ಮನೆ ಮಗಳಂತೆ ಮುದ್ದಾಗಿ ಸಾಕಿದ್ದ ನಾಯಿಯ ಕೊಲೆಗೆ ಯತ್ನಿಸಿದ ಕಿರಾತಕ: ನಾಯಿ ಮೇಲೆ ಮಚ್ಚು ಬೀಸಿ ವಿಕೃತಿ ಮೆರೆದ ವ್ಯಕ್ತಿ: ಮಚ್ಚಿನೇಟಿಗೆ 12 ಹೊಲಿಗೆ: ಕಣ್ಣೀರಲ್ಲಿ ಮುಳುಗಿದ ಮಹಿಳೆ

ಆಕೆಯ ಮನೆಯಲ್ಲಿ‌ ಹೆಣ್ಣು ಮಗಳಿಲ್ಲ ಎಂಬ ಚಿಂತೆ. ಆ ಚಿಂತೆ ಹೋಗಲಾಡಸಲು ಎಂದು ಒಂದು ಹೆಣ್ಣು ನಾಯಿಯನ್ನು ತಂದು ಪ್ರೀತಿಯಿಂದ ಸಾಕಿದ್ದಳು. ಆದರೆ ಆ ನಾಯಿ ಮೇಲೆ ಆ ಗ್ರಾಮದ ಯುವಕನೊಬ್ಬನಿಗೆ ಅದೇನ್ ಕೋಪ ಇತ್ತೋ ಏನೋ. ನಾಯಿಯನ್ನು ಕೊಲೆ ಮಾಡಲು ಮುಂದಾಗಿದ್ದಾನೆ. ಬೆಂಗಳೂರು ಹೊರವಲಯದಲ್ಲಿ ಈ ಘಟನೆ ನಡೆದಿದ್ದು, ಕಾರಣ ಏನು ಅಂತಿರಾ , ಈ ಸ್ಟೋರಿ ಓದಿ…………

ಹೌದು ಹೀಗೆ ಕಾರಲ್ಲಿ ಗಾಯವಾಗಿರುವ ಜಾಗದಲ್ಲಿ ಹೊಲಿಗೆ‌‌ ಹಾಕಿಸಿಕೊಂಡು ಮಲಗಿರುವ ನಾಯಿ, ನಾಯಿಯ ಸ್ಥಿತಿಯನ್ನು ನೋಡಿ ಕಣ್ಣೀರು ಹಾಕುತ್ತಿರುವ ಮಹಿಳೆ, ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಚಿನ್ನಕೆಂಪನಹಳ್ಳಿ ಗ್ರಾಮದಲ್ಲಿ.

ಈ ಫೊಟೋದಲ್ಲಿ ಕತ್ತಿಗೆ ಹೂವಿನ ಹಾರ ಹಾಕಿಕೊಂಡಿರುವ ಮೋಹನ್ ಇದೇ ಗ್ರಾಮದವನು. ಈತನೇ ನಾಯಿಯ ಮೇಲೆ ಮಚ್ಚು ಬೀಸಿ ಕೊಲೆಗೆ ಮುಂದಾಗಿರುವ ವಿಕೃತ ಮನಸ್ಸಿನ ವ್ಯಕ್ತಿ ಎಂದು ಆರೋಪಿಸಲಾಗಿದೆ. ಇದೇ ಗ್ರಾಮದ ಶೈಲಜಾ ಎಂಬ ಮಹಿಳೆ ತನಗೆ ಹೆಣ್ಣು ಮಗಳಿಲ್ಲ ಎಂಬ ಕಾರಣಕ್ಕೆ ಎರಡು ವರ್ಷಗಳಿಂದ ಹೆಣ್ಣು ನಾಯಿಯನ್ನು ತನ್ನ ಮಗಳಂತೆ ಪ್ರೀತಿಯಿಂದ ಸಾಕಿಕೊಂಡಿದ್ದಳು. ಆದರೆ ಆ ನಾಯಿಗೆ ಮೋಹನ್ ಎಂಬ ವ್ಯಕ್ತಿ ಮಚ್ಚು ಬೀಸಿದ್ದಾನೆ ಎಂದು‌ ದೂರಲಾಗಿದೆ. ಇದರಿಂದ‌‌‌ ಗಾಯಾಳು‌ ನಾಯಿಗೆ 12 ಹೊಲಿಗೆ ಬಿದ್ದಿವೆ.

ಇನ್ನೂ ಶೈಲಜಾ ಗ್ರಾಮದ ಶಾಲೆಯಲ್ಲಿ ಬಿಸಿಯೂಟ ಅಡುಗೆ ತಯಾರಿಕೆ ಕೆಲಸ ಮಾಡುತ್ತಿದ್ದಳು. ಹಾಗಾಗಿ ಎಂದಿನಂತೆ ಕೆಲಸಕ್ಕೆ ಹೋಗಿದ್ದಾಳೆ. ಅಕೆ ಪ್ರತಿನಿತ್ಯ ಹೋಗುತ್ತಿದ್ದ ಶಾಲೆಯ ಬಳಿ ನಾಯಿ ಕೂಡ ಹೋಗಿದೆ. ಆದರೆ ವಿಕೃತ ಮನಸ್ಸಿನ ಮೋಹನ್ ಕೂಡ ಶಾಲೆಯ ಆವರಣಕ್ಕೆ ಹೋಗಿದ್ದಾನೆ. ಈ ವೇಳೆ ಕೈಯಲ್ಲಿದ್ದ ಮಚ್ಚಿನಿಂದ ನಾಯಿಯ ಸೊಂಟದ ಭಾಗಕ್ಕೆ ಹೊಡೆದಿದ್ದಾನೆ ಎನ್ನಲಾಗಿದೆ. ಈ ವೇಳೆ ಮಚ್ಚಿನ ಏಟಿಗೆ ಗಾಯಗೊಂಡ ನಾಯಿ ಮನೆಯ ಬಳಿಗೆ ಓಡಿ ಹೋಗಿದೆ. ಘಟನೆ ಶಾಲಾ ಆವರಣದಲ್ಲಿ ನಡೆದಿದ್ದು, ಎಲ್ಲಾ ವಿಧ್ಯಾರ್ಥಿಗಳು ಶಾಲೆಯ ಒಳಗೆ ಇದ್ದ ಪರಿಣಾಮ ಯಾವುದೇ ಅಹಿತಕರ ಘಟನೆ ನಡೆದಿಲ್ಲ.

ಒಟ್ಟಾರೆ, ನಮ್ಮ ಮನೆಯ ಬಳಿ ಇದ್ದ ಕೋಳಿಯನ್ನು ತಿಂದಿದೆ ಎಂಬ ಕಾರಣಕ್ಕೋ ಅಥವಾ ಬೇರೆ ಯಾವುದೋ ಕಾರಣಕ್ಕೋ ಈ ರೀತಿ ವಿಕೃತಿ ಮೆರೆದಿರುವುದು ಮಾತ್ರ ವಿಪರ್ಯಾಸ. ಈತನಿಗೆ ಕಠಿಣ ಕಾನೂನು ಕ್ರಮ ಆಗಬೇಕು ಎಂದು ಗ್ರಾನಸ್ಥರು ಆಗ್ರಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!