ಬಾಡಿಗೆ ಮನೆಯಲ್ಲಿದ್ದವಳೇ…. ಮನೆ ಬಾಡಿಗೆ ಕೊಟ್ಟ ಮಾಲೀಕನ ಮನೆಗೆ ಕನ್ನ ಹಾಕಿ ನಗ, ನಗದು ದೋಚಿ ಎಸ್ಕೇಪ್ ಆಗಿದ್ದಾಳೆ. ಪ್ರಕರಣ ದಾಖಲಾದ ಮೂರ್ನಾಲ್ಕು ದಿನದಲ್ಲೇ ಪೊಲೀಸರ ಕೈಗೆ ತಗಲಾಕ್ಕೊಂಡು ಕಂಬಿ ಎಣಿಸುತ್ತಿದ್ದಾಳೆ. ಸದ್ಯ ಬಂಧಿತ ಖತರ್ನಾಕ್ ಕಳ್ಳಿಯಿಂದ ಚಿನ್ನಾಭರಣ ವಶಕ್ಕೆ ಪಡೆದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ಅವರು ದೂರುದಾರನನ್ನು ಠಾಣೆಗೆ ಕರೆಸಿ ಕಳ್ಳತನವಾಗಿದ್ದ ಚಿನ್ನಾಭರಣ ಹಸ್ತಾಂತರ ಮಾಡಿದ್ದಾರೆ.
ಮಮತಾ (25), ಬಾಡಿಗೆ ಮನೆಯಲ್ಲಿದ್ದುಕೊಂಡು ಮನೆ ಬಾಡಿಗೆ ಕೊಟ್ಟ ಮನೆ ಮಾಲೀಕನ ಮನೆಗೆ ಕನ್ನ ಹಾಕಿ ಲಕ್ಷಾಂತರ ರೂ. ಬೆಲೆ ಬಾಳುವ ನಗ, ನಗದು ಕದ್ದ ಐನಾತಿ ಕಳ್ಳಿ.
ದೊಡ್ಡಬಳ್ಳಾಪುರ ತಾಲೂಕಿನ ಪಾಲನಜೋಗಿಹಳ್ಳಿಯಲ್ಲಿ ಮುನಿಸ್ವಾಮಯ್ಯ (75) ಎಂಬುವವರ ಮನೆಯಲ್ಲಿ ಚಿನ್ನಾಭರಣ ಕಳವು ಪ್ರಕರಣ ಬೆಳಕಿಗೆ ಬಂದಿತ್ತು. ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆ ವಿವರ…
ಮನೆ ಮಾಲೀಕ ಮುನಿಸ್ವಾಮಯ್ಯನ ಹೆಂಡತಿ ನಿಧನ ಹೊಂದಿದ್ದು, ತನ್ನ ತಂಗಿ ರತ್ನಮ್ಮ ಮಗ ನಾರಾಯಣಸ್ವಾಮಿಯ ಜೊತೆಯಲ್ಲಿ ಈ ವೃದ್ಧ ಆಶ್ರಯ ಪಡೆದುಕೊಂಡಿರುತ್ತಾನೆ.
ಮಹಡಿಯ ತಳ ಹಂತದಲ್ಲಿ ಮುನಿಸ್ವಾಮಯ್ಯ ಮನೆ ಇದೆ ಇದರ ಅಕ್ಕಪಕ್ಕದಲ್ಲೇ ಇನ್ನೊಂದು ಮನೆ ಇದ್ದು, ಅದನ್ನು ಬಾಡಿಗೆಗೆ ನೀಡಲಾಗಿರುತ್ತದೆ. ಆರೋಪಿ ಮಮತಾ ಹಾಗೂ ಆಕೆಯ ಗಂಡ ಕಳೆದ ದಿನಗಳ ಹಿಂದೆ ಮನೆ ಬಾಡಿಗೆಗೆ ಪಡೆದುಕೊಂಡು ವಾಸವಿದ್ದರು.
ಈ ವೃದ್ಧ ಎಲ್ಲಾದರು ಹೊರಗಡೆ ಹೋದರೆ ಮನೆಗೆ ಬೀಗ ಹಾಕಿ ಬೀಗದ ಕೀ ಕಿಟಿಕಿಯಲ್ಲಿಟ್ಟು ಹೋಗುತ್ತಿದ್ದರು. ಇದನ್ನು ಗಮನಿಸಿದ ಬಂಧಿತ ಆರೋಪಿ ಮಮತಾ, ಹತ್ತು ದಿನಗಳ ಕಾಲ ಹೊಂಚು ಹಾಕಿ ಕಾದಿದ್ದಳು. ಒಂದು ದಿನ ವೃದ್ಧ ಮನೆಗೆ ಬೀಗ ಹಾಕಿ ಕೀಯನ್ನು ಎಂದಿನಂತೆ ಕಿಟಿಕಿಯಲ್ಲಿಟ್ಟು ಹೊರ ಹೋಗಿದ್ದಾನೆ. ಇದನ್ನೇ ಬಂಡವಾಳ ಮಾಡಿಕೊಂಡ ಮಮತಾ ಕೀ ತೆಗೆದೊಕೊಂಡು ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನಕ್ಕೆ ಇಳಿದೇಬಿಟ್ಟಿದ್ದಾಳೆ…
ವೃದ್ಧ ವಾಸವಾಗಿದ್ದ ಮನೆಯ ಒಳಗಡೆ ಕೊಠಡಿಯಲ್ಲಿರುವ 2 ಬೀರುವಿನ ಕಬಿಣದ ಬಿರುವಿನಲ್ಲಿ ನಾರಾಯಣಸ್ವಾಮಿರವರಿಗೆ ಸೇರಿದ 37 ಗ್ರಾಂ ತೂಕದ ಒಂದು ಚಿನ್ನದ ಚೈನ್, 16 ಗ್ರಾಂ ತೂಕದ ಒಂದು ಬ್ರಾಸ್ ಲೈಟ್, 11 ಗ್ರಾಂ ತೂಕದ ಒಂದು ಬಳೆ, 11 ಗ್ರಾಂ ತೂಕ್ ಎರಡು ಚಿನ್ನದ ಉಂಗುರಗಳು, 6.7 ಗ್ರಾಂ ತೂಕದ ಒಂದು ಜೊತೆ ಓಲೆ ಮತ್ತು ಮೂಗು ನತ್ತು, 9.8 ಗ್ರಾಂ ತೂಕದ ಒಂದು ಚೈನು ಹಾಗೂ ಒಂದು ಸಾವಿರ ನಗದು ಸೇರಿ ಸುಮಾರು 9ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ 91.5 ಗ್ರಾಂ ಚಿನ್ನದ ಒಡವೆಗಳನ್ನು ಕದ್ದು ಪರಾರಿಯಾಗಿದ್ದಾಳೆ.
ಕಳ್ಳತನವಾಗಿರುವ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮನೆ ಮಾಲೀಕ ಮುನಿಸ್ವಾಮಯ್ಯ ದೂರು ದಾಖಲಿಸುತ್ತಾರೆ.
ಪೊಲೀಸರು ಪ್ರಕರಣ ಭೇದಿಸಿದ್ದು ಹೇಗೆ….?
ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು, ಅಕ್ಕಪಕ್ಕದ ಮನೆ ಹಾಗೂ ಬಾಡಿಗೆಗೆ ಬಂದಿದ್ದವರನ್ನು ವಿಚಾರಣೆ ಹಾಗೂ ಇತರೆ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ.
ಅನುಮಾನದ ಮೇರೆಗೆ ವೃದ್ಧನ ಮನೆ ಪಕ್ಕದಲ್ಲಿ ಬಾಡಿಗೆಗೆ ಇದ್ದ ಮಮತಾಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದಾಗ ಕೈಚಳಕ ಕಂಡುಬಂದಿದೆ…
ಮಮತಾ ಮೂಲತಃ ರಘುನಾಥಪುರದವಳು, ಹೊಸಕೋಟೆಯ ಸೂಲಿಬೆಲೆ ಮೂಲದ ಹುಡುಗನನ್ನು ಲವ್ ಮಾಡಿ ಮದುವೆಯಾಗಿ ಹೋಗಿರುತ್ತಾಳೆ. ದೊಡ್ಡಬಳ್ಳಾಪುರದ ಪಾಲನಜೋಗಿಹಳ್ಳಿಗೆ ಬಂದು ಬಾಡಿಗೆ ಮನೆ ಮಾಡಿಕೊಂಡು ವಾಸವಿರುತ್ತಾರೆ. ಗಂಡ ಬದುಕಿದ್ದಾಗಲೇ ಕಳ್ಳತನ ಮಾಡುತ್ತಾಳೆ. ಕಳ್ಳತನ ನಡೆದ ಕೆಲವು ದಿನಗಳ ನಂತರ ಮಮತಾಳ ಗಂಡ ಅನಾರೋಗ್ಯದಿಂದ ಸಾವನ್ನಪ್ಪುತ್ತಾನೆ.
ಮಮತಾಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮುಂದುವರಿಸಿದಾಗ, ನಾನು ಅಲ್ಲ ನನ್ನ ಗಂಡ ಕಳ್ಳತನ ಮಾಡಿದ್ದು, ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಾಳೆ. ಪೊಲೀಸರು ಇವಳ ಮಾತು ನಂಬದೇ ಬ್ಯಾಂಕ್ ಸ್ಟೇಟ್ ಮೆಂಟ್ ಪರಿಶೀಲಿಸಿದಾಗ ಅಸಲಿ ಸತ್ಯ ಹೊರಬಂದಿದೆ…
ಚಿನ್ನ ಕದ್ದು ಮುಂದೇನು ಮಾಡಿದಳು…?
ಡಿ.ಕ್ರಾಸ್ ಸಮೀಪದಲ್ಲಿರುವ ಗೋಲ್ಡ್ ಲೋನ್ ಸಂಸ್ಥೆಯೊಂದರಲ್ಲಿ ಕದ್ದ ಚಿನ್ನವನ್ನು ಅಡವಿಟ್ಟು ಸುಮಾರು 4.68 ಲಕ್ಷ ಪಡೆಯುತ್ತಾಳೆ.
ಅಡವಿಟ್ಟು 4.68 ಲಕ್ಷ ಪಡೆದ ಈಕೆ ಅಕೌಂಟ್ ನಿಂದ ಹಣ ಡ್ರಾ ಮಾಡಿಕೊಂಡು ಕೇವಲ 15 ದಿನದಲ್ಲಿ ಬೇಕಾಬಿಟ್ಟಿ ಖರ್ಚು ಮಾಡುತ್ತಾಳೆ. ಇದನ್ನೆಲ್ಲಾ ಪರಿಶೀಲಿಸಿದ ಪೊಲೀಸರು ಅಡವಿಟ್ಟ ಚಿನ್ನವನ್ನು ವಶಕ್ಕೆ ಪಡೆದು ದೂರುದಾರನಿಗೆ ಹಸ್ತಾಂತರ ಮಾಡುತ್ತಾರೆ…. ಸದ್ಯ ಪೊಲೀಸರು ಮನೆಕಳ್ಳಿಯನ್ನು ಜೈಲಿಗಟ್ಟಿ ಕಂಬಿ ಎಣಿಸುವಂತೆ ಮಾಡಿದ್ದಾರೆ.
ಕಳುವಾಗಿದ್ದ ಚಿನ್ನಾಭರಣವನ್ನು ಪೊಲೀಸರ ಮೂಲಕ ಮತ್ತೆ ಧಕ್ಕಿಸಿಕೊಂಡ ಮುನಿಸ್ವಾಮಿ ಮಾತನಾಡಿ, ನಾನು ಹಾಲು ಮಾರಾಟ ಮಾಡಿ ಸಂಪಾದಿಸಿದ ಹಣದಲ್ಲಿ ನಮ್ಮ ತಾಯಿಗೆ ಚಿನ್ನ ಮಾಡಿಸಿದ್ದೆ, ಮನೆ ಬಾಡಿಗೆಗೆ ಬಂದವರೇ ಈ ರೀತಿ ಮಾಡಿದರೆ ಹೇಗೆ, ಯಾರನ್ನು ನಂಬುವುದು. ಒಡವೆ ಕಳೆದುಕೊಂಡ ನಂತರ ದಿಕ್ಕು ತೋಚದಂತೆ ಆಗಿತ್ತು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿ ಚಿನ್ನಾಭರಣ ವಶಕ್ಕೆ ಪಡೆದು ಮತ್ತೆ ನನ್ನ ಒಡವೆ ನನಗೆ ವಾಪಸ್ ನೀಡಿದ್ದಾರೆ. ನನಗೆ ಬಹಳ ಸಂತೋಷವಾಗಿದೆ. ಪೊಲೀಸರು ಒಳ್ಳೆ ಕಾರ್ಯ ಮಾಡಿದ್ದಾರೆ ಅವರಿಗೆ ತುಂಬು ಹೃದಯದ ಅಭಿನಂದನೆಗಳು ಎಂದು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಳ್ಳರನ್ನು ಪತ್ತೆ ಮಾಡುವಲ್ಲಿ ಶ್ರಮಿಸಿದ ಪೊಲೀಸ್ ಸಿಬ್ಬಂದಿ ಸುನಿಲ್ ಬಾಸ್ಕಿ, ಸಚಿನ್, ಹರೀಶ್ ಮತ್ತು ಪ್ರವೀಣ್, ಅರ್ಜುನ್ ಲಮಾಣಿ ರವರನ್ನ ಇನ್ಸ್ ಪೆಕ್ಟರ್ ಸಾಧಿಕ್ ಪಾಷ ಅಭಿನಂಧಿಸಿದ್ದಾರೆ.