Categories: ಶಿಕ್ಷಣ

ಮಕ್ಕಳ ಪರೀಕ್ಷಾ ಸಿದ್ಧತೆಯಲ್ಲಿ ಪೋಷಕರ ಪಾತ್ರ ಹೇಗಿರಬೇಕು……?

ಪರೀಕ್ಷೆಗಳು ಕೆಲವೇ ತಿಂಗಳುಗಳಲ್ಲಿ ಸಾಲು ಸಾಲಾಗಿ ಪ್ರಾರಂಭವಾಗುತ್ತಿವೆ. ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ಸಾಮಾನ್ಯವಾಗಿ ಮಕ್ಕಳು ಒತ್ತಡವನ್ನು ಅನುಭವಿಸುತ್ತಾರೆ. ಪರಿಣಾಮವಾಗಿ ಮಕ್ಕಳಲ್ಲಿ ತಲೆನೋವು, ನಿದ್ರಾಹೀನತೆ, ಪರೀಕ್ಷಾ ಭಯ, ಅಧ್ಯಯನದಲ್ಲಿ ನಿರಾಸಕ್ತಿ, ಓದುವುದನ್ನು ಮರೆಯುವುದು, ಅಜೀರ್ಣ, ಪರೀಕ್ಷಾ ವೈಫಲ್ಯದ ಭಯ, ಮುಂತಾದ ಸಮಸ್ಯೆಗಳು ಕಂಡುಬರುತ್ತವೆ. ಪರೀಕ್ಷಾ ಆತಂಕ ಸ್ಥಿತಿಯಲ್ಲಿ ಮಕ್ಕಳ ಮನಸ್ಸು ಮಾನಸಿಕವಾಗಿ ಖಿನ್ನತೆಗೆ ಒಳಗಾಗುವುದರಿಂದ ಪೋಷಕರ ಸಹಾಯವನ್ನು ಬಯಸುತ್ತದೆ. ಆದಕಾರಣ ಪರೀಕ್ಷಾ ಸಿದ್ಧತೆ ಸಂದರ್ಭದಲ್ಲಿ ಮಕ್ಕಳಿಗೆ ಪೋಷಕರ ಭಾವನಾತ್ಮಕ ಬೆಂಬಲ, ಪ್ರೇರಣೆ ಮತ್ತು ಸೂಕ್ತ ಮಾರ್ಗದರ್ಶನ ಅತ್ಯವಶ್ಯಕ.

ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡುವುದು, ಸಕಾರಾತ್ಮಕ ಬೆಳವಣಿಗೆಗೆ ಉತ್ತೇಜಿಸುವುದು, ಅಗತ್ಯ ಪ್ರೇರಣೆ ಮತ್ತು ಮಾರ್ಗದರ್ಶನ ನೀಡುವುದು, ಮಕ್ಕಳನ್ನು ಉತ್ತಮ ಜೀವನಕ್ಕೆ ಸಿದ್ಧಪಡಿಸುವುದು ಪೋಷಕರ ಜವಾಬ್ದಾರಿಯಾಗಿರುತ್ತವೆ. ಪೋಷಕರು ಮಕ್ಕಳಿಗೆ ಆಹಾರ ಮತ್ತು ವಸತಿಯಂತಹ ಮೂಲಭೂತ ಆರೈಕೆ ಒದಗಿಸುವುದರ ಜೊತೆಗೆ ಭಾವನಾತ್ಮಕ ಆರೈಕೆಯನ್ನು ಒದಗಿಸಬೇಕು. ಮಕ್ಕಳ ಕಲಿಕೆ ಮತ್ತು ಬೌದ್ಧಿಕ ಬೆಳವಣಿಗೆಗೆ ಬೆನ್ನಲುಬಾಗಿ ನಿಂತು ಪ್ರೋತ್ಸಾಹ ನೀಡಬೇಕು. ಈ ಹಿನ್ನೆಲೆಯಲ್ಲಿ ಮಕ್ಕಳು ಪರೀಕ್ಷಾ ಸಿದ್ಧತೆಯನ್ನು ನಡೆಸುವ ಸಂದರ್ಭಗಳಲ್ಲಿ ಪೋಷಕರು ಕೆಳಕಂಡ ರೀತಿಯಲ್ಲಿ ಸಮರ್ಥವಾದ ಪಾತ್ರವನ್ನು ನಿರ್ವಹಿಸಬೇಕು.

ಆಹಾರ ಮತ್ತು ಆರೋಗ್ಯದ ಬಗೆಗೆ ಕಾಳಜಿ ವಹಿಸುವುದು,
ಮಕ್ಕಳು ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಸದೃಢ ದೈಹಿಕ ಮತ್ತು ಮಾನಸಿಕ ಆರೋಗ್ಯ ಅತ್ಯಗತ್ಯ. ಮಕ್ಕಳು ಪ್ರತಿನಿತ್ಯ ಸುಮಾರು 8 ಗಂಟೆಗಳ ಕಾಲ ಆರೋಗ್ಯಕರವಾದ ನಿದ್ರೆಯನ್ನು ಮಾಡುವಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಜೀರ್ಣವಾಗುವಂತಹ ಸೊಪ್ಪು, ತರಕಾರಿ, ಹಣ್ಣುಗಳು ಹಾಗೂ ಸಮತೋಲನ ಆಹಾರವನ್ನು ನೀಡಬೇಕು. ಯೋಗ, ಧ್ಯಾನ, ಪ್ರಾಣಾಯಾಮ ಮತ್ತು ನಡಿಗೆ ಮುಂತಾದ ಆರೋಗ್ಯಕರ ಕ್ರಿಯಾಚಟುವಟಿಕೆಗಳಿಂದ ಮನಸ್ಸು ಮತ್ತು ದೇಹ ಕ್ರಿಯಾಶೀಲವಾಗಿ ಮತ್ತು ಆರೋಗ್ಯವಾಗಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಮಕ್ಕಳಿಗೆ ಪೋಷಕರು ಅರ್ಥಮಾಡಿಸಿ ಆರೋಗ್ಯಕರ ಕ್ರಿಯಾಚಟುವಟಿಕೆಗಳಲ್ಲಿ ಪ್ರತಿನಿತ್ಯ ತೊಡಗಿಕೊಳ್ಳುವಂತೆ ನೋಡಿಕೊಳ್ಳಬೇಕು. ಈ ರೀತಿ ಪೋಷಕರು ಮಕ್ಕಳ ಆಹಾರ ಮತ್ತು ಆರೋಗ್ಯದ ಬಗೆಗೆ ಕಾಳಜಿವಹಿಸಿದಾಗ ಮಕ್ಕಳು ಆರೋಗ್ಯಪೂರ್ಣರಾಗಿ ಪರೀಕ್ಷೆಯನ್ನು ಯಶಸ್ವಿಯಾಗಿ ಬರೆಯಲು ಸಾಧ್ಯವಾಗುತ್ತದೆ.
ಮಕ್ಕಳ ಸಾಮರ್ಥ್ಯಕ್ಕನುಗುಣವಾಗಿ ಗುರಿ ನಿಗದಿಪಡಿಸಬೇಕು.

ಪ್ರತಿಯೊಂದು ಮಗುವು ತನ್ನದೇ ಆದ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿರುತ್ತದೆ. ಆ ಸಾಮರ್ಥ್ಯಕ್ಕನುಗುಣವಾಗಿ ವೈಯಕ್ತಿಕ ಮಟ್ಟದ ಸಾಧನೆಯನ್ನು ಮಾಡುತ್ತದೆ ಎಂಬುದನ್ನು ಪೋಷಕರು ಮೊದಲು ಅರ್ಥಮಾಡಿಕೊಳ್ಳಬೇಕು. ಮಕ್ಕಳ ಸಾಮರ್ಥ್ಯಕ್ಕೂ ಮೀರಿದ ಅಸಾಧ್ಯವಾದ ಗುರಿಗಳನ್ನು ಮಕ್ಕಳಿಗೆ ನಿಗದಿಪಡಿಸಿದರೆ ಮಕ್ಕಳಲ್ಲಿ ಮಾನಸಿಕ ಒತ್ತಡ ಉಂಟಾಗುತ್ತದೆ. ಆದಕಾರಣ ಪೋಷಕರು ಮಕ್ಕಳು ಸಾಧಿಸಲು ಸಾಧ್ಯವಾಗುವಂತಹ ನೈಜ ಗುರಿಗಳನ್ನು ನಿಗಧಿಪಡಿಸಬೇಕು.

ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಕೆ ಮಾಡಬಾರದು

ಬಹುಪಾಲು ಪೋಷಕರು ತಮ್ಮ ಮಕ್ಕಳನ್ನು ಒಡಹುಟ್ಟಿದವರೊಂದಿಗೆ, ನೆರೆಹೊರೆಯ ಮಕ್ಕಳೊಂದಿಗೆ, ಮತ್ತು ಸಂಬಂಧಿಕರ ಮಕ್ಕಳೊಂದಿಗೆ ಹೋಲಿಸುವುದನ್ನು ಸಾಮಾನ್ಯವಾಗಿ ಕಾಣುತ್ತೇವೆ. ಉದಾಹರಣೆಗೆ ಪಕ್ಕದ ಮನೆಯ ಹುಡುಗ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಶೇ. 90 ಅಂಕಗಳನ್ನು ಗಳಿಸಿದ್ದಾನೆ. ನೀನು ಆತನಿಗಿಂತ ಹೆಚ್ಚು ಅಂಕಗಳನ್ನು ಗಳಿಸಬೇಕು ಎಂದು ಮಕ್ಕಳಿಗೆ ಒತ್ತಡವನ್ನು ಉಂಟುಮಾಡಬಾರದು. ಪ್ರತಿಯೊಂದು ಮಗುವು ಅನನ್ಯತೆಯನ್ನು ಹೊಂದಿರುತ್ತದೆ ಮತ್ತು ವ್ಯಕ್ತಿ ಭಿನ್ನತೆಗಳಿರುತ್ತವೆ ಎಂಬುದನ್ನು ಪೋಷಕರು ಅರ್ಥಮಾಡಿಕೊಳ್ಳಬೇಕು. ತಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಕೆ ಮಾಡುವ ಮೂಲಕ ಆತ್ಮವಿಶ್ವಾಸವನ್ನು ಕುಗ್ಗಿಸಬಾರದು.

ಪೋಷಕರು ನಕಾರಾತ್ಮಕವಾಗಿ ವರ್ತಿಸಬಾರದು
ಪೋಷಕರು ಮಕ್ಕಳ ಸಾಮರ್ಥ್ಯಗಳ ಬಗ್ಗೆ ನಕಾರಾತ್ಮಕವಾಗಿ ಮಾತನಾಡಬಾರದು. ಪೋಷಕರು ಮಕ್ಕಳಿಗೆ ಸಾಮಾನ್ಯವಾಗಿ ಈ ರೀತಿಯ ನಕಾರಾತ್ಮಕ ಹೇಳಿಕೆಗಳನ್ನು ನೀಡುವುದನ್ನು ಕಾಣುತ್ತೇವೆ. ‘ಈ ಪರೀಕ್ಷೆಯು ನಿನ್ನ ಜೀವನವನ್ನು ನಿರ್ಧರಿಸುತ್ತದೆ’ ‘ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಗಳಿಸಿದರೆ ಜೀವನದಲ್ಲಿ ನೀನು ಪ್ರಯೋಜನಕ್ಕೆ ಬರುವುದಿಲ್ಲ’ ‘ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಗಳಿಸಿದರೆ ಸಮಾಜದಲ್ಲಿ ನಿನ್ನಿಂದಾಗಿ ನಮಗೆ ಗೌರವ ಕಡಿಮೆಯಾಗುತ್ತದೆ’. ಈ ರೀತಿ ನಕಾರಾತ್ಮಕವಾಗಿ ವರ್ತಿಸುವುದರಿಂದ ಮಕ್ಕಳ ಮನಸ್ಸಿನಲ್ಲಿ ಪರೀಕ್ಷೆಯ ಬಗೆಗೆ ಆತಂಕ ಉಂಟಾಗುತ್ತದೆ. ಆದಕಾರಣ ಪೋಷಕರು ಮಕ್ಕಳಲ್ಲಿ ಅನಗತ್ಯವಾಗಿ ಆತಂಕವನ್ನು ಉಂಟುಮಾಡಬಾರದು.

ಪೋಷಕರು ಮಕ್ಕಳೊಂದಿಗೆ ಸಕಾರಾತ್ಮಕಾಗಿ ಮಾತನಾಡಬೇಕು. ‘ಶ್ರದ್ಧೆ ಮತ್ತು ಪರಿಶ್ರಮದಿಂದ ನಿರಂತರವಾಗಿ ಅಧ್ಯಯನ ಮಾಡು, ನಿನ್ನಲ್ಲಿ ಉತ್ತಮ ಸಾಮರ್ಥ್ಯವಿದೆ, ಉತ್ತಮವಾಗಿ ಫಲಿತಾಂಶ ಬರುತ್ತದೆ’ ಎಂಬ ಪ್ರೇರಣಾತ್ಮಕ ಮಾತುಗಳನ್ನು ಹೇಳುವ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು.
ಅಧ್ಯಯನಕ್ಕೆ ಪ್ರಶಾಂತವಾದ ವಾತವರಣವನ್ನು ಕಲ್ಪಿಸಿಕೊಡಬೇಕು.

ಮನೆಯು ಮಕ್ಕಳ ಅಧ್ಯಯನದ ಪ್ರಮುಖ ಸ್ಥಳವಾಗಿರುತ್ತದೆ. ಅಧ್ಯಯನದ ಸ್ಥಳವು ಅಧ್ಯಯನದ ಏಕಾಗ್ರತೆಗೆ ಭಂಗವನ್ನುಂಟುಮಾಡುವಂತಹ ಸನ್ನಿವೇಶಗಳಿಂದ ಮುಕ್ತವಾಗಿರಬೇಕು. ಮಕ್ಕಳು ಅಧ್ಯಯನ ಮಾಡುತ್ತಿರುವಾಗ ಜೋರಾದ ಶಬ್ದದೊಂದಿಗೆ ಟಿ.ವಿ. ನೋಡುವುದು, ಕುಟುಂಬದ ಸದಸ್ಯರು ಒಟ್ಟಿಗೆ ಕುಳಿತು ಹರಟೆ ಹೊಡೆಯುವುದು, ಪರೀಕ್ಷಾ ಸಂದರ್ಭಗಳಲ್ಲಿ ಮನೆಯಲ್ಲಿ ಪಾರ್ಟಿಗಳನ್ನು ಆಯೋಜಿಸುವುದು ಮುಂತಾದ ಸನ್ನಿವೇಶಗಳನ್ನು ಪೋಷಕರು ನಿಯಂತ್ರಿಸಿ ಮಕ್ಕಳ ಅಧ್ಯಯನಕ್ಕೆ ಪ್ರಶಾಂತವಾದ ವಾತಾವರಣವನ್ನು ಕಲ್ಪಿಸಿಕೊಡಬೇಕು. ಇದರಿಂದ ಮಕ್ಕಳು ಏಕಾಗ್ರತೆಯಿಂದ ಅಧ್ಯಯನ ಮಾಡಲು ಸಾಧ್ಯವಾಗುವುದರೊಂದಿಗೆ ಪರೀಕ್ಷೆಯಲ್ಲಿ ಹೆಚ್ಚಿನ ಫಲಿತಾಂಶವನ್ನು ಪಡೆಯಬಹುದು.

ಮಕ್ಕಳಿಗೆ ಪರೀಕ್ಷೆಯ ಉದ್ದೇಶವನ್ನು ಅರ್ಥಮಾಡಿಸಬೇಕು

ಪರೀಕ್ಷೆಗಳನ್ನು ನಡೆಸುವ ಉದ್ದೇಶ ಮಕ್ಕಳು ಆಯಾ ಶೈಕ್ಷಣಿಕ ವರ್ಷದಲ್ಲಿ ಆಯಾ ತರಗತಿಗೆ ಸಂಬಂಧಿಸಿದಂತೆ ವಿವಿಧ ವಸ್ತುವಿಷಯಗಳಲ್ಲಿ ಎಷ್ಟು ಕಲಿತಿರುತ್ತಾರೆ ಎಂಬುದನ್ನು ಮೌಲ್ಯಮಾಪನ ಮಾಡುವುದಾಗಿರುತ್ತದೆ ಎಂಬುದನ್ನು ಮಕ್ಕಳಿಗೆ ಅರ್ಥಮಾಡಿಸಬೇಕು.

ಪರೀಕ್ಷೆಗಳಲ್ಲಿ ಮಕ್ಕಳು ಒಂದು ವಿಷಯದಲ್ಲಿ ಹೆಚ್ಚು ಅಂಕಗಳಿಸಬಹುದು. ಮತ್ತೊಂದು ವಿಷಯದಲ್ಲಿ ಕಡಿಮೆ ಅಂಕಗಳಿಸಬಹುದು. ಕಡಿಮೆ ಅಂಕಗಳಿಸಿದ ವಿಷಯಕ್ಕೆ ಹೆಚ್ಚು ಒತ್ತುಕೊಟ್ಟು ಅಧ್ಯಯನ ಮಾಡಲು ಪೋಷಕರು ಮಾರ್ಗದರ್ಶನ ನೀಡಬೇಕು. ಜೀವನದ ಯಶಸ್ಸು ಅಂಕಗಳಿಂದ ಮಾತ್ರ ನಿರ್ಧಾರಿತವಾಗುವುದಿಲ್ಲ ಎಂಬ ವಾಸ್ತವಿಕತೆಯನ್ನು ಪೋಷಕರು ಅರಿತುಕೊಂಡು ಮಕ್ಕಳು ಪರೀಕ್ಷೆಯನ್ನು ಒತ್ತಡರಹಿತವಾಗಿ ಬರೆಯುವಂತೆ ಪ್ರೇರೇಪಿಸಬೇಕು.

ಪರೀಕ್ಷಾ ಯಶಸ್ಸಿನ ತಂತ್ರಗಳ ಕುರಿತು ಮಕ್ಕಳಿಗೆ ತಿಳಿಸುವುದು

ಮಕ್ಕಳು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ ಯಶಸ್ಸನ್ನು ಸಾಧಿಸಲು ಹಲವಾರು ತಂತ್ರಗಳಿರುತ್ತವೆ. ಅವುಗಳೆಂದರೆ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಂಗ್ರಹ ಮಾಡಿಕೊಂಡು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಅಭ್ಯಾಸ ಮಾಡುವುದು. ಮೂರು ಗಂಟೆಗಳ ನಿರ್ದಿಷ್ಟ ಅವಧಿಯಲ್ಲಿ ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ಸಮರ್ಪಕವಾಗಿ ಉತ್ತರಿಸುವ ಮೂಲಕ ಬರೆಯುವ ಸಾಮರ್ಥ್ಯವನ್ನು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವುದು. ಪ್ರಶ್ನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅಂಕಗಳಿಗೆ ಅನುಗುಣವಾಗಿ ಉತ್ತರಿಸುವ ಕೌಶಲವನ್ನು ಬೆಳೆಸಿಕೊಳ್ಳುವುದು, ಅಂದವಾದ ಬರವಣಿಗೆ, ಪ್ರಶ್ನೆಗೆ ತಕ್ಕಂತೆ ಸಮರ್ಪಕ ಉತ್ತರ ಮುಂತಾದ ಪರೀಕ್ಷಾ ಯಶಸ್ಸಿನ ತಂತ್ರಗಳನ್ನು ಮಕ್ಕಳಿಗೆ ತಿಳಿಸಿಕೊಡಬೇಕು.

ಮಕ್ಕಳ ಅಧ್ಯಯನ ಕುರಿತು ಶಿಕ್ಷಕರಿಂದ ಹಿಮ್ಮಾಹಿತಿ ಪಡೆಯುವುದು

ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ, ಶಾಲಾ ಹಾಜರಾತಿ, ತರಗತಿಯಲ್ಲಿ ಮಕ್ಕಳ ವರ್ತನೆಗಳು, ಕಲಿಕೆಗೆ ಸಂಬAಧಿಸಿದ ಸಾಮರ್ಥ್ಯ ಅಥವಾ ನ್ಯೂನ್ಯತೆಗಳು, ಹಿನ್ನೆಡೆಗಳು, ಮುಂತಾದವುಗಳ ಕುರಿತಾಗಿ ಪರೀಕ್ಷಾ ಪೂರ್ವದಲ್ಲಿಯೇ ಶಿಕ್ಷಕರಿಂದ ಹಿಮ್ಮಾಹಿತಿ ಪಡೆಯಬೇಕು. ಒಂದುವೇಳೆ ಮಕ್ಕಳ ಅಧ್ಯಯನಕ್ಕೆ ಸಂಬಂಧಿಸಿದಂತೆ ಯಾವುದೇ ಕೊರತೆಗಳು ಅಥವಾ ಸಮಸ್ಯೆಗಳು ಕಂಡುಬಂದಲ್ಲಿ ತಕ್ಷಣ ಶಿಕ್ಷಕರೊಂದಿಗೆ ಚರ್ಚಿಸಿ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳುವುದು.

ಮನೆಯ ಅಧ್ಯಯನ ವೇಳಾಪಟ್ಟಿಯನ್ನು ಸಿದ್ಧಪಡಿಸಲು ಸಹಾಯ ಮಾಡುವುದು

ಪರೀಕ್ಷೆ ಸಿದ್ಧತೆ ನಡೆಸುವ ಸಂದರ್ಭದಲ್ಲಿ ಸಮಯ ನಿರ್ವಹಣೆ ಮಾಡುವುದು ವಿದ್ಯಾರ್ಥಿಗಳಿಗೆ ಸವಾಲಿನ ವಿಷಯವಾಗಿರುತ್ತದೆ. ಪ್ರತಿ ದಿನದ ಸಮಯವನ್ನು ಶಾಲೆ, ನಿದ್ರೆ, ಮನೆಪಾಠ, ಆಟ, ಮನರಂಜನೆ, ಪಠ್ಯೇತರ ಸೃಜನಾಶೀಲ ಚಟುವಟಿಗಳು, ಮತು ಹೋಮ್‌ವರ್ಕ್ ಮುಂತಾದ ಚಟುವಟಿಕೆಗಳಿಗೆ ವರ್ಗೀಕರಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಮನೆಯಲ್ಲಿ ನಿರ್ದಿಷ್ಟ ಸಮಯವನ್ನು ವಿವಿಧ ವಿಷಯಗಳ ಅಧ್ಯಯನಕ್ಕಾಗಿ ಮೀಸಲಿಡುವುದು ಅತ್ಯಗತ್ಯವಾಗಿರುತ್ತದೆ. ಆದ ಕಾರಣ ಮನೆಯ ಅಧ್ಯಯನ ವೇಳಾಪಟ್ಟಿಯನ್ನು ಸಿದ್ಧಪಡಿಸಲು ಮಕ್ಕಳಿಗೆ ಸಹಾಯ ಮತ್ತು ಮಾರ್ಗದರ್ಶನವನ್ನು ನೀಡುವುದು ಪೋಷಕರ ಆದ್ಯತೆಯಾಗಿರಬೇಕು.

ಪರೀಕ್ಷೆ ಭಯದ ಲಕ್ಷಣಗಳನ್ನು ಪ್ರಾರಂಭದಲ್ಲಿ ಗುರುತಿಸಿ ಆಪ್ತಸಮಾಲೋಚನೆ ಸೌಲಭ್ಯ ಒದಗಿಸುವುದು

ಪರೀಕ್ಷೆಯು ಕೆಲವೇ ವಾರಗಳು ಇವೆ ಎನ್ನುವ ಹಂತದಲ್ಲಿ ಮಕ್ಕಳು ಪರೀಕ್ಷಾ ಒತ್ತಡದಿಂದಾಗಿ ಬೆವರುವುದು, ನಿದ್ರಾಹೀನತೆ, ಒತ್ತಡ, ವಾಂತಿ, ಜ್ವರ, ಆಲಸ್ಯ, ಪರೀಕ್ಷಾ ಭಯ, ತಲೆನೋವು. ಹೊಟ್ಟೆನೋವು ಮುಂತಾದ ರೋಗ ಲಕ್ಷಣಗಳನ್ನು ವ್ಯಕ್ತಪಡಿಸುತ್ತಾರೆ. ಪೋಷಕರು ಈ ರೋಗ ಲಕ್ಷಣಗಳನ್ನು ಸೂಕ್ಷ್ಮವಾಗಿ ಗುರುತಿಸಿ ಅರ್ಥಮಾಡಿಕೊಳ್ಳಬೇಕು. ಅಗತ್ಯವಿದ್ದಲ್ಲಿ ಮನಶಾಸ್ತçಜ್ಞರ ಬಳಿ ಕರೆದುಕೊಂಡು ಹೋಗಿ ಸೂಕ್ತ ಆಪ್ತಸಮಾಲೋಚನೆಯ ಸೌಲಭ್ಯವನ್ನು ಒದಗಿಸಿಕೊಟ್ಟು ಮಕ್ಕಳನ್ನು ಪರೀಕ್ಷಾ ಭಯದಿಂದ ಮುಕ್ತರನ್ನಾಗಿ ಮಾಡಬೇಕು.

ಮಕ್ಕಳ ಪರೀಕ್ಷಾ ಸಿದ್ಧತೆಯ ಸಂದರ್ಭದಲ್ಲಿ ಪೋಷಕರು ಜವಾಬ್ದಾರಿಯುತ ಮತ್ತು ಸಮರ್ಥ ಪಾತ್ರವನ್ನು ನಿರ್ವಹಿಸುವುದರೊಂದಿಗೆ ಮಕ್ಕಳಿಗೆ ಸೂಕ್ತ ಭಾವನಾತ್ಮಕ ಬೆಂಬಲವನ್ನು ನೀಡಿದಾಗ ಮಕ್ಕಳು ಆತ್ಮವಿಶ್ವಾಸ ಮತ್ತು ದೃಢಸಂಕಲ್ಪದಿಂದ ಪರೀಕ್ಷೆಯನ್ನು ಬರೆದು ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ.

—-ಡಾ. ಮಂಜುನಾಥ. ಪಿ.

ಮನಃಶಾಸ್ತ್ರ ವಿಭಾಗ, ಕರಾಮುವಿ, ಮೈಸೂರು

ಮೋಬೈಲ್ ನಂಬರ್: 9535547702

Ramesh Babu

Journalist

Share
Published by
Ramesh Babu

Recent Posts

ಭಗತ್ ಸಿಂಗ್ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆ: ವೈದ್ಯ, ಪತ್ರಕರ್ತ, ಪೊಲೀಸ್, ಪೌರಕಾರ್ಮಿಕರಿಗೆ ಸನ್ಮಾನ

"77ನೇ ಗಣರಾಜ್ಯೋತ್ಸವ”ದ ಅಂಗವಾಗಿ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ…

14 hours ago

ಭಗತ್ ಸಿಂಗ್ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆ: ಪತ್ರಕರ್ತ, ಪೊಲೀಸ್, ಪೌರಕಾರ್ಮಿಕರು ಸೇರಿದಂತೆ ಇತರೆ ಸಾಧಕರಿಗೆ ಸನ್ಮಾನ

"77ನೇ ಗಣರಾಜ್ಯೋತ್ಸವ”ದ ಅಂಗವಾಗಿ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ…

16 hours ago

ಬೆಳಗಾವಿಯ ಚೋರ್ಲಾ ಘಾಟ್‌ನಲ್ಲಿ ₹400 ಕೋಟಿ ದರೋಡೆ ಪ್ರಕರಣ: ದಟ್ಟಾರಣ್ಯದ ಮೌನದಲ್ಲಿ ಅಡಗಿದ್ದ ಭೀಕರ ರಹಸ್ಯ..ಬೆಚ್ಚಿಬೀಳಿಸುವ ಪ್ರಮುಖ ಅಂಶಗಳು…ಇಲ್ಲಿವೆ ಓದಿ…

ಬೆಳಗಾವಿಯ ದಟ್ಟ ಅರಣ್ಯ ಪ್ರದೇಶದ ನಡುವೆ ಸಾಗುವ ಚೋರ್ಲಾ ಘಾಟ್‌ನ ರಸ್ತೆಗಳು ಸಾಮಾನ್ಯವಾಗಿ ಮೌನದಿಂದ ಕೂಡಿರುತ್ತವೆ. ಆದರೆ, ಆ ಮೌನದಲ್ಲೇ…

1 day ago

2026ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ: ಕರ್ನಾಟಕದ 8 ಮಂದಿಯು ಈ ನಾಗರಿಕ ಗೌರವಕ್ಕೆ ಭಾಜನ

2026ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟವಾಗಿದೆ. ಒಟ್ಟು 131 ಮಂದಿ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕದ 8 ಮಂದಿಯು ಈ…

1 day ago

ಹುಲುಕುಡಿ ವೀರಭದ್ರಸ್ವಾಮಿ ಮತ್ತು ಪ್ರಸನ್ನ ಭದ್ರಕಾಳಮ್ಮ ರಥೋತ್ಸವ

ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲುಕುಡಿ ವೀರಭದ್ರಸ್ವಾಮಿ ಕ್ಷೇತ್ರದಲ್ಲಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ವತಿಯಿಂದ ರಥಸಪ್ತಮಿ ಅಂಗವಾಗಿ ಇಂದು (ಜ.25) ವೀರಭದ್ರಸ್ವಾಮಿ ಮತ್ತು ಪ್ರಸನ್ನ…

2 days ago

ರಘುನಾಥಪುರ ಬಳಿ ಪಿಕಪ್ ವಾಹನ, ಆಟೋ ಹಾಗೂ ಬೈಕ್ ನಡುವೆ ಅಪಘಾತ: ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವು

ಪಿಕಪ್ ವಾಹನ, ಆಟೋ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ…

2 days ago