ಮನೆ ಮುಂದೆ ನಿಲ್ಲಿಸಿದ ಬೈಕ್ ನ್ನು ರಾತ್ರೋರಾತ್ರಿ ಕದ್ದ ಕಳ್ಳರು: ಕದ್ದ ಬೈಕನ್ನು ಸುಟ್ಟುಭಸ್ಮ ಮಾಡಿದ ಖದೀಮರು

ಮನೆ ಮುಂದೆ ನಿಲ್ಲಿಸಿದ ಬೈಕ್ ನ್ನು ರಾತ್ರೋರಾತ್ರಿ ಕಳವು ಮಾಡಿದ ಕಳ್ಳರು, ಕಳವು ಮಾಡಿದ ಬೈಕ್ ಅನ್ನು ಸುಟ್ಟು ಹಾಕಿರುವ ವಿಚಿತ್ರ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಬೀರನಯ್ಯನಪಾಳ್ಯದ ಗೌಡನ ಕೆರೆ ಬಳಿ ಘಟನೆ ನಡೆದಿದೆ.

ಬೀರನಯ್ಯನಪಾಳ್ಯ ಗ್ರಾಮದ ರಮೇಶ್ ಎಂಬುವರ ಬೈಕ್ ಅನ್ನು ಕಳುವ ಮಾಡಿರುವ ಕಳ್ಳರು, ಕದ್ದ ಬೈಕ್ ಅನ್ನು ಗ್ರಾಮದ ಹೊರಗಿನ ಗೌಡನಕೆರೆ ಬಳಿ ಸುಟ್ಟು ಹಾಕಿದ್ದಾರೆ. ಘಟನೆ ಸಂಬಂಧಿಸಿದಂತೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾನು ನಮ್ಮ ಗ್ರಾಮದಲ್ಲಿ ಕೋಳಿ ವ್ಯಾಪಾರ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ನನ್ನ ದಿನನಿತ್ಯದ ಓಡಾಟಕ್ಕೆ, ವ್ಯಾಪಾರಕ್ಕೆ ನೀಲಿ ಬಣ್ಣದ ಬಜಾಜ್ ಡಿಸ್ಕವರ್ ಮೋಟರ್ ಸೈಕಲ್ ಅನ್ನು ಹೊಂದಿರುತ್ತೇನೆ. ಡಿ.6ರಂದು ನಾನು ಎಂದಿನಂತೆ‌ ಕೋಳಿ ವ್ಯಾಪಾರ ಮಾಡಿಕೊಂಡು ರಾತ್ರಿ 10 ಗಂಟೆಯಲ್ಲಿ ಮನೆಗೆ ಬಂದು ಡಿಸ್ಕವರ್ ಮೋಟರ್ ಸೈಕಲ್ ಅನ್ನು ನಮ್ಮ ಮನೆಯ ಮುಂದೆ ನಿಲ್ಲಿಸಿ ಸೈಡ್ ಲಾಕ್ ಮಾಡಿಕೊಂಡು ಮನೆಯಲ್ಲಿ ಮಲಗಿಕೊಂಡೆ. ನಂತರ ಡಿ.7ರಂದು ಬೆಳಿಗ್ಗೆ 5 ಗಂಟೆಗೆ ಮಾಮೂಲಿನಂತೆ ವ್ಯಾಪಾರಕ್ಕೆ ಹೋಗಲು ಮನೆಯಿಂದ ಈಚೆ ಬಂದು ನನ್ನ ಗಾಡಿಯನ್ನು ನೋಡಿದಾಗ ಬೈಕ್ ನಿಲ್ಲಿಸಿದ ಜಾಗದಲ್ಲಿ ಕಾಣಲಿಲ್ಲ. ನಾನು ಗಾಬರಿಯಲ್ಲಿ ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿದೆನು. ಗ್ರಾಮದಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ನನ್ನ ಮೋಟರ್ ಸೈಕಲ್ ಕಾಣಲಿಲ್ಲ. ನಾನು ಗಾಬರಿಯಿಂದ ಹುಡುಕುತ್ತಿದ್ದಾಗ ನಮ್ಮ ಸಂಬಂಧಿಕರೊಬ್ಬರು ನನಗೆ ಫೋನ್ ಮಾಡಿ ನಿನ್ನ ಗಾಡಿಯನ್ನು ಕೆರೆಯಲ್ಲಿ ಯಾರೋ ಬೆಂಕಿ ಹಾಕಿ ಸುಟ್ಟು ಹಾಕಿರುತ್ತಾರೆ.‌ ಕೂಡಲೇ ಕೆರೆಯ ಹತ್ತಿರ ಬಾ ಎಂದು ತಿಳಿಸುತ್ತಾರೆ. ತಕ್ಷಣ ನಾನು ನಮ್ಮೂರಿನ ಪಕ್ಕದಲ್ಲಿರುವ ಗೌಡನ ಕೆರೆಯ ಹತ್ತಿರ ಹೋಗಿ ನೋಡಿದಾಗ ರಸ್ತೆಯಿಂದ ಸುಮಾರು 300 ಮೀಟರ್ ಕೆರೆಯ ಒಳಗೆ ನನ್ನ ಬೈಕಿಗೆ ಯಾರೋ ಬೆಂಕಿ ಇಟ್ಟು ಸುಟ್ಟು ಹಾಕಿರುತ್ತಾರೆ. ಬೆಂಕಿಯ ಕೆನ್ನಾಲಿಗೆಗೆ ನನ್ನ ಬೈಕ್ ಸಂಪೂರ್ಣ ಸುಟ್ಟು ಹೋಗಿರುತ್ತೆ. ನನ್ನ ಬೈಕಿನ ಹಿಂಭಾಗದ ಚಕ್ರವನ್ನು ಬಿಚ್ಚಿಕೊಂಡು ಹೋಗಿರುತ್ತಾರೆ ಎಂದು ರಮೇಶ್‌ ಅವರು ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *