
ದೊಡ್ಡಬಳ್ಳಾಪುರ ತಾಲೂಕಿನ ಹಾದ್ರೀಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು.
ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಚ್.ಜಿ.ಸತೀಶ್ ಕುಮಾರ್, ಸದಸ್ಯರಾದ ದೇವರಾಜ್, ಶಿಲ್ಪ.ಜಿ, ಪಿಡಿಒ ಎಸ್. ನಂದಿನಿ, ಕಾರ್ಯದರ್ಶಿ ಮರಿಸಿದ್ದಮ್ಮ, ಗ್ರಾಮ ಪಂಚಾಯ್ತಿ ಸಿಬ್ಬಂದಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಹನುಮಂತರಾಜು, ಶಾಲೆಯ ಮುಖ್ಯಶಿಕ್ಷಕ ಎ.ಪಿ.ವಿರೂಪಾಕ್ಷಯ್ಯ, ಶಾಲಾ ಮಕ್ಕಳು ಭಾಗಿಯಾಗಿದ್ದರು.
ರಾಷ್ಟ್ರಗೀತೆ, ಭಗವದ್ಗೀತೆ, ಸಂವಿಧಾನ ಪ್ರಸ್ತಾವನೆ ಓದುವ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ಶಾಲಾ ಮಕ್ಕಳೇ ಅಧ್ಯಕ್ಷ, ಉಪಾಧ್ಯಕ್ಷರಾಗಿ ಗ್ರಾಮಸಭೆಯನ್ನು ನಡೆಸಿಕೊಟ್ಟರು.

ಈ ವೇಳೆ ಮಕ್ಕಳ ಹಕ್ಕುಗಳಾದ ಬದುಕುಳಿಯುವ ಹಕ್ಕು, ರಕ್ಷಣೆಯ ಹಕ್ಕು, ಭಾಗವಹಿಸುವ ಹಕ್ಕು, ಅಭಿವೃದ್ಧಿ ಹೊಂದುವ ಹಕ್ಕುಗಳ ಬಗ್ಗೆ ಸಂಪನ್ಮೂಲ ವ್ಯಕ್ತಿ ಬೈಲಾಂಜಿನಮೂರ್ತಿ ಸಂಕ್ಷಿಪ್ತವಾಗಿ ಮಕ್ಕಳಿಗೆ ತಿಳಿಸಿಕೊಟ್ಟರು.
ಮಕ್ಕಳು ಶಾಲಾ ಆಟದ ಮೈದಾನ ಮಾಡಿಕೊಡುವಂತೆ ಗ್ರಾಮಸಭೆಯಲ್ಲಿ ಅರ್ಜಿ ಮೂಲಕ ಮನವಿ ಮಾಡಿದರು. ಮಕ್ಕಳ ಮನವಿಯನ್ನು ಸ್ವೀಕರಿಸಿದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಪಿಡಿಒ ಶೀಘ್ರವಾಗಿ ಮಾಡಿಕೊಡುವ ಭರವಸೆ ನೀಡಿದರು.
ಕಾರ್ಯಕ್ರಮ ಕುರಿತು ಮಾತನಾಡಿದ ಪಿಡಿಒ ಎಸ್. ನಂದಿನಿ, ಪೋಷಕರು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. ಕಷ್ಟಪಟ್ಟು, ಹೊಟ್ಟೆ ಬಟ್ಟೆ ಕಟ್ಟಿ ಓದಿಸುವ ತಂದೆ-ತಾಯಿಗಳಿಗೆ ಮಕ್ಕಳು ಚೆನ್ನಾಗಿ ಓದಿ ಒಳ್ಳೆ ಹೆಸರು ತರಬೇಕು ಎಂದರು. ಇದೇ ವೇಳೆ ಮೂಲಭೂತ ಹಕ್ಕುಗಳ ಬಗ್ಗೆ ತಿಸಿಸಿದರು.