ತಾಲೂಕಿನ ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ 17 ಸದಸ್ಯರ ಬಲ ಹೊಂದಿದ್ದು, ಸರ್ವ ಸದಸ್ಯರ ಒಮ್ಮತದಿಂದ ಅವಿರೋಧವಾಗಿ ಮಾರಪ್ಪನವರನ್ನು ಪ್ರಭಾರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಪ್ರಭಾರ ಅಧ್ಯಕ್ಷರಿಗೆ ಸದಸ್ಯರು ಮತ್ತು ಸ್ಥಳೀಯ ಮುಖಂಡರು ಮಾಲಾರ್ಪಣೆ ಮಾಡಿ ಸಿಹಿ ಹಂಚುವ ಮೂಲಕ ಅಭಿನಂದಿಸಿದರು.
ಮಾಧ್ಯಮದವರೊಂದಿಗೆ ಪ್ರಭಾರ ಅಧ್ಯಕ್ಷ ಮಾರಪ್ಪ ಮಾತನಾಡಿ, ನಮ್ಮ ಪಂಚಾಯತಿಯ ಸರ್ವ ಸದಸ್ಯರು ಯಾವುದೇ ಪಕ್ಷ ಬೇಧವಿಲ್ಲದೆ ಅವಿರೋಧವಾಗಿ ನನ್ನನ್ನು ಪ್ರಭಾರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಅವರೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನನಗೆ ವಹಿಸಿರುವ ಜವಾಬ್ಧಾರಿಯನ್ನು ಯಾವುದೇ ಪಕ್ಷಬೇಧ ಮಾಡದೆ ಪಂಚಾಯತಿಯ ಸರ್ವತೋಮುಖ ಅಭಿವೃದ್ಧಿಗೆ ನಿಷ್ಠೆಯಿಂದ ಶ್ರಮಿಸುತ್ತೇನೆ ಎಂದರು.
ಈ ಹಿಂದೆ ನಾನು ಗ್ರಾಮ ಪಂಚಾಯತಿ ಸದಸ್ಯನಾಗಿ, ಉಪಾಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸಿದ್ದು, ಹಳೆಯ ಅನುಭವಗಳು ಅಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸಲು ಮತ್ತಷ್ಟು ಶಕ್ತಿ ತುಂಬಲಿವೆ. ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಕಾರ್ಖಾನೆಗಳಿದ್ದು , ಸ್ಥಳೀಯ ಕಾರ್ಖಾನೆಗಳಿಂದ ನಮಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಪ್ರಮುಖವಾಗಿ ಪರಿಸರ ಮಾಲಿನ್ಯ, ಜಲ ಮೂಲಗಳ ಮಾಲಿನ್ಯ ನಿರಂತರವಾಗಿ ಕಾಡುತ್ತಿರುವ ಸಮಸ್ಯೆಯಾಗಿದೆ. ಈ ಕುರಿತು ಗ್ರಾಮ ಮಟ್ಟದಿಂದ ರಾಜ್ಯಮಟ್ಟದವರೆಗೂ ನಾವು ನಿರಂತರ ಹೋರಾಟ ನಡೆಸುತ್ತಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ದೊಡ್ಡತುಮಕೂರು ಪಂಚಾಯಿತಿ ಹಾಗೂ ಮಜರಾಹೊಸಹಳ್ಳಿ ವ್ಯಾಪ್ತಿಯ ಗ್ರಾಮಗಳಿಗೆ ಅರಳುಮಲ್ಲಿಗೆ ಪಂಚಾಯಿತಿ ವ್ಯಾಪ್ತಿಯಿಂದ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಕಾಮಗಾರಿ ಚಾಲ್ತಿಯಲ್ಲಿದ್ದು, ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದೇ ಮೊದಲ ಆದ್ಯತೆಯಾಗಿದೆ ಎಂದರು.
ಪ್ರಭಾರ ಅಧ್ಯಕ್ಷರಿಗೆ ಸ್ಥಳೀಯ ಮುಖಂಡರಾದ ತಿ.ರಂಗರಾಜು, ಬಮೂಲ್ ನಿರ್ದೇಶಕ ಬಿ ಸಿ ಆನಂದ್ ಕುಮಾರ್, ಸ್ಥಳೀಯ ಮುಖಂಡ ಬಿ ಎಚ್ ಕೆಂಪಣ್ಣ, ಕಾಂಗ್ರೆಸ್ ಮುಖಂಡ ಆದಿತ್ಯ ನಾಗೇಶ್, ಮುಖಂಡ ಸಂದೇಶ್ ಸೇರಿದಂತೆ ಹಲವು ಗಣ್ಯರು ಶುಭಕೋರಿದ್ದಾರೆ.