
ಮದಗೊಂಡನಹಳ್ಳಿ ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರಲ್ಲಿ ಗುಂಪು ಗುಂಪಾಗಿ ಸಂಚರಿಸುವ ಶ್ವಾನಗಳನ್ನು ಕಂಡು ಭಯದಿಂದ ಓಡಾಟ ನಡೆಸುವ ಆತಂಕ ಎದುರಾಗಿದೆ.
ಹಗಲು ರಾತ್ರಿ ಎನ್ನದೆ ಬೊಗಳುತ್ತವೆ. ದ್ವಿಚಕ್ರ ವಾಹನ ಚಾಲಕರು, ವಿದ್ಯಾರ್ಥಿಗಳು ಹಾಗೂ ಮಕ್ಕಳು ದಾರಿಯಲ್ಲಿ ಸಂಚರಿಸುವಾಗ ಕಚ್ಚಲು ಬರುತ್ತಿರುವುದರಿಂದ ಜನತೆ ಭಯದಿಂದ ಓಡಾಡುವಂತಾಗಿದೆ.

ನಾಯಿ ಭಯದಿಂದ ಮಕ್ಕಳು ಶಾಲೆಗೆ ಹೋಗಲು ಹೆದರುತ್ತಿದ್ದಾರೆ. ಬೆಳಗ್ಗೆ ಹಾಗೂ ಸಾಯಂಕಾಲ ಹಾಲಿನ ಡೈರಿಗೆ ಹಾಲು ಹಾಕುವ ರೈತರು ಜೀವ ಭಯದಿಂದ ಬರುತ್ತಾರೆ. ನಾಯಿಗಳ ಹಾವಳಿ ತಪ್ಪಿಸುವಂತೆ ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಮಾಡಿದರೂ ಕ್ಯಾರೇ ಎನ್ನದ ಗ್ರಾಪಂನವರು, ಇನ್ನಾದರೂ ಕ್ರಮ ಕೈಗೊಂಡು ನಾಯಿ ಕಾಟದಿಂದ ಮುಕ್ತಿ ಕೊಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.