“ಮನೆ ಬಾಗಿಲಿಗೆ ಸರ್ಕಾರಿ ಸೇವೆ” ಎಂಬ ನೂತನ ಕಾರ್ಯಕ್ರಮದಡಿ ವಿಕಲಚೇತರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವತಿಯಿಂದ ಪ್ರತಿ ಬುಧವಾರ ವಿಕಲಚೇತನ ವ್ಯಕ್ತಿಗಳ ಮನೆಗೆ ಭೇಟಿ ನೀಡಿ ಅವರ ಅವಶ್ಯಕತೆಗಳನ್ನು ಪರಿಶೀಲಿಸಿ ಶೀಘ್ರ ಪರಿಹಾರ ದೊರಕಿಸಲಾಗುತ್ತಿದೆ.
ಈ ನಿಟ್ಟಿನಲ್ಲಿ ಮೊದಲನೇದಾಗಿ ದೊಡ್ಡಬಳ್ಳಾಪುರ ತಾಲೂಕಿನ ಸಕ್ಕರೆಗೊಲ್ಲಹಳ್ಳಿ ಗ್ರಾಮ ಪಂಚಾಯತಿಯನ್ನು ಆಯ್ಕೆ ಮಾಡಿಕೊಂಡು ನೇರವಾಗಿ ಅವರ ಮನೆ ಹತ್ತಿರ ಹೋಗಿ ಅವರಿಗೆ ಬೇಕಾದಂತಹ ಸಾಧನ ಸಲಕರಣೆಗಳನ್ನು ವಿತರಣೆ ಮಾಡಲಾಯಿತು.
ಇಂದೇ ಸುಮಾರು 10ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿ ಇಲಾಖೆಯ ಯೋಜನೆಗಳಾದ ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ, ಪೋಷಣ ಭತ್ಯೆ ಸಾಧನ ಸಲಕರಣೆಗಳು, ಗುಂಪು ರಚನೆ, ವೈದ್ಯಕೀಯ ಪರಿಹಾರ ನಿಧಿ, ಶೇಕಡ ಐದರ ಅನುದಾನದ ಸೌಲಭ್ಯದ ಬಗ್ಗೆ, ವಿದ್ಯಾರ್ಥಿ ವೇತನ ವಿದ್ಯಾರ್ಥಿ ಯೋಜನೆಗಳು, ವಿಕಲಚೇತನರಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನ ನೀಡುವ ಯೋಜನೆ, ಅಂಧ ವಿದ್ಯಾರ್ಥಿಗಳಿಗೆ ಬ್ರೈಲ್ ಕಿಟ್ ಮತ್ತು ಲ್ಯಾಪ್ ಟಾಪ್ ನೀಡುವ ಯೋಜನೆ, ಸ್ವಯಂ ಉದ್ಯೋಗಕ್ಕಾಗಿ ಆಧಾರ ಯೋಜನೆ, ವಿಕಲಚೇತನ ವ್ಯಕ್ತಿಗಳನ್ನು ಸಾಮಾನ್ಯ ವ್ಯಕ್ತಿ ಮದುವೆಯಾದಲ್ಲಿ ಪ್ರೋತ್ಸಾಹ ಧನ ನೀಡುವ ಯೋಜನೆ, ಅಂಗವಿಕಲ ಮಕ್ಕಳ ಶಿಶು ಕೇಂದ್ರ ಯೋಜನೆ,ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ ಯೋಜನೆ, ನಿರಾಮಯ ಆರೋಗ್ಯ ವಿಮಾ ಯೋಜನೆ ಹಿರಿಯ, ನಾಗರಿಕರ ಕಲ್ಯಾಣಕ್ಕಾಗಿ ಯೋಜನೆಗಳು, ವಿವಿಧ ರೀತಿಯ ಯೋಜನೆಗಳನ್ನು ಪ್ರಚಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ವಿಕಲಚೇತನರ ಅಧಿಕಾರಿಗಳಾದ ಜಗದೀಶ ಎನ್.ಎಂ, ಕಚೇರಿ ಸಿಬ್ಬಂದಿ, ಡಿಡಿಆರ್ ಸಿ ಸಿಬ್ಬಂದಿ, ಗ್ಯಾಸ್ ಸಂಸ್ಥೆ ಸಿಬ್ಬಂದಿ, ಹಿರಿಯ ನಾಗರಿಕರ ಸಹಾಯ ವಾಣಿ ಕೇಂದ್ರದ ಸಿಬ್ಬಂದಿ,ಪುನರ್ವಸತಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಹಾಜರಿದ್ದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ವಿಕಲಚೇತನರ ಸಹಾಯವಾಣಿ ಕೇಂದ್ರ 08029787441