ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಗಿಲು ಮುರಿದು ಅರ್ಧ ಕೆಜಿಯಷ್ಟು ಬಂಗಾರ ಜೊತೆಗೆ ನಗದು ದೋಚಿ ಕಳ್ಳರು ಎಸ್ಕೇಪ್ ಆಗಿರುವ ಘಟನೆ ಗೌರಿಬಿದನೂರು ನಗರದಲ್ಲಿ ನಡೆದಿದೆ.
ನಗರದ ತ್ಯಾಗರಾಜ ಕಾಲೋನಿಯಲ್ಲಿ ವಾಸವಿರುವ ಅಶ್ವತ್ಥನಾರಾಯಣ ಶೆಟ್ಟಿ, ಶೈಲಜಾ ದಂಪತಿಆರೋಗ್ಯ ಪರೀಕ್ಷೆಗೆಂದು ಮಗನ ಮನೆ ಬೆಂಗಳೂರಿಗೆ ಕಳೆದ ಶುಕ್ರವಾರ ಹೋಗಿದ್ದರು. ಚಿಕಿತ್ಸೆಯ ನಂತರ ಗೌರಿಬಿದನೂರು ನಗರದ ಮನೆಗೆ ವಾಪಸ್ ಬರಬೇಕಾಗಿತ್ತು. ಆದರೆ ಮಕ್ಕಳ ಬಲವಂತದಿಂದ ಸಂಕ್ರಾಂತಿ ಹಬ್ಬಕ್ಕೆ ಬೆಂಗಳೂರಿನ ಮಗನ ಮನೆಯಲ್ಲೇ ಉಳಿದುಕೊಂಡಿದ್ದರು. ಇದೇ ಸಮಯ ಕಳ್ಳರಿಗೆ ಅನುಕೂಲವಾಗಿದ್ದು, ರಾತ್ರಿ ಕಳ್ಳರು ಮನೆಯ ಬೀಗವನ್ನು ಹೊಡೆದು ಮನೆಯಲ್ಲಿದ್ದ ಚಿನ್ನಾಭರಣವನ್ನು ಕದ್ದು ಎಸ್ಕೇಪ್ ಆಗಿದ್ದಾರೆ.
ಮನೆ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಎರಡು ಬೀರುವಗಳನ್ನು ತೆಗೆದು 3 ಚಿನ್ನದ ನಕ್ಲೀಸ್, 4 ಚಿನ್ನದ ಚೈನ್‌ಗಳು, ಒಂದು ಜೊತೆ ಬಳೆ, ಒಂದು ಬ್ರಾಸ್ ಲೈಟ್, 7 ಉಂಗರುಗಳೊಂದಿಗೆ ಸುಮಾರು ಒಂದು ಲಕ್ಷ ರೂಗಳ ನಗದನ್ನು ದೋಚಿ ಎಸ್ಕೇಪ್ ಆಗಿದ್ದಾರೆ.
ಇನ್ನೂ ಮನೆ ದರೋಡೆ ವಿಷಯ ತಿಳಿದು ಪೊಲೀಸರ ಗಮನಕ್ಕೆ ತಂದಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆ ಇದೇ ಮನೆಯ 2ನೇ ಮಹಡಿಯಲ್ಲಿ ಕಳ್ಳತನಕ್ಕೆ ಯತ್ನ ನಡೆದಿತ್ತು. ಆಗ ಸಿ ಸಿ ಕ್ಯಾಮೆರಾ ಇರುವುದರಿಂದ ಜಾಗೃತಗೊಂಡ ಮನೆ ಮಾಲೀಕರು ಸ್ಥಳೀಯ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದು, ಪೊಲೀಸರು ಕಾರ್ಯಪ್ರವೃತ್ತರಾಗಿ ಅನಾಹುತ ತಪ್ಪಿಸಿದ್ದರು. ಆದರೆ, ಈ ದಿನ ಮತ್ತೆ ಕಳ್ಳತನವಾಗಿರುವ ಘಟನೆ ನಡೆದಿದೆ. ಮನೆಗಳಿಗೆ ಸಿಸಿ ಕ್ಯಾಮೆರಾ ಅಳವಡಿಸುವುದರಿಂದ ಯಾವುದೇ ತೊಂದರೆ ಇರುವುದಿಲ್ಲ. ಊರು ಮತ್ತು ಪ್ರವಾಸ ಇತ್ಯಾದಿ ಕಡೆಗಳಿಗೆ ಹೋಗಬೇಕಾದರೆ ಮಾಹಿತಿ ನೀಡಿ ಹೋಗಿ ಎಂದು ತಿಳಿಸಿದ್ದೇವೆ. ಅವರ ನಿರ್ಲಕ್ಷದಿಂದ ಈ ದಿನ ಕಳ್ಳತನವಾಗಿದೆ. 70 ರಿಂದ 80 ಲಕ್ಷ ಖರ್ಚು ಮಾಡಿ ಮನೆ ಕಟ್ಟುತ್ತಾರೆ.ಆದರೆ 10 ಸಾವಿರ ರೂಪಾಯಿ ಕೊಟ್ಟು ಕ್ಯಾಮೆರಾ ಹಾಕಿಸಿದರೆ ಬಹಳ ಉತ್ತಮ ಅವರಿಗೂ ಸಹ ರಕ್ಷಣೆ ಆಗಿರುತ್ತದೆ ಎಂದು ಕಾರ್ಪೋರೆಟರ್ ಅಮರ್ ಮಾಹಿತಿ ನೀಡಿದ್ದಾರೆ.
ಇನ್ನೂ ಸ್ಥಳಕ್ಕೆ ನಗರಠಾಣೆಯ ಪೊಲೀಸರು ಹಾಗೂ ಬೆರಳಚ್ಚು ತಜ್ಙರು, ಶ್ವಾನ ದಳ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.