ಕಳೆದ ಎರಡೂವರೆ ವರ್ಷಗಳಿಂದ ಕಾಂಗ್ರೆಸ್ ಆಡಳಿತದ ತೆಕ್ಕೆಯಲ್ಲಿದ್ದ ಮಜರಾಹೊಸಹಳ್ಳಿ ಗ್ರಾಮ ಪಂಚಾಯತಿ ಈ ಬಾರಿ ರಾಜಕೀಯ ಬದಲಾವಣೆಗಳಿಂದ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದಿದೆ. ಒಟ್ಟು 18 ಸದಸ್ಯ ಬಲವನ್ನು ಹೊಂದಿರುವ ಮಜರಾಹೊಸಹಳ್ಳಿ ಗ್ರಾ.ಪಂಗೆ ಶುಕ್ರವಾರ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ವೀರಾಪುರ ವಾರ್ಡ್ ನ ವಿಜಯಕುಮಾರ್ ಮತ್ತು ಗಿರೀಶ್ ನಾಮಪತ್ರ ಸಲ್ಲಿಸಿದ್ದರು. 11 ಮತಗಳನ್ನು ಪಡೆದ ಬಿಜೆಪಿ ಬೆಂಬಲಿತ ಸದಸ್ಯ ವಿಜಯಕುಮಾರ್ ಗೆ ವಿಜಯಲಕ್ಷ್ಮಿ ಒಲಿದಳು. ೦2 ಮತ ಪಡೆದ ಗಿರೀಶ್ ಸೋಲುಂಡರು.
ಉಪಾಧ್ಯಕ್ಷರಾಗಿ ಜಿಂಕೆಬಚ್ಚಹಳ್ಳಿ ವಾರ್ಡ್ ನ ಲಕ್ಷ್ಮಮ್ಮ ಗೆಲುವು ಸಾಧಿಸಿದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಶಾಸಕ ಧೀರಜ್ ಮುನಿರಾಜು, ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್, ಹಿರಿಯ ಮುಖಂಡ ತಿ.ರಂಗರಾಜು, ತಾಲ್ಲೂಕು ಬಿಜೆಪಿ ಅಧ್ಯಕ್ಷ ನಾಗೇಶ್ ಅಭಿನಂದಿಸಿದರು.
ಬಳಿಕ ಮಾತನಾಡಿದ ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್ ಈ ಭಾಗದಲ್ಲಿ ಬಿಜೆಪಿ, ಕಾಂಗ್ರೆಸ್, ದಳದ ಮೂವರು ಸಮಾನಮನಸ್ಕರಾಗಿ ಕೆಲಸ ಮಾಡುತ್ತೇವೆ. ಕಳೆದ ಎರಡು ಬಾರಿ ಅವಿರೋಧ ಆಯ್ಕೆ ಮಾಡಲಾಗಿತ್ತು. ಈ ಬಾರಿಯೂ ಅವಿರೋಧ ಆಯ್ಕೆ ಆಗುವ ಸಂಭವವಿತ್ತು. ಕೆಲವರ ವೈಯಕ್ತಿಕ ದುರುದ್ದೇಶದಿಂದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ್ದರು. ರಾಜಕೀಯದಲ್ಲಿ ಸಮಯ ಸಾಧಕರು ಇರುತ್ತಾರೆ. ಈ ಭಾಗದಲ್ಲಿ ಯಾವುದೇ ಪಕ್ಷ, ಜಾತಿ ಮುಖ್ಯವಲ್ಲ. ಹಿರಿಯ ಮುಖಂಡರಾದ ರಂಗರಾಜು ಅವರ ಮಾರ್ಗದರ್ಶನದಲ್ಲಿ ಉತ್ತಮ ಆಡಳಿತ ನಡೆಯುತ್ತಿದೆ. ಶಾಸಕ ಧೀರಜ್ ಮುನಿರಾಜು ಪರವಾಗಿ ನಾವಿದ್ದೀವಿ, ಯಾವುದೇ ಅಕ್ರಮ, ಭ್ರಷ್ಟಾಚಾರಗಳಿಗೆ ಅವಕಾಶ ಇಲ್ಲದಂತೆ ಇಲ್ಲಿನ ಸದಸ್ಯರು ಪ್ರಾಮಾಣಿಕವಾಗಿ ಕೆಲಸ ಮಾಡಲಿ. ಬಿಜೆಪಿ ಬೆಂಬಲಿತ ಅಧ್ಯಕ್ಷ, ಉಪಾಧ್ಯಕ್ಷರಿಗೆ ಮತ ಹಾಕಿದ ಸದಸ್ಯರಿಗೆ ಧನ್ಯವಾದಗಳು ಎಂದರು.
ಹಿರಿಯ ಮುಖಂಡ ತಿ.ರಂಗರಾಜು ಮಾತನಾಡಿ, ರಾಜಕೀಯದಲ್ಲಿ ಅದಲು ಬದಲು ಆಗುತ್ತಿರುತ್ತದೆ. ಬದಲಾವಣೆ ಆಗುವುದು ಸಹಜ. ಮಾಜಿ ಶಾಸಕ ವೆಂಕಟರಮಣಯ್ಯರ ದುರಹಂಕಾರ ಮತ್ತು ದುರಾಡಳಿತದಿಂದ ಕಾಂಗ್ರೆಸ್ ಪಕ್ಷ ನೆಲಕಚ್ಚುವಂತೆ ಮಾಡಿ ಹೋಗಿದ್ದಾರೆ. ನೂತನ ಅಧ್ಯಕ್ಷ, ಉಪಾಧ್ಯಕ್ಷರು ಧ್ವನಿ ಇಲ್ಲದವರ ಪರವಾಗಿ ಕೆಲಸ ಮಾಡಲಿ. ಹಿಂದಿನಿಂದಲೂ ಮಜರಾಹೊಸಹಳ್ಳಿ ಗ್ರಾ.ಪಂ ಬಡವರ ಪರವಾಗಿ ನಿಂತಿದೆ. ಸಾಮಾಜಿಕವಾಗಿ, ಆರ್ಥಿಕವಾಗಿ, ಹಿಂದುಳಿದವರ ಪರವಾಗಿ ಪಕ್ಷಾತೀತವಾಗಿ ಕೆಲಸ ಮಾಡುವಂತೆ ಕಿವಿಮಾತು ಹೇಳಿದರು.
ನೂತನ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ, ಹಿರಿಯ ಮುಖಂಡರಾದ ರಂಗರಾಜು, ಶಾಸಕ ಧೀರಜ್ ಮುನಿರಾಜು ಬಿ.ಸಿ.ಆನಂದ್ ಕುಮಾರ್ ಅವರ ಸಹಕಾರದಿಂದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಗ್ರಾಮ.ಪಂಚಾಯತಿಯ ಎಲ್ಲಾ ಸದಸ್ಯರೊಂದಿಗೆ ಪಕ್ಷಾತೀತವಾಗಿ ಕೆಲಸ ಮಾಡುತ್ತೇನೆ. ಮೂಲಭೂತ ಸೌಕರ್ಯಗಳು ಹಾಗೂ ಈ ಭಾಗದ ಕೆರೆಗಳ ಕಲುಷಿತ ವಿರುದ್ಧ ಹೋರಾಟ ಮಾಡಲಾಗುವುದು ಎಂದರು.
ಈ ವೇಳೆ ಮುಖಂಡರಾದ ಬಿ.ಟಿ.ಶ್ರೀನಿವಾಸ್ ಮೂರ್ತಿ, ಆದಿತ್ಯ ನಾಗೇಶ್, ಅಂಬರೀಶ್, ಪಿಳ್ಳೇಗೌಡ, ಲಕ್ಷ್ಮಿ ನಾರಾಯಣ, ಹೊಸಹುಡ್ಯ ಆನಂದ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.