ಮತ್ತೆ ಮುನ್ನೆಲೆಗೆ ಬಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರ ಸ್ಥಾನ ಕೂಗು

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಷಯವಾಗಿ ಚರ್ಚಿಸುತ್ತಾ, ದೊಡ್ಡಬಳ್ಳಾಪುರವನ್ನು ಕೇಂದ್ರ ಸ್ಥಾನವಾಗಿಸಿಕೊಂಡು ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಒಳಗೊಂಡಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂಬ ಹೆಸರನ್ನು ಉಳಿಸಿಕೊಳ್ಳಲಾಯಿತು ಎಂದು ತಿಳಿಸಿರುತ್ತಾರೆ.

ಅವರು ಯಾವ ದೃಷ್ಟಿಕೋನದಿಂದ ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆಂದು ತಿಳಿದಿಲ್ಲ, ಆದರೆ ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರವನ್ನಾಗಿಸಬೇಕೆಂಬುದು ನಮ್ಮ ಬೇಡಿಕೆಯಾಗಿತ್ತು ಮತ್ತು ಇದಕ್ಕೆ ಈ ಹಿಂದಿನ ಸರ್ಕಾರವೂ ಸಹ ಒಪ್ಪಿಗೆ ಸೂಚಿಸಿತ್ತು ಈ ವಿಷಯವಾಗಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರು ಬಹಿರಂಗವಾಗಿಯೇ ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವ ಬಗ್ಗೆ ಅಧಿಕೃತ ಹೇಳಿಕೆಯನ್ನು ಸಹ ನೀಡಿದ್ದರು ಎಂದು ದೇವನಹಳ್ಳಿ ಮಾಜಿ ಶಾಸಕ ನಿಸರ್ಗ‌ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.

ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಎಲ್ಲ ಆಡಳಿತಾತ್ಮಕ ಕಚೇರಿಗಳು ದೇವನಹಳ್ಳಿಯಲ್ಲಿಯೇ ಇದ್ದು, ಭೌಗೋಳಿಕವಾಗಿಯೂ ಸಹ ದೇವನಹಳ್ಳಿ ಸೂಕ್ತ ಸ್ಥಳದಲ್ಲಿದೆ. ಇದೀಗ ಉಪಮುಖ್ಯಮಂತ್ರಿಗಳು ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿಸುವ ಬಗ್ಗೆ ಮಾತನಾಡಿರುವುದು ಸಮಂಜಸವಲ್ಲ ಮತ್ತು ಇದು ಜನತೆಯಲ್ಲಿ ಗೊಂದಲವನ್ನುಂಟು ಮಾಡಲಿದ್ದು ಈ ಬಗ್ಗೆ ಉಪಮುಖ್ಯಮಂತ್ರಿಗಳು ಕೂಡಲೇ ಸ್ಪಷ್ಟನೆಯನ್ನು ನೀಡಬೇಕೆಂದು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *