ಕೋಲಾರ: ಮಹಿಳೆಯರು ಸ್ವಾವಲಂಬನೆಯ ಬದುಕನ್ನು ರೂಪಿಸಿಕೊಳ್ಳುವುದರ ಮೂಲಕ ಆರ್ಥಿಕವಾಗಿ ಸಬಲರಾಗಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಾನಾ ಯೋಜನೆಗಳನ್ನು ಜಾರಿ ಮಾಡಿದ್ದು ಯಾವುದೇ ಮಧ್ಯವರ್ತಿಗಳಿಗೆ ಹಣ ನೀಡದೆ ನೇರವಾಗಿ ಅರ್ಜಿ ಸಲ್ಲಿಸಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ನಿರ್ದೇಶಕ ಡಾ.ಎ.ಮೋಹನ್ ರಾವ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಎಸ್ಸಿ, ಎಸ್ಟಿ, ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಮಂಡಳಿ ಮತ್ತು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ನಿರುದ್ಯೋಗ ಮಹಿಳೆಯರಿಗೆ ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರಕಾರಗಳು ಯಾವುದೇ ಜಾತಿ ಧರ್ಮ ನೋಡದೇ ಎಲ್ಲರಿಗೂ ಉಚಿತವಾಗಿ ಸೌಲಭ್ಯಗಳನ್ನು ನೀಡಲು ಮುಂದಾಗಿದೆ ಕೆಲವರು ಕಮಿಷನ್ ಆಸೆಗಾಗಿ ಮಧ್ಯವರ್ತಿಗಳ ಮೂಲಕ ಅರ್ಜಿಗಳನ್ನು ಹಾಕಲು ಹೊರಟಿದ್ದಾರೆ ಅಂತಹವರ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಮಹಿಳೆಯರಿಗೆ ಕಿವಿಮಾತು ಹೇಳಿದರು.
ಸರಕಾರಗಳಿಂದ ನಿರುದ್ಯೋಗ ಜನರಿಗೆ ಅನೇಕ ಕಾರ್ಯಕ್ರಮಗಳಿವೆ ಆರ್ಥಿಕವಾಗಿ ಮುಂದೆ ಬರಲು ಅವಕಾಶಗಳು ಇವೆ ಆದರೆ ಮಾಹಿತಿ ಹಾಗೂ ಅರಿವಿನ ಕೊರತೆಯಿಂದ ಯೋಜನೆಗಳಿಂದ ವಂಚಿತರಾಗಿದ್ದಾರೆ ಅವರಿಗೆ ಅರಿವು ಮೂಡಿಸುವ ಕೆಲಸವನ್ನು ಇಲಾಖೆ ಮತ್ತು ಮಂಡಳಿಯ ವತಿಯಿಂದ ನಡೆಯುತ್ತಿದೆ ಮಹಿಳೆಯರಿಗೆ ಕೌಶಲ್ಯ ತರಬೇತಿ ಕೊಡಲು ಸಿದ್ದವಿದ್ದು ಸ್ವಯಂ ಉದ್ಯೋಗದಿಂದ ಎಲ್ಲರೂ ಬದುಕುವ ವಾತಾವರಣವನ್ನು ಸೃಷ್ಟಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಕಲ್ಲಂಡೂರು ಪಾಟರಿ ಕ್ಲಸ್ಟರ್ ಅಧ್ಯಕ್ಷ ಡಾ.ಕೆ ನಾಗರಾಜ್ ಮಾತನಾಡಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಸ್ವಯಂ ಉದ್ಯೋಗ ಪ್ರಾರಂಭಿಸಲು ಸಬ್ಸಿಡಿ ಮೂಲಕವೇ ಸೌಲಭ್ಯಗಳನ್ನು ಒದಗಿಸುತ್ತಿದ್ದು ಅದರ ಸದುಪಯೋಗವನ್ನು ಪಡೆಯುವುದರ ಜೊತೆಗೆ ತಾವುಗಳು ಆರ್ಥಿಕವಾಗಿ ಸಬಲರಾಗಬೇಕು ನಿಮ್ಮ ಉದ್ಯೋಗದೊಂದಿಗೆ ಬೇರೆಯವರಿಗೆ ಸಹ ಉದ್ಯೋಗದ ಅವಕಾಶಗಳನ್ನು ಕೊಡಬೇಕು ಮಹಿಳೆಯರಿಗೆ ವಿಶೇಷವಾದ ಯೋಜನೆಗಳನ್ನು ರೂಪಿಸಿದ್ದು ಅವುಗಳ ಬಗ್ಗೆ ಅರಿವು ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಸುಬ್ಬಾ ನಾಯಕ್ ಮಾತನಾಡಿ ಮಹಿಳೆಯರು ಆರ್ಥಿಕವಾಗಿ ಮುಂದೆ ತರುವ ಉದ್ದೇಶದಿಂದ ಸರಕಾರಗಳು ಮುಂದೆ ಬಂದಿವೆ ಬ್ಯಾಂಕ್ ಗಳಿಂದ ಸೌಲಭ್ಯಗಳ ಪಡೆಯುವ ಸಂದರ್ಭದಲ್ಲಿ ನಿರ್ಲಕ್ಷ್ಯ ಮಾಡಿದರೆ ಲೀಡ್ ಬ್ಯಾಂಕ್ ಗಮನಕ್ಕೆ ತನ್ನಿ ಮಹಿಳೆಯರ ಸಬಲೀಕರಣದ ಉದ್ದೇಶವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ರೇಷ್ಮೆ ಇಲಾಖೆಯ ಉಪ ನಿರ್ದೇಶಕ ನಾಗರಾಜ್, ಗ್ರಾಮೋದ್ಯೋಗ ಮಂಡಳಿಯ ಹನುಮಾನ್ ಮೀನಾ, ಶಶಿಕಾಂತ್, ಜಿಲ್ಲಾ ಕೈಗಾರಿಕಾ ಕೇಂದ್ರದ ನಂದಿನಿ, ಎಸ್ಸಿ ಎಸ್ಟಿ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಮಂಡಳಿಯ ಅಧ್ಯಕ್ಷೆ ನೇತ್ರಾವತಿ, ಜಿಲ್ಲಾ ಅಧ್ಯಕ್ಷ ಶಿವಕುಮಾರ್, ರಾಮಾಂಜಿನಪ್ಪ, ರುಕ್ಮಿಣಿ, ಮುಂತಾದವರು ಇದ್ದರು.