ಮದ್ಯ ನಿಷೇಧ ಜಾರಿಯಲ್ಲಿರುವ ಬಿಹಾರದಲ್ಲಿ ಕಲಬೆರಕೆ ಮದ್ಯ ಸೇವಿಸಿ ಸುಮಾರು 28 ಮಂದಿ ಸಾವು..!

ಮದ್ಯ ನಿಷೇಧ ಜಾರಿಯಲ್ಲಿರುವ ಬಿಹಾರ ರಾಜ್ಯದಲ್ಲಿ ಕಲಬೆರಕೆ ಮದ್ಯ ಸೇವಿಸಿ 28 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ..

ಬಿಹಾರದ ಸಿವಾನ್ ಜಿಲ್ಲೆಯ ಮಘರ್ ಮತ್ತು ಔರಿಯಾ ಗ್ರಾಮಗಳಲ್ಲಿ ಕಲಬೆರಕೆ ಮದ್ಯ ಸೇವಿಸಿ 22 ಜನರು ಮತ್ತು ಸರನ್ ಜಿಲ್ಲೆಯ ಇಬ್ರಾಹಿಂಪುರದಲ್ಲಿ 6 ಜನರು ಸಾವನ್ನಪ್ಪಿದ್ದಾರೆ.

ಇನ್ನು 25 ಮಂದಿ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರ ಕುಟುಂಬಗಳಿಗೆ 4 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಬಿಹಾರ ಸರ್ಕಾರ ಘೋಷಿಸಿದೆ.

ಇಲ್ಲಿನ ಜಿಲ್ಲಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಸಿವಾನ್ ಹೂಚ್ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೆ, ಒಟ್ಟು 79 ಜನರನ್ನು ಸಿವಾನ್ ಸದರ್ ಆಸ್ಪತ್ರೆಗೆ, ಬಸಂತ್‌ಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. 13 ತೀವ್ರ ಅಸ್ವಸ್ಥರನ್ನು ಚಿಕಿತ್ಸೆಗಾಗಿ ಪಿಎಂಸಿಎಚ್ ಪಾಟ್ನಾಗೆ ದಾಖಲಿಸಲಾಗಿದೆ. 28 ಜನರ ಮರಣೋತ್ತರ ಪರೀಕ್ಷೆಯನ್ನು ಮಾಡಲಾಗಿದೆ ಮತ್ತು ಅವರ ದೇಹಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದರು.

ಮದ್ಯ ನಿಷೇಧ ನೀತಿ ವಿಫಲವಾಗಿದೆ ಎಂದು ಪ್ರತಿಪಕ್ಷಗಳು ಬಿಹಾರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.

“ಮದ್ಯ ನಿಷೇಧವು ಶ್ರೀ ನಿತೀಶ್ ಕುಮಾರ್ ಅವರ ಸಾಂಸ್ಥಿಕ ಭ್ರಷ್ಟಾಚಾರಕ್ಕೆ ಒಂದು ಸಣ್ಣ ಉದಾಹರಣೆಯಾಗಿದೆ. ಮದ್ಯ ನಿಷೇಧ ಜಾರಿಯಾಗಿದ್ದರೆ ಅದನ್ನು ಸಂಪೂರ್ಣವಾಗಿ ಜಾರಿಗೊಳಿಸುವುದು ಸರ್ಕಾರದ ಜವಾಬ್ದಾರಿ. ಆದರೆ, ಮುಖ್ಯಮಂತ್ರಿಗಳ ಸೈದ್ಧಾಂತಿಕ ಮತ್ತು ನೀತಿ ಸಂದಿಗ್ಧತೆ, ದುರ್ಬಲ ಇಚ್ಛಾಶಕ್ತಿ ಮತ್ತು ಜನಪ್ರತಿನಿಧಿಗಳ ಬದಲಿಗೆ ಆಯ್ದ ಅಧಿಕಾರಿಗಳ ಮೇಲೆ ಅವಲಂಬನೆಯಿಂದಾಗಿ ಇಂದು ಬಿಹಾರದಲ್ಲಿ ಮದ್ಯ ನಿಷೇಧ ಸೂಪರ್ ಫ್ಲಾಪ್ ಆಗಿದೆ” ಎಂದು ಆರ್‌ಜೆಡಿ ನಾಯಕ ಮತ್ತು ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ.

ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದು ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಶುಕ್ರವಾರ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಸಿನ್ಹಾ, “ಸರ್ಕಾರವು ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ ಮತ್ತು ಇದರ ಹಿಂದಿನ ಅಪರಾಧಿಗಳನ್ನು ಬಿಡಲಾಗುವುದಿಲ್ಲ. ಇದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಸರ್ಕಾರ ತನಿಖೆ ನಡೆಸುತ್ತಿದೆ. ಅವರ ಮುಖಗಳನ್ನು ಬಯಲು ಮಾಡಲಾಗುವುದು ಮತ್ತು ಬಡ ಜನರ ಜೀವನದ ಜೊತೆ ಚೆಲ್ಲಾಟವಾಡುವವರನ್ನು ಬಿಡುವುದಿಲ್ಲ. ಎಲ್ಲರ ಒಪ್ಪಿಗೆ ಮೇರೆಗೆ ಮದ್ಯ ನಿಷೇಧ ಜಾರಿಗೆ ತರಲಾಗಿದೆ.  ಇದನ್ನು ಸಂಪೂರ್ಣವಾಗಿ ಜಾರಿಗೆ ತರಲು ಎಲ್ಲರೂ ಸಹಕರಿಸಬೇಕು ಮತ್ತು ಈ ಅಪರಾಧ ಎಸಗಿದ ಅಪರಾಧಿಗಳನ್ನು ಉಳಿಸುವುದನ್ನು ನಿಲ್ಲಿಸಬೇಕು” ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *