
ತಾಲೂಕಿನಲ್ಲಿ ಕೆಲ ದಿನಗಳಿಂದ ಮಳೆಯಿಲ್ಲದೆ ಬೆಳೆಗಳು ಕಮರಿಹೋಗುತ್ತಿದ್ದು, ಇದರಿಂದ ರೈತರು ಕಂಗಾಲಾಗಿ ಆಕಾಶದತ್ತ ಮುಖ ಮಾಡಿ ಮಳೆಗಾಗಿ ಕಾದು ಕುಳಿತಿದ್ದಾರೆ.
ತಾಲೂಕಿನ ಕೆಲ ಗ್ರಾಮಗಳಲ್ಲಿ ಮಳೆಗಾಗಿ ಹಳೆ ಕಾಲದ ಆಚರಣೆಗಳ ಮೊರೆ ಹೋಗುತ್ತಿದ್ದಾರೆ.
ತಾಲೂಕಿನ ಸಾಸಲು ಹೋಬಳಿಯ ಪಚ್ಚಾರಲಹಳ್ಳಿ ಗ್ರಾಮದಲ್ಲಿ ಇಬ್ಬರು ಗಂಡು ಮಕ್ಕಳ ಜೋಡಿಗೆ ಮದುವೆ ಮಾಡಿ ಮಳೆಗಾಗಿ ಪ್ರಾರ್ಥನೆ ಮಾಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಒಬ್ಬ ಹುಡುಗನನ್ನು ಮದು ಮಗನಾಗಿ, ಇನ್ನೊಬ್ಬ ಹುಡುಗನನ್ನು ಥೇಟ್ ಮದು ಮಗಳಂತೆ ಸಿಂಗರಿಸಿ ಶಾಸ್ತ್ರೋಕ್ತವಾಗಿ ಗ್ರಾಮಸ್ಥರೆ ಮುಂದೆ ನಿಂತು ಮದುವೆ ಮಾಡಿಸಿ, ಮಳೆಗಾಗಿ ಪ್ರಾರ್ಥನೆ ಮಾಡಿದ್ದಾರೆ.
ಈ ರೀತಿ ಆಚರಣೆ ಮಾಡಿದರೆ ಮಳೆಯಾಗುತ್ತದೆ ಎಂಬ ನಂಬಿಕೆ ಗ್ರಾಮಸ್ಥರಿಗಿದೆ. ಇನ್ನೂ ಕೆಲ ಗ್ರಾಮಗಳಲ್ಲಿ ಮಳೆಗಾಗಿ ಕತ್ತೆ ಮದುವೆ, ಕಪ್ಪೆ ಮದುವೆಗಳನ್ನು ಮಾಡುವುದು ಸಾಮಾನ್ಯವಾಗಿದೆ. ಒಂದೊಂದು ಕಡೆ ವಿಭಿನ್ನ ಮಾದರಿಯ ಆಚರಣೆಗಳು ರೂಢಿಯಲ್ಲಿವೆ.