮಳೆ ಸುರಿಯುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಯ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೋಲಾರ, ಮಂಡ್ಯ ರಾಮನಗರ, ಶಿವಮೊಗ್ಗ ತುಮಕೂರಿನಲ್ಲಿ ಭಾರಿ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ವಿಜಯನಗರ, ಮೈಸೂರು, ಕೊಡಗು, ದಾವಣಗೆರೆ, ಚಿತ್ರದುರ್ಗ, ಚಾಮರಾಜನಗರ, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಉತ್ತರ ಕನ್ನಡದಲ್ಲಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಒಟ್ಟಿನಲ್ಲಿ ಸೂರ್ಯನ ದರ್ಶನಕ್ಕಾಗಿ ಜನ ಕಾಯುತ್ತಿದ್ದಾರೆ.