ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯನ್ನೇ ನಂಬಿ ಬೆಳೆ ಇಟ್ಟ ರೈತ ಕಂಗ್ಗೆಟ್ಟಿದ್ದಾನೆ. ಪ್ರತಿ ವರ್ಷ ವಾಡಿಕೆಯಂತೆ ಮುಂಗಾರು ಮಳೆ ಜೂನ್ ಮೊದಲನೇ ವಾರದಲ್ಲಿ ಪ್ರಾರಂಭವಾಗುತ್ತಿತ್ತು. ಮುಂಗಾರು ಪ್ರಾರಂಭವಾದ ಕೂಡಲೇ ರೈತರು ಬಿತ್ತನೆ ಕಾರ್ಯವನ್ನು ಮಾಡುತ್ತಿದ್ದರು.
ಆದರೆ ಪ್ರಸ್ತುತ ವರ್ಷ ಮುಂಗಾರು ಮಳೆ ತಡವಾಗಿ ಆರಂಭವಾಗಿ, ಅತಿವೃಷ್ಟಿ ಸೃಷ್ಟಿಸಿದೆ. ಇದರಿಂದ ಮುಂಗಾರುನಲ್ಲಿ ಸೂಕ್ತ ರೀತಿಯಲ್ಲಿ ಬಿತ್ತನೆ ಆಗದೆ ಕೃಷಿ ಚಟುವಟಿಕೆಗಳು ನಿಧಾನಗತಿಯಲ್ಲೇ ಸಾಗಿದ್ದವು. ಪ್ರಾರಂಭದಲ್ಲಿ ಅಲ್ಪ ಸ್ವಲ್ಪ ಮಳೆ ಆಗಿದ್ದರಿಂದ ಬೀಜ ಬಿತ್ತಿದ್ದ ರೈತರಿಗೆ ಇದೀಗ ಆಘಾತವಾಗಿದೆ. ಮಳೆ ಕೈಕೊಟ್ಟ ಪರಿಣಾಮ, ಬಿತ್ತನೆ ಮಾಡಿರುವ ಬೀಜಗಳು ಮೊಳಕೆಯಲ್ಲೇ ರೈತನ ಕಣ್ಮುಂದೆಯೇ ಬಾಡಿಹೋಗುತ್ತಿದೆ. ಪ್ರಾಣಿ ಪಕ್ಷಿಗಳು ನೀರು ಇಲ್ಲದೇ ಸೊರಗುತ್ತಿವೆ. ಕೆರೆ ಕುಂಟೆಗಳಿ ಬರಿದಾಗುತ್ತಿವೆ.
ಬಿತ್ತನೆ ಕಾರ್ಯಕ್ಕೆ ಸಾವಿರಾರು ಹಣ ಖರ್ಚು ಮಾಡಿದ್ದ ರೈತ ಇದೀಗ ಸಂಕಷ್ಟದಲ್ಲಿದ್ದಾನೆ. ಮಳೆಗಾಗಿ ಗ್ರಾಮೀಣ ಭಾಗಗಳಲ್ಲಿ ಬಹಳ ಹಿಂದಿನ ಕಾಲದಲ್ಲಿ ಆಚರಿಸುತ್ತಿದ್ದ ಆಚರಣೆಗಳು, ರೂಢಿ, ಸಂಪ್ರದಾಯಗಳು ಪ್ರಸ್ತುತ ಮರುಕಳಿಸುತ್ತಿವೆ. ಚಂದಮಾಮ ಮದುವೆ, ಬಂಡಿ ದೇವರು, ಸೂರ್ಯ, ಚಂದ್ರರಿಗೆ ಪೂಜೆ, ಗಂಡು ಮಕ್ಕಳಿಗೆ ವಧು-ವರರ ಪೋಷಾಕು ಧರಿಸಿ ಸಾಂಕೇತಿಕ ಮದುವೆ ಮಾಡುವ ಆಚರಣೆ ಸೇರಿದಂತೆ ಇತರೆ ಪೂಜೆ ಪುನಸ್ಕಾರ ಮಾಡಿ ಮಳೆರಾಯನ ಮೊರೆ ಹೋದರೂ ರೈತನ ಕೂಗು ವರುಣ ದೇವನನ್ನು ತಲುಪಿಲ್ಲ.
ಮೇ-ಆಗಸ್ಟ್ ತಿಂಗಳ ಎರಡನೇ ವಾರದಲ್ಲಿ 363.3 ಮಿ.ಮೀ ಮಳೆ
ತಾಲೂಕಿನಲ್ಲಿ ಮೇ ತಿಂಗಳಿಂದ ಆಗಸ್ಟ್ ಎರಡನೇ ವಾರದ ಅಂತ್ಯದವರೆಗೆ 393 ಮಿ.ಮೀ ವಾಡಿಕೆ ಮಳೆ ಆಗಬೇಕಿತ್ತು. ಆದರೆ 363.3ಮಿ.ಮೀ ಮಳೆಯಾಗಿದೆ. ತೂಬಗೆರೆ ಹೋಬಳಿಯಲ್ಲಿ 312.3 ಮಿ.ಮೀ, ಸಾಸಲು ಹೋಬಳಿಯಲ್ಲಿ 329.8ಮಿ.ಮೀ, ಕನಸವಾಡಿಯಲ್ಲಿ415.1ಮಿ.ಮೀ, ದೊಡ್ಡಬೆಳಗಲದಲ್ಲಿ 406.1ಮಿ.ಮೀ, ಕಸಬಾ ಹೋಬಳಿಯಲ್ಲಿ 370.1ಮಿ.ಮೀ ಮಳೆಯಾಗಿದೆ. ತಿಂಗಳ ಒಟ್ಟು ಸರಾಸರಿ 2023ರಲ್ಲಿ 363ಮಿ.ಮೀ ಮಳೆ ಬಿದ್ದಿದೆ ಎಂದು ತಾಲೂಕು ಸಹಾಯಕ ಕೃಷಿ ಅಧಿಕಾರಿ ಡಿ.ರಾಜೇಶ್ವರಿ ತಿಳಿಸಿದರು.
ಮಳೆ ಕೊರತೆ, ಕುಂಠಿತಗೊಂಡ ಬಿತ್ತನೆ ಕಾರ್ಯ
ತಾಲೂಕಿನಲ್ಲಿ 16.122 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗುವ ಗುರಿ ಹೊಂದಲಾಗಿತ್ತು, ಆದರೆ ಮಳೆ ಅಭಾವದಿಂದ ಕೇವಲ 15,250 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ರಾಗಿ ಬೆಳೆಯಲಾಗಿದೆ. ಆ ರಾಗಿ ಪ್ರಸ್ತುತ ಮಳೆ ಇಲ್ಲದೆ ಒಣಗಿ ಹೋಗಿದೆ. ಅಇದೇರೀತಿ 7.350 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯಬೇಕಿತ್ತು. ಆದರೆ 5.444 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ತೊಗರಿ 360 ಹೆಕ್ಟೇರ್ ಗುರಿ, ಬಿತ್ತನೆಯಾಗಿರುವುದು 227 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಎಂದರು.