ರಾಜ್ಯಕ್ಕೆ ಈಗಾಗಲೇ ಮುಗಾರು ಪ್ರವೇಶ ಮಾಡಿ ಹಲವು ದಿನಗಳು ಕಳೆದಿವೆ. ಪ್ರಾರಂಭದಲ್ಲಿ ಉತ್ತಮ ಮಳೆಯಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಮಳೆ ಬರುತ್ತೆಂದು ಬಿತ್ತನೆ ಬೀಜ ಬಿತ್ತಿದ್ದರು ಈಗ ಮಳೆ ಕೈಕೊಟ್ಟ ಹಿನ್ನೆಲೆ ಮಳೆ ಯಾವಾಗ ಬರುತ್ತೆ ಎಂದು ಆಕಾಶದತ್ತ ನೋಡುವ ಹಾಗೆ ಆಗಿದೆ.
ಈಗಾಗಲೇ ಮಳೆಗಾಗಿ ತಾಲೂಕಿನ ಗ್ರಾಮಗಳಲ್ಲಿ ಮಳೆರಾಯನಿಗಾಗಿ ಗ್ರಾಮ್ಯ ಸೊಗಡಿನ ವಿಶೇಷ ಪೂಜೆ, ಆಚರಣೆಗಳನ್ನು ಮಾಡಲಾಗುತ್ತಿದೆ. ಹಾಗೆಯೇ ಕೆಳಗಿನಜೂಗಾನಹಳ್ಳಿ ಗ್ರಾಮದಲ್ಲಿ ಮಳೆಬರಲೆಂದು ಇಬ್ಬರು ಗಂಡು ಮಕ್ಕಳಿಗೆ ಸಾಂಕೇತಿಕವಾಗಿ ಚಂದಮಾಮ ಮದುವೆ ಮಾಡುವ ಮೂಲಕ ವಿಶೇಷವಾಗಿ ಆಚರಿಸಿ ವರುಣದೇವರನ್ನು ಪ್ರಾರ್ಥಿಸಿದ್ದಾರೆ.
ಮದುವೆಯಲ್ಲಿ ವರ ಹಾಗೂ ವಧುವಾಗಿ ಇಬ್ಬರು ಗಂಡು ಮಕ್ಕಳನ್ನೇ ಆಯ್ಕೆ ಮಾಡಲಾಗಿತ್ತು. ವಧುವಾಗಿ ಶಶಾಂಕ್, ವರನಾಗಿ ಅರವಿಂದ್ ಸಜ್ಜಾಗಿ ಪೂಜೆಗೆ ಕುಳಿತಿದ್ದರು. ನಂತರ ಎಲ್ಲಾ ಗ್ರಾಮಸ್ಥರು ಒಂದೆಡೆ ಸೇರಿ ಕಲೆತು ಮಳೆರಾಯನ ಕುರಿತು ಹಾಡುಗಳನ್ನು ಹಾಡಿದರು. ನೃತ್ಯ ಮಾಡಿ ಈಗಲೇ ಬಾರೋ ಮಳೆರಾಯ ಎಂದು ಕರೆದಿದ್ದು ವಿಶೇಷವಾಗಿತ್ತು.