ಮಳೆಗಾಗಿ ಕಪ್ಪೆಗಳ ಮದುವೆ, ಕತ್ತೆಗಳ ಮದುವೆ, ಹಸು-ಕರುವಿಗೆ ಮದುವೆ ಹೀಗೆ ನಾನಾ ರೀತಿಯ ಆಚರಣೆಗಳನ್ನು ಹಿಂದಿನ ಕಾಲದಿಂದಲೂ ಗ್ರಾಮೀಣ ಪ್ರದೇಶಗಳ ಆಚರಣೆ ಮಾಡುತ್ತಾ ಬರುತ್ತಿದ್ದಾರೆ. ಅದೇರೀತಿ ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಹೊಬಳಿಯ ಕೊಟ್ಟಿಗೆಮಾಚೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಗಂಡು ಮಕ್ಕಳಿಬ್ಬರಿಗೆ ಮದುವೆ ಆಚರಣೆ ಮಾಡಿ ಮಳೆಗಾಗಿ ಪ್ರಾರ್ಥಿಸಲಾಯಿತು.
ಗ್ರಾಮಸ್ಥರು ಮಳೆಗಾಗಿ ಕಳೆದ 5 ದಿನಗಳಿಂದ ಗ್ರಾಮದ ದೊಡ್ಡಮ್ಮ ದೇವಾಲಯದ ಬಳಿ ಚಂದಾಮಾಮನ ಚಿತ್ರ ಬಿಡಿಸಿ ಪೂಜೆ ನಡೆಸಿದ್ದು, ಅಂತಿಮ ದಿನವಾದ ಮಂಗಳವಾರ ರಾತ್ರಿ ಮದುವೆ ಕಾರ್ಯಕ್ರಮ ಏರ್ಪಡಿಸಿದ್ದರು.
ಸಂಜೆ 7 ಗಂಟೆಯಿಂದಲೇ ಗ್ರಾಮದ ಮಹಿಳೆಯರು ಸೇರಿಕೊಂಡು ಗ್ರಾಮದ ಬೀದಿ ಸ್ವಚ್ಛಗೊಳಿಸಿ ಅರ್ಧ ಹಾಗೂ ಪೂರ್ಣವಾದ ಎರಡು ಚಂದ್ರನಂತೆ ರಂಗೋಲಿ ಬಿಡಿಸಿದ್ದು, ನಾನಾ ಬಗೆಯ ಪುಷ್ವಗಳಿಂದ ಅಲಂಕರಿಸಿದರು. ರಾತ್ರಿ 8.30 ರ ಬಳಿಕ ತಿಂಗಳ ಮಾಮನ ಪೂಜೆ ಆರಂಭಗೊಂಡಿತು, ಮೊದಲಿಗೆ ಸಿಂಗಾರಗೊಂಡಿದ್ದ ವಧು-ವರರನ್ನು ತಿಂಗಳ ಮಾಮನ ಎದುರು ಅಲಂಕರಿಸಿದ ಖುರ್ಚಿ ಮೇಲೆ ಕುಳ್ಳರಿಸಿ, ರಾಗಿ ರೊಟ್ಟಿ, ಚಿಗಣಿ, ತಂಬಿಟ್ಟಿನ ಆರತಿ ಹಾಗೂ ಫಲ-ಪುಷ್ವಗಳನ್ನಿಟ್ಟು ಶಾಸ್ತ್ರಗಳನ್ನು ನೆರವೇರಿಸಿದರು. ಹಿರಿಯ ತಾಯಂದಿರು ಮದುವೆಯ ಹಾಗೂ ತಿಂಗಳ ಮಾಮನ ಮೇಲೆ ಸೋಬಾನೆ ಪದ ಹಾಡಿದರೆ, ಮಹಿಳೆಯರು ವಧು-ವರನಿಗೆ ಆರತಿ ಬೆಳಗಿದರು. ಹುಡುಗರನ್ನು ವಧು-ವರನಂತೆ ಸಿಂಗರಿಸಿದ್ದು, ಸಂಪ್ರದಾಯದಂತೆ ಮದುವೆ ಮಾಡಿಸಿ ಮಳೆಗಾಗಿ ಪ್ರಾರ್ಥನೆ ಮಾಡಿದರು.