ಮತ ಎಣಿಕೆ ದಿನದಂದು ಶಾಂತಿ ಸುವ್ಯವಸ್ಥೆ ಕಾಪಾಡಲು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ: ಜೊತೆಗೆ ಮದ್ಯ ಮಾರಾಟ ನಿಷೇಧ

ಮತ ಎಣಿಕೆ ದಿನದಂದು ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಜಿಲ್ಲಾ ವ್ಯಾಪ್ತಿಯಲ್ಲಿ ಸಿ.ಆರ್.ಪಿ.ಸಿ. ಕಲಂ 144ರನ್ವಯ ಮೇ.10 ರಿಂದ ಮೇ.14 ರ ಮಧ್ಯರಾತ್ರಿ 12.00 ಗಂಟೆಯವರೆಗೆ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.

ಮೆರವಣಿಗೆ ಮಾಡುವುದನ್ನು, ಯಾವುದೇ ರೀತಿಯ ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು, ಸಿಡಿಮದ್ದು, ಪಟಾಕಿ ಸೇರಿದಂತೆ ಸ್ಫೋಟಕ ವಸ್ತುಗಳನ್ನು ಉಪಯೋಗಿಸುವುದನ್ನು ನಿಷೇಧಿಸಿ, ಭಾರತೀಯ ದಂಡ ಸಂಹಿತೆ ಕಲಂ 144 ರನ್ವಯ ಮತ ಎಣಿಕೆ ಕೇಂದ್ರದ ಸುತ್ತಲು ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ.

ಮತ ಎಣಿಕೆ ಕಾರ್ಯ ಶಾಂತಿಯುತವಾಗಿ ನಡೆಯಲು ಮತ ಎಣಿಕೆ ಕೇಂದ್ರದ ಸುತ್ತ ಹಾಗೂ ಮತ ಎಣಿಕೆ ಕೇಂದ್ರದ ಒಳಗೆ 2 ಎಸಿಪಿ, 9 ಇನ್ಸ್‌ಪೆಕ್ಟರ್ 29 ಜನ ಪಿಎಸ್ಐ ಹಾಗೂ 250 ಪೊಲೀಸ್ ಸಿಬ್ಬಂದಿಗಳನ್ನು ಹಾಗೂ 3 ಕೆಎಸ್ ಆರ್ ಪಿ ತುಕಡಿ ಮತ್ತು 2 ಕಂಪನಿ ಬಿಎಸ್ಎಫ್ ನ್ನು ನಿಯೋಜಿಸಲಾಗಿದೆ.

ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ ಎಂದು ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿ ಪ್ರಸಾದ್ ಅವರು ತಿಳಿಸಿದ್ದಾರೆ.

ಜೊತೆಗೆ ಮೇ.13 ರಂದು ಮತ ಎಣಿಕೆ ನಡೆಯಲಿರುವ ಹಿನ್ನೆಲೆ, ಮುಕ್ತ, ಶಾಂತಿಯುತ ಮತ್ತು ನ್ಯಾಯಸಮ್ಮತ ಮತ ಎಣಿಕೆ ನಡೆಸಲು ಜಿಲ್ಲೆಯಾದ್ಯಂತ ಮದ್ಯ ಸಾಗಾಣಿಕೆ, ವಿತರಣೆ ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.

ಈ ಕುರಿತಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್.ಲತಾ ಅವರು ಆದೇಶದ ಮೇರೆಗೆ, ಮೇ.13 ರಂದು ಬೆಳಗ್ಗೆ 6.00 ಗಂಟೆಯಿಂದ ಮೇ 14ರ ಬೆಳಿಗ್ಗೆ 6.00 ಗಂಟೆಯವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಮದ್ಯ ಸಾಗಾಣಿಕೆ, ವಿತರಣೆ ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.

Leave a Reply

Your email address will not be published. Required fields are marked *