ದೊಡ್ಡಬಳ್ಳಾಪುರ: ಮನೆಯ ಬಾಗಿಲು ಮೀಟಿ ₹1.60 ಲಕ್ಷ ನಗದು, ಚಿನ್ನಾಭರಣ ದೋಚಿರುವ ಘಟನೆ ನಗರದ ಕುರುಬರಹಳ್ಳಿ ಎರಡನೇ ಹಂತದ 2 ಕ್ರಾಸಿನಲ್ಲಿ ನಡೆದಿದೆ.
ಇಲ್ಲಿನ ಬಿ.ಎನ್.ನಂಜುಂಡಯ್ಯ ಅವರ ಮನೆಯಲ್ಲಿ ಶನಿವಾರ ರಾತ್ರಿ ಕಳ್ಳತನ ನಡೆದಿದೆ. ನಂಜುಂಡಯ್ಯ ಅವರ ಮಗಳ ಮನೆಯ ಗೃಹಪ್ರವೇಶಕ್ಕೆಂದು ಚಂದ್ರಮೌಳೇಶ್ವರ ಬಡಾವಣೆಗೆ ತೆರಳಿದ್ದರು. ಗೃಹಪ್ರವೇಶ ಮುಗಿಸಿಕೊಂಡ ಭಾನುವಾರ ರಾತ್ರಿ ಮನೆಗೆ ಬಂದಾಗ ಬಾಗಿಲು ಮೀಟಿ ಬೀರುವಿನಲ್ಲಿದ್ದ 1.60 ಲಕ್ಷ ರೂ. ನಗದು, ಮಗುವಿನ ನಾಲ್ಕು ಚಿನ್ನದ ಉಂಗುರ, ಎರಡು ಜೊತೆ ಓಲೆಯನ್ನು ಕಳ್ಳರು ಕದ್ದೊಯ್ದಿದ್ದಾರೆ.
ಮನೆಯ ಮೇಲೆ ಅಳವಡಿಸಿದ್ದ ಗ್ರಿಲ್ ಬಾಗಿಲು ತೆಗೆದು ಒಳ ಬಂದಿರುವ ಕಳ್ಳರು, ಉರುಯುತ್ತಿದ್ದ ಬಲ್ಬ್ ಹೊಡೆದು ಹಾಕಿ, ಆರೆ ಕೋಲಿನಿಂದ ಬಾಗಿಲು ಮೀಟಿ ಒಳ ಹೋಗಿದ್ದಾರೆ. ಜೊತೆಗೆ ಮಹಡಿಯ ಮೇಲಿದ್ದ ರೂಮಿನ ಬಾಗಿಲು ಮೀಟಿದ್ದಾರೆ. ಭಾನುವಾರ ರಾತ್ರಿಯೇ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಮಾಲೀಕರಾದ ನಂಜುಂಡಯ್ಯ ಹಾಗೂ ಅವರ ಮಗ ಪ್ರಭಾಕರ್ ತಿಳಿಸಿದರು.
ಸೋಮವಾರ ಬೆಳಿಗ್ಗೆ ಸ್ಥಳಕ್ಕೆ ಬಂದ ಗ್ರಾಮಾಂತರ ಠಾಣೆ ಇನ್ ಸ್ಪೆಕ್ಟರ್ ಸಾಧಿಕ್ ಪಾಷಾ ಹಾಗು ಸಿಬ್ಬಂದಿ ಪರಿಶೀಲಿಸಿದರು. ಶ್ವಾನದಳ ಕೂಡ ಪರಿಶೀಲನೆ ನಡೆಸಿತು. ನಂಜುಂಡಪ್ಪ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.