ಕಳೆದ ಕೆಲ ದಿನಗಳಿಂದ ತಾಲೂಕಿನಾದ್ಯಂತ ಬಿರುಗಾಳಿ, ಆಲಿಕಲ್ಲು, ಗುಡುಗು ಸಹಿತ ರಭಸವಾಗಿ ಮಳೆ ಬೀಳುತ್ತಿದ್ದು, ಇದರಿಂದ ಹಲವು ಕಡೆ ರೈತರು ಬೆಳೆದಿದ್ದ ಬೆಳೆಗಳು ನೆಲಕಚ್ಚಿ ರೈತರನ್ನು ಸಂಕಷ್ಟಕ್ಕೆ ದೂಡಿದೆ.
ಸಣ್ಣ ರೈತರಿಂದ ಹಿಡಿದು ದೊಡ್ಡ ರೈತರು ಎಕರೆಗಟ್ಟೆಲೆ ಬೆಳೆದಿದ್ದ ತೋಟಗಾರಿಕೆ ಬೆಳೆಗಳು ಸಂಪೂರ್ಣ ನಾಶವಾಗಿದೆ. ಈ ಕುರಿತು ಮಾಧ್ಯಮದಲ್ಲಿ ಸುದ್ದಿ ವರದಿಯಾಗಿತ್ತು ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಇಂದು ಬೆಳಗ್ಗೆ 9:30ಕ್ಕೆ ಸರಿಯಾಗಿ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆದರೆ ಕೃಷಿ ಇಲಾಖೆಯ ವೈಫಲ್ಯದ ಬಗ್ಗೆ ರೈತರು ಅಕ್ರೋಶ ವ್ಯಕ್ತಪಡಿಸುತ್ತಾರೆಂಬ ಕಾರಣಕ್ಕೆ, ಜಿಲ್ಲಾಧಿಕಾರಿಗಳ ದಿಕ್ಕು ತಪ್ಪಿಸಿದ್ದಾರೆ ಅಧಿಕಾರಿಗಳು, ಕೇವಲ 10 ನಿಮಿಷಗಳ ಅವಧಿಯಲ್ಲಿ ಕೇವಲ ಒಂದು ತೋಟಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಅಲ್ಲಿಂದ ತೆರಳಿದ್ದಾರೆ, ಕಾಟಚಾರಕ್ಕೆ ನಡೆದ ಜಿಲ್ಲಾಧಿಕಾರಿಗಳ ಬೆಳೆಹಾನಿ ಭೇಟಿ ಬಗ್ಗೆ ರೈತರು ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇ 21ರಂದು ಪ್ರತಿಗಂಟೆಗೆ 50 ಕಿ.ಮೀ ವೇಗದಲ್ಲಿ ಬೀಸಿದ ಗಾಳಿಮಳೆಗೆ ತಾಲೂಕಿನ ಹಲವು ತೋಟಗಳು ಹಾನಿಯೊಳಗಾಗಿವೆ, ಜಿಂಕೆಬಚ್ಚಹಳ್ಳಿ, ಕಸುವನಹಳ್ಳಿ, ಬಿಸುವನಹಳ್ಳಿ ಗ್ರಾಮದ ಬಹುತೇಕ ತೋಟಗಾರಿಕೆ ಬೆಳೆಗಳು ನಾಶವಾಗಿದೆ, ಕಸವನಹಳ್ಳಿ ಗ್ರಾಮದ ರೈತ ರವಿಚಂದ್ರರವರಿಗೆ ಸೇರಿದ ಹೀರೇಕಾಯಿ, ಹೂಕೋಸು, ಸೇವಂತಿಗೆ ಬೆಳೆಗಳು ನಾಶವಾಗಿದೆ, ರಾಜಣ್ಣರವರಿಗೆ ಸೇರಿದ ಹೂಕೋಸು ಬೆಳೆನಾಶವಾಗಿದೆ.
ಇದರ ಜೊತೆಗೆ ಮನೆಗಳ ಮೇಲ್ಚಾವಣಿ ಹಾರಿ ಹೋಗಿದೆ, ಹಂದಿ ಸಾಕಾಣಿಯ ಶೇಡ್ ಜಖಂಗೊಂಡಿದೆ, ಬಿರುಗಾಳಿಯ ರಭಸಕ್ಕೆ ತೆಂಗಿನ ಮರಗಳು ಬುಡ ಸಮೇತ ಕಿತ್ತು ಬಂದಿವೆ, ಸುತ್ತಮುತ್ತಲಿನ ಗ್ರಾಮ ಬಹುತೇಕ ರೈತರ ಲಕ್ಷಾಂತರ ರೂಪಾಯಿ ಮೌಲ್ಯದ ತೋಟಗಾರಿಕೆ ಬೆಳೆಗಳು ನಾಶವಾಗಿವೆ.
ಮಳೆಯಿಂದ ಬೆಳೆ ನಾಶವಾದ ತೋಟಗಳಿಗೆ ಜಿಲ್ಲಾಧಿಕಾರಿಗಳಾದ ಆರ್ ಲತಾ ಭೇಟಿ ನೀಡಿ ಪರಿಶೀಲನೆ ನಡೆಸುವುದ್ದಾಗಿ ಹೇಳಿದ್ರು, ಅದರಂತೆ ಇಂದು ಬೆಳಗ್ಗೆ 9:30ಕ್ಕೆ ಕಸವನಹಳ್ಳಿ ಗ್ರಾಮಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಲಿದ್ದರು, ಜಿಲ್ಲಾಧಿಕಾರಿಗಳಿಗೆ ತಮ್ಮ ನೋವು ಹೇಳಲು ಸಾಕಷ್ಟು ರೈತರು ಗ್ರಾಮದಲ್ಲಿ ಕಾದಿದ್ದರು, ತಮಗಾಗಿ ಕಾದಿದ್ದ ರೈತರನ್ನ ಬಿಟ್ಟು ಗ್ರಾಮದ ಹೊರಗಿನ ಒಂದು ತೋಟಕ್ಕೆ ಭೇಟಿ ಕೆಲವೇ ಕ್ಷಣದಲ್ಲಿ ಅಲ್ಲಿಂದ ತೆರಳಿದ್ದಾರೆ, ಜಿಲ್ಲಾಧಿಕಾರಿಗಳಿಗೆ ಕಾದಿದ್ದ ರೈತರು ಅಧಿಕಾರಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ವೈಫಲ್ಯದ ಬಗ್ಗೆ ರೈತರು ಜಿಲ್ಲಾಧಿಕಾರಿಗಳಿಗೆ ದೂರು ನೀಡುತ್ತಾರೆ, ಇದರಿಂದ ಹೆದರಿದ ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು ಜಿಲ್ಲಾಧಿಕಾರಿಗಳ ದಿಕ್ಕು ತಪ್ಪಿಸಿ ರೈತರು ಭೇಟಿಯಾಗದಂತೆ ಮಾಡಿದ್ದಾರೆಂದು ತಮ್ಮ ಸಿಟ್ಟು ಹೊರ ಹಾಕಿದ ರೈತ ಅಂಬರೀಷ್.